ಲೋಕದರ್ಶನ ವರದಿ
ಬೈಲಹೊಂಗಲ 28: ಉತ್ತರಪ್ರದೇಶ ಹಾಗೂ ಬಿಹಾರ ರಾಜ್ಯಗಳಿಂದ ವಲಸೆ ಬಂದು ಬೈಲಹೊಂಗಲದಲ್ಲಿ ಕ್ಷೌರಿಕ ವೃತ್ತಿ ಮಾಡುತ್ತಿರುವದರಿಂದ ಪಟ್ಟಣದಲ್ಲಿ ಅನಾದಿ ಕಾಲದಿಂದಲೂ ನಾವು ಕ್ಷೌರಿಕ ವೃತ್ತಿಗೆ ಹೊಡೆತ ಬೀಳುತ್ತಿದ್ದು ಇದನ್ನು ತಡೆಗಟ್ಟಬೇಕೆಂದು ಒತ್ತಾಯಿಸಿ ಯುಪಿ, ಬಿಹಾರಿ ಹಟಾವೋ, ಕರ್ನಾಟಕ ಕ್ಷೌರಿಕ ಬಚಾವೋ ಬೃಹತ್ ಪ್ರತಿಭಟನಾ ರ್ಯಾಲಿಯನ್ನು ತಾಲೂಕಾ ಶಿವಶರಣ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಸ್ಥೆ, ಸವಿತಾ ಸಮಾಜ ಸಂಘದ ಸಹಯೋಗದಲ್ಲಿ ನಡೆಸಿ, ಉಪವಿಭಾಗಾಧಿಕಾರಿಗಳಿಗೆ ಗುರುವಾರ ಸಮಾಜ ಭಾಂದವರು ಮನವಿ ಸಲ್ಲಿಸಿದರು.
ಸಮಾಜದ ಮುಖಂಡ ಸಂತೋಷ ಹಡಪದ ಮಾತನಾಡಿ, ಸುಮಾರು 12ನೇ ಶತಮಾನದ ಬಸವಾದಿ ಶರಣರ ಪೂರ್ವ ಕಾಲದಿಂದಲೂ ಈ ವೃತ್ತಿಯಲ್ಲಿ ತೋಡಗಿರುವ ಸಮಾಜ ಭಾಂದವರು ಇಂದು ಯಾವುದೋ ಬಂಡವಾಳ ಶಾಹಿಗಳ ಕುತಂತ್ರಕ್ಕೆ ಸಿಕ್ಕು ಒದ್ದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಸಮಾಜ ಉಳಿಯ ಬೇಕು ಸಮಾಜದ ವೃತ್ತಿ ಉಳಿಯಬೇಕು. ಸಮಾಜವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿ. ಇಂತಹ ನುಸುಳುಕೋರರೆ ನಮ್ಮ ರಾಜ್ಯಕ್ಕೆ ಮುಂದೆ ಮಾರಕವಾಗಬಹುದು. ಹಾಗಾಗಿ ನುಸುಳುಕೊರರು ತೆರೆದಿರುವ ಕ್ಷೌರಿಕ ಅಂಗಡಿಗಳನ್ನು ಮುಚ್ಚಿಸಬೇಕು. ಮುಂದೆಯು ತೆರೆಯದಂತೆ ನಿಗಾ ವಹಿಸಬೇಕು. ಚಿಕ್ಕ ಪ್ರಮಾಣದಲ್ಲಿರುವ ಸಮಾಜಕ್ಕೆ ಸರ್ಕಾರ ಬೆಂಬಲ ಕೊಡಬೇಕು. ಸಮಾಜದ ಮೇಲೆ ಆಗುತ್ತಿರುವ ಹೊರ ರಾಜ್ಯದ ಬಂಡವಾಳಶಾಹಿಗಳನ್ನು ತಡೆಯಬೇಕು. ಇಲ್ಲದಿದ್ದರೆ ರಾಜ್ಯಾದ್ಯಾಂತ ಬೃಹತ್ ಪ್ರತಿಭಟನೆ ಮಾಡಲಾಗುವುದು ಎಂದರು.
ಎಪಿಎಂಸಿ ಗಣಪತಿ ಗುಡಿಯಿಂದ ಪಾದಯಾತ್ರೆಯನ್ನು ನಡೆಸಲಾಯಿತು. ಬಸ್ ನಿಲ್ದಾಣ ಹಾಗೂ ಸಂಗೊಳ್ಳಿ ರಾಯಣ್ಣ ವೃತ್ತದದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು.
ಸುರೇಶ ಕಿತ್ತೂರ, ಬಸಪ್ಪ ಹಡಪದ, ರಮೇಶ ಹಡಪದ, ಅನೀಲ್ ಭಾಂವಿಹಾಳ, ಗುಂಡಪ್ಪ ಸನದಿ, ಬಸವರಾಜ ಹಡಪದ, ಲೋಕೆಶ ಹಡಪದ, ವಿನಾಯಕ ಹಡಪದ, ಮಹಾಂತೇಶ ಹಂಪನ್ನವರ, ರಾಜು ನಾವಿ, ರಾಘು ಹಂಪನ್ನವರ, ಕೃಷ್ಣಾ ಜಲ್ಲಾಪುರಂ, ಪುಂಡಲೀಕ ನಾರಾಯಣಪುರಂ, ಪುಂಡಲಿಕ ರಾಯಚೂರ, ಉಳವಪ್ಪ ಕರ್ನುಲ, ತಿರುಮಲ ಕರ್ನುಲ, ಪರುಷರಾಮ ಗದ್ವಾಲ್, ಗಿಡ್ಡಯ್ಯ ಬಂಕೂರ್, ನಾರಾಯಣ ರಾಯಚೂರ, ನಾಗರಾಜ ಲಕ್ಷ್ಮೀಪುರಂ, ತಾಲೂಕಿನ ವಿವಿದ ಹಳ್ಳಿಗಳ ಸಮಾಜದ ಭಾಂದವರು ಉಪಸ್ಥಿತರಿದ್ದರು.