ಲಂಡನ್, ಆ 20 ಯುವ ವೇಗಿ ಜೊಫ್ರಾ ಆರ್ಚರ್ ಅವರು ಇನ್ನಷ್ಟು ಮಾರಕ ದಾಳಿ ನಡೆಸುವುದನ್ನು ಇನ್ನಷ್ಟು ನಿರೀಕ್ಷೆ ಮಾಡುತ್ತೇನೆಂದು ಹೇಳುವ ಮೂಲಕ ಇಂಗ್ಲೆಂಡ್ ಆಲ್ರೌಂಡರ್ ಬೆನ್ ಸ್ಟೋಕ್ಸ್ ಅವರು ಮೂರನೇ ಟೆಸ್ಟ್ ಪಂದ್ಯಕ್ಕೆ ಆಸ್ಟ್ರೇಲಿಯಾಗೆ ಎಚ್ಚರಿಕೆ ರವಾನಿಸಿದರು. ದಿ ಲಾಡ್ರ್ಸ ಅಂಗಳದಲ್ಲಿ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಜೊಫ್ರಾ ಆರ್ಚರ್ ಆಸ್ಟ್ರೇಲಿಯಾ ವಿರುದ್ಧ ಮಾರಕ ದಾಳಿ ನಡೆಸಿದ್ದರು. ಪಂದ್ಯ ಅಂತಿಮವಾಗಿ ಡ್ರಾ ಆಗಿದ್ದರೂ ಆರ್ಚರ್ 91 ರನ್ ಐದು ವಿಕೆಟ್ ಕಬಳಿಸಿದ್ದರು.
ಜೊಫ್ರಾ ಆರ್ಚರ್ ಅವರ ಸರಾಸರಿ 95ಮೈಲಿ ವೇಗವಾಗಿ ಬೌಲಿಂಗ್ ಮಾಡಿದ್ದರು. ಅಲ್ಲದೇ, ಎಸೆಯುತ್ತಿದ್ದ ಬೌನ್ಸರ್ಗಳು ಎಲ್ಲರ ಗಮನ ಸೆಳೆದಿತ್ತು. ಆಸ್ಟ್ರೇಲಿಯಾ ಬ್ಯಾಟ್ಸ್ಮನ್ಗಳು ಆರ್ಚರ್ ಎಸೆತಗಳನ್ನು ಎದುರಿಸುವಲ್ಲಿ ಹೆಣಗಾಡಿದ್ದರು. ಸ್ಟೀವನ್ ಸ್ಮಿತ್ ಅವರು ಎರಡು ಬಾರಿ ಆರ್ಚರ್ ಬೌನ್ಸ್ರ್ನಿಂದ ಹೊಡೆತ ತಿಂದಿದ್ದರು.
"ಜೊಫ್ರಾ ಆರ್ಚರ್ ಅವರು ಪಂದ್ಯದ ಬಹುದೊಡ್ಡ ಭಾಗ. ಅವರ ಆಕ್ರಮಣಕಾರಿ ಬೌಲಿಂಗ್ ಬ್ಯಾಟ್ಸ್ಮನ್ ಕ್ರೀಸ್ನಲ್ಲಿ ಗಟ್ಟಿಯಾಗಿ ನೆಲೆಯೂರಲು ಬಿಡುವುದಿಲ್ಲ. ಬೌನ್ಸರ್ ಅವರಿಗೆ ದೊಡ್ಡ ಅಸ್ತ್ರವಾಗಿದ್ದು, ಅದನ್ನು ಮುಂದುವರಿಸಲಿ" ಎಂದು ಸ್ಟೋಕ್ಸ್ ಹೇಳಿದ್ದಾರೆ.
ಲಾಡ್ರ್ಸ ಅಂಗಳದಲ್ಲಿ ನಡೆದ ಎರಡನೇ ಹಣಾಹಣಿಯಲ್ಲಿ ಜೊಫ್ರಾ ಆರ್ಚರ್ ಹಾಗೂ ಸ್ಟೀವನ್ ಸ್ಮಿತ್ ಅವರ ಆಟ ಪ್ರಮುಖ ಆಕರ್ಷಣೆಯಾಗಿತ್ತು. ಆರ್ಚರ್ ಅವರ ಬೌನ್ಸರ್ ಅನ್ನು ಹಿಮ್ಮೆಟ್ಟುವಲ್ಲಿ ಸ್ಮಿತ್ ವಿಫಲವಾಗಿ ಕೊರಳಿಗೆ ಚೆಂಡು ತಗುಲಿಸಿಕೊಂಡಿದ್ದರು. ಆದ್ದರಿಂದ ಅವರು ಕೊನೆಯ ದಿನವಾದ ಭಾನುವಾರ ಕಣಕ್ಕೆ ಇಳಿದಿರಲಿಲ್ಲ. ಗುರುವಾರ ಆರಂಭವಾಗುವ ಮೂರನೇ ಪಂದ್ಯಕ್ಕೂ ಸ್ಮಿತ್ ಅನುಮಾನವಾಗಿದೆ.