ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕಾತಿ: ಹೊಸ ನಿಯಮಾವಳಿಗಳೊಂದಿಗೆ ಅಧಿಸೂಚನೆ ಪ್ರಕಟ

ಬೆಂಗಳೂರು, ಜೂ.22, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರ ನೇಮಕಾತಿ ಸಂಬಂಧ ಗೆಜೆಟ್ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಪ್ರಕಟಿಸಿದೆ.ಅಧ್ಯಕ್ಷರು ಹಾಗೂ ಕಾರ್ಯಕಾರಿ ಸದಸ್ಯರ ನೇಮಕಕ್ಕೆ ಮುಖ್ಯಮಂತ್ರಿ ನೇತೃತ್ವದ ತ್ರಿಸದಸ್ಯ ಸಮಿತಿ‌ ರಚನೆ ಮಾಡಲಾಗಿದ್ದು, ಈ ಮೂಲಕ  ಹಾಲಿ ನಿಯಮಾವಳಿಗಳಿಗೆ ತಿಲಾಂಜಲಿ ನೀಡಿ ನೂತನ ನಿಯಮಾವಳಿಯನ್ನು ಸರ್ಕಾರ ರೂಪಿಸಿದೆ.ಪರಿಸರ  ವಿಜ್ಞಾನ, ಪರಿಸರ ಎಂಜಿನಿಯರಿಂಗ್ ಸ್ನಾತಕೋತ್ತರ ಪದವಿ, ಅಥವಾ ಅನ್ವಯಿಕ ವಿಜ್ಞಾನ  ಸೇರಿದಂತೆ ತತ್ಸಮಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ, ವಿಶ್ವ ವಿದ್ಯಾನಿಲಯದಲ್ಲಿ  ಪ್ರಾಧ್ಯಾಪಕರಾಗಿ, ಅಥವಾ ಆಡಳಿತದಲ್ಲಿ ವಿಭಾಗದಲ್ಲಿ ಕೆಲಸ ನಿರ್ವಹಣೆ ಮಾಡಿರುವವರನ್ನು ಕೂಡ ಹುದ್ದೆಗೆ ಆಯ್ಕೆ ಮಾಡುವ ಅವಕಾಶ ಕಲ್ಪಿಸಿ ಸರ್ಕಾರ ನಿಯಮ ರೂಪಿಸಿದೆ.

ಅಧ್ಯಕ್ಷರಾಗುವವರು 56 ವರ್ಷ ವಯೋಮಾನದವರಾಗಿರಬೇಕು. ಅಧ್ಯಕ್ಷರ ಆಯ್ಕೆಗಾಗಿ ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆಯು ಸಾರ್ವಜನಿಕವಾಗಿ ಅರ್ಜಿ ಆಹ್ವಾನಿಸಬೇಕು. ರಾಜ್ಯ ಮತ್ತು ರಾಷ್ಟ್ರಮಟ್ಟದ  ಪತ್ರಿಕೆಗಳಲ್ಲಿ ಅರ್ಜಿ ಆಹ್ವಾನಿಸಿರುವುದನ್ನು ಪ್ರಕಟಿಸಬೇಕು. ಆಯ್ಕೆ ಕಮಿಟಿ ಅರ್ಜಿಗಳನ್ನು ಹಾಗೂ ಅರ್ಹತೆಗಳ‌ನ್ನು‌ ಪರಿಶೀಲಿಸಿ ಅಧ್ಯಕ್ಷರ ಆಯ್ಕೆಯನ್ನು ಪ್ರಕಟಿಸಬೇಕು. ಅಭ್ಯರ್ಥಿ ಆಯ್ಕೆಗೆ ಸೂಕ್ತ ಕಾರಣಗಳ‌ನ್ನು ನೀಡಿ ಆಯ್ಕೆಯ ಮಾಹಿತಿಯನ್ನು ದಾಖಲಿಸಬೇಕು ಎಂಬ ನಿಯಮಗಳನ್ನು ರೂಪಿಸಲಾಗಿದೆ.ಸರ್ಕಾರವು ಸಂಸ್ಥೆಗೆ ಹಿರಿಯ ಐಎಎಸ್ ಸದಸ್ಯ ಕಾರ್ಯದರ್ಶಿಯನ್ನು ನೇಮಿಸಲು ಅವಕಾಶ ಕಲ್ಪಿಸಿದೆ.ಹಿಂದಿನ  ಸರ್ಕಾರಗಳು ಮಾಲಿನ್ಯ ನಿಯಂತ್ರಣ ಮಂಡಳಿಗೆ ರಾಜಕೀಯವಾಗಿ ಅಧ್ಯಕ್ಷರನ್ನು ನೇಮಕಗೊಳಿಸಿ  ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಗಳಿಂದ ಮುಖಭಂಗಕ್ಕೀಡಾಗಿತ್ತು. ಇದನ್ನು ತಪ್ಪಿಸಲು ಮಾರ್ಗಸೂಚಿಗಳನ್ನು ಪ್ರಕಟಿಸುವ ಮೂಲಕ ಕಾನೂನಿಗೆ ಅಡ್ಡಿ ಆತಂಕಗಳನ್ನು ನಿವಾರಿಸಿಕೊಳ್ಳಲು ಸರ್ಕಾರ ಮುಂದಾಗಿದೆ ಎನ್ನಲಾಗಿದೆ.