ವೆಸ್ಕೊ ಹೆಸರಿನಲ್ಲಿ ಜಮೀನನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣದ ವಿರುದ್ಧ ಜಿಲ್ಲಾಧಿಕಾರಿಗೆ ಮನವಿ

ವೆಸ್ಕೊ ಹೆಸರಿನಲ್ಲಿ ಜಮೀನನ್ನು ಅತಿಕ್ರಮಿಸಿ ಕಟ್ಟಡ ನಿರ್ಮಾಣದ ವಿರುದ್ಧ ಜಿಲ್ಲಾಧಿಕಾರಿಗೆ ಮನವಿ  Appeal to the District Collector against encroachment on land and construction of building in the na


ಕಾರವಾರ 06: ದಾಂಡೇಲಿ ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಸೇವೆಯ ಹೆಸರಿನಲ್ಲಿ ಸ್ಥಳೀಯ ಕಾಗದ ಕಾರ್ಖಾನೆಯವರು ವೆಸ್ಕೊ ಹೆಸರಿನಲ್ಲಿ ನಗರದ ಬೆಲೆ ಬಾಳುವ ಜಮೀನನ್ನು ಅತಿಕ್ರಮಿಸಿ, ಅಂಗನವಾಡಿ ಹಾಗೂ ಇತರ ಕಟ್ಟಡಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ಕರ್ನಾಟಕ ಜೈ ಭೀಮ ಸಂಘಟನೆಯಿಂದ ಕಾರವಾರದಲ್ಲಿ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ ಅವರಿಗೆ ಅತಿಕ್ರಮಣ ತಡೆಯುವಂತೆ ಮನವಿ ಸಲ್ಲಿಸಿದ್ದಾರೆ.  ಕರ್ನಾಟಕ ಜೈ ಭೀಮ ಸಂಘಟನೆಯ ಜಿಲ್ಲಾಧ್ಯಕ್ಷ ಸಂಜಯ ಟಿ. ಕಾಂಬಳೆ ಹಾಗೂ ದಾಂಡೇಲಿ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶಿವಾನಂದ ಗಗ್ಗರಿ ಜಿಲ್ಲಾಧಿಕಾರಿಗಳನ್ನು ಕಂಡು ಅತಿಕ್ರಮಣ ಸಮಸ್ಯೆಯನ್ನು ವಿವರಿಸಿದರು. ರಾಜ್ಯ ಸರ್ಕಾರದ ನಿಯಮಾನುಸಾರ, ಯಾವುದೇ ಸ್ಥಳೀಯ ಸಂಸ್ಥೆಗೆ ಸೇರಿದ ಜಮೀನನ್ನು ಖಾಸಗಿ ಸಂಸ್ಥೆಗಳಿಗೆ ನೀಡುವಲ್ಲಿ ಮಾರ್ಗಸೂಚಿ ಮತ್ತು ವಿಲೇವಾರಿ ಪ್ರಕ್ರಿಯೆಗಳನ್ನು ಕಟ್ಟು ನಿಟ್ಟಾಗಿ ಪಾಲನೆಯಾಗುತ್ತಿಲ್ಲ. ಮೊದಲು ಖಾಸಗಿ ಸಂಸ್ಥೆಗೆ ಜಮೀನು ಹಂಚಿಕೆ ಮಾಡಲು ನಗರಾಡಳಿತ ಸರ್ಕಾರದ ಅನುಮೋದನೆ ಪಡೆದು, ಉಪ ನೊಂದಣಾಧಿಕಾರಿ ಕಛೇರಿಯಲ್ಲಿ ನೊಂದಾಯಿಸಬೇಕಾಗುತ್ತದೆ. ನಂತರ ಜಮೀನು ಪಡೆದ ಉದ್ದೇಶಕ್ಕೆ ಮಾತ್ರ ಜಮೀನು ಬಳಸಬೇಕೆಂಬ ನಿಯಮವಿದೆ ಎಂದು ಡಿಸಿಗೆ ಮನವರಿಕೆ ಮಾಡಿದರು.  

ಮಾರ್ಗಸೂಚಿಯಲ್ಲೇನಿದೆ ? : ಕರ್ನಾಟಕ ಪುರಸಭೆ ಕಾಯಿದೆ 1964 ರ ಕಲಂ 72 ರಡಿ ನಗರ ಸ್ಥಳೀಯ ಸಂಸ್ಥೆಗಳ ಸ್ವಾಮ್ಯದಲ್ಲಿರುವ ಜಮೀನುಗಳನ್ನು, ನಗರ ಸ್ಥಳೀಯ ಸಂಸ್ಥೆಗಳು ಸರ್ಕಾರದ ಪೂರ್ವಾನುಮೋದನೆಯೊಂದಿಗೆ ಮಾರಲು, ಗುತ್ತಿಗೆಗೆ ನೀಡಲು, ಹಸ್ತಾಂತರಿಸಲು ಹಕ್ಕನ್ನು ಪಡೆದಿದೆ. ಕರ್ನಾಟಕ ಮುನ್ಸಿಪಲ್ ಕಾರ​‍್ೊರೇಷನ್ ಕಾಯಿದೆ-1976 ರ ಕಲಂ 176 ರಡಿ ಮಗರ ಪಾಲಿಕೆಗಳು ಇಂತಹದೆ ಅಧಿಕಾರವನ್ನು ಹೊಂದಿವೆ. ವ್ಯಕ್ತಿಗಳಿಗೆ, ಸಂಘ ಸಂಸ್ಥೆಗಳಿಗೆ ಜಮೀನು ಮಂಜೂರು ಮಾಡುವ ಬಗ್ಗೆ ಸರ್ಕಾರದ ಅನುಮೋದನೆ ಕೋರಿ ನಗರ ಸ್ಥಳೀಯ ಸಂಸ್ಥೆಗಳಿಂದ ಪ್ರಸ್ತಾವನೆ ಗಳನ್ನು ಸರ್ಕಾರದಲ್ಲಿ ಸ್ವೀಕರಿಸಲಾಗುತ್ತಿದೆ. ಹೀಗೆ ಸ್ವೀಕರಿಸಿದ ನಂತರ ವ್ಯಕ್ತಿಗಳಿಗೆ, ಖಾಸಗಿ ಸಂಸ್ಥೆಗಳಿಗೆ ಉಪ ನೋಂದಣಾಧಿಕಾರಿಯವರ ಮಾರಾಟದ ಅಂಕಿ ಅಂಶಗಳ ಆಧಾರದ ಮೇಲೆ ಮತ್ತು ಕೆಲವು ಪ್ರಕರಣಗಳಲ್ಲಿ ರಿಯಾಯಿತಿ ದರದಲ್ಲಿ ಕನಿಷ್ಟ ದರದಲ್ಲಿ ಜಮೀನು ಮಂಜೂರಾತಿ ಮಾಡುವ ಬಗ್ಗೆ ಸರ್ಕಾರ ಪರಿಗಣಿಸುತ್ತದೆ. ಈ ಸಂಬಂಧ ಸರ್ಕಾರ 2003 ರಲ್ಲಿ ಆದೇಶ ಹೊರಡಿಸಿದೆ. ಆದರೆ ದಾಂಡೇಲಿ ನಗರಸಭೆ ಕಾಗದ ಕಾರ್ಖಾನೆಯವರು ವೆಸ್ಕೋ ಹೆಸರಿನಲ್ಲಿ ಸಿ.ಎಸ್‌.ಆರ್‌. ಅನುದಾನದಲ್ಲಿ ನಿರ್ಮಿಸುತ್ತಿರುವ ಕಟ್ಟಡಗಳಿಗೆ ಮಾರ್ಗಸೂಚಿಯ ಪ್ರಕಾರ ಸರ್ಕಾರದ ಅನುಮತಿ ಪಡೆಯದೆ ಹಾಗೂ ನಗರಸಭೆಯಲ್ಲಿ ಯಾವುದೇ ರೀತಿಯ ಮಂಜೂರಾತಿ ಪ್ರಕ್ರಿಯೆಗಳನ್ನು ಮಾಡದೇ ನೇರವಾಗಿ ಅತಿಕ್ರಮಣ ಮಾಡಿ ಬೆಲೆ ಬಾಳುವ ಜಮೀನನ್ನು ಕಬಳಿಸಲಾಗಿದೆ ಎಂದು ಆರೋಪಿಸಿದ್ದಾರೆ.  

ಸಿ.ಎಸ್‌.ಆರ್‌. ಯೋಜನೆಯಡಿ ಕೋಟ್ಯಾಂತರ ರೂಪಾಯಿ ಖರ್ಚುಮಾಡುತ್ತಿದ್ದು, ಇದನ್ನು ಕಾರ್ಮಿಕರ ನೆರವಿಗೆ ಬರುವಂತಹ ಯೋಜನೆಗಳಿಗೆ ಖರ್ಚು ಮಾಡಬೇಕು. ಕಾರ್ಮಿಕರ ಆರೋಗ್ಯ ಸುರಕ್ಷತೆಗೆ, ಇಎಸ್‌.ಐ ಅಭಿವೃದ್ದಿಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ ಬೇಕಾದ ಪರಿಕರಗಳಿಗೆ, ದಾಂಡೇಲಿಯ ಪರಿಸರ ಮಾಲಿನ್ಯದ ಸುಧಾರಣೆಗೆ ಮತ್ತು ಇನ್ನಿತರ ಕಾರ್ಮಿಕರ ಸವಲತ್ತುಗಳಿಗೆ ಬಳಸುವಂತಾಗಬೇಕು. ಆದರೆ ಇದಾವುದನ್ನು ಮಾಡದೇ ಸರ್ಕಾರ ಮಾಡಬೇಕಾದ ಕೆಲಸವನ್ನು ವೆಸ್ಕೋ ಮಾಡುತ್ತಿದೆ. ಈ ಪ್ರಕರಣದಲ್ಲಿ ನಗರಸಭೆಯ ಜನ ಪ್ರತಿನಿಧಿಗಳು ಅಧಿಕಾರಿಗಳು ಒಳ ಒಪ್ಪಂದ ಮಾಡಿಕೊಂಡು ಯಾವುದೇ ಕಾನೂನು ಕ್ರಮವಿಲ್ಲದೆ ಕೋಟ್ಯಾಂತರ ರೂಪಾಯಿ ಮೌಲ್ಯದ ಜಮೀನನ್ನು ವೆಸ್ಕೋ ಸಂಸ್ಥೆಗೆ ಬಳಸಲು ಅವಕಾಶ ನೀಡಲಾಗಿದೆ ಎಂಬ ಗಂಭೀರ ಆರೋಪ ಹೊರ ಬಿದ್ದಿದೆ. ಈ ಕುರಿತು ಜಿಲ್ಲಾಧಿಕಾರಿಗಳಿಗೆ ವಿವರಿಸಿ ಮನವಿ ನೀಡಿದ್ದಾರೆ. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ, ಈ ವಿಷಯದ ಕುರಿತು ಪರೀಶೀಲನೆ ನಡೆಸಿ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದ್ದಾರೆ.