ಸಾವರ್ಕರ್ ಬಗ್ಗೆ ಅವಮಾನ ಖಂಡಿಸಿ ಕೇಂದ್ರಕ್ಕೆ ಮನವಿ

ಗುಳೇದಗುಡ್ಡ: ಕಾಂಗ್ರೆಸ್ಸಿನ ಸೇವಾದಳದ ಕಿರು ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಸಾವರ್ಕರ್ ಇವರ ಕುರಿತು ಘೋರ ಅವಮಾನ ಮಾಡಲಾಗಿದೆ ಎಂದು ಅದನ್ನು ಖಂಡಿಸಿ ಹಿಂದೂ ಜನಜಾಗ್ರತಿ ಸಮಿತಿಯ ಪದಾಧಿಕಾರಿಗಳು ಪಟ್ಟಣದಲ್ಲಿ ತಹಶೀಲ್ದಾರರ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಮಂಗಳವಾರ ಬೆಳಿಗ್ಗೆ 11 ಗಂಟೆಗೆ ಹಿಂದೂ ಜನಜಗ್ರತಿ ಸಮಿತಿ ಪದಧಿಕಾರಿಗಳು ತಹಶೀಲ್ದಾರ ಕಚೇರಿಗೆ ಆಗಮಿಸಿ, ಸಾವರ್ಕರ್ ಅವರಿಗೆ ಸೇವಾದಳದ ಪುಸ್ತಕದಲ್ಲಿ ಅವಹೇಳನಕಾರಿಯಾಗಿ ಬರೆಯಲಾಗಿದೆ ಎಂದು ಅದನ್ನು ಖಂಡಿಸಿ ಘೋಷಣೆ ಕೂಗಿದರು. ಈ ಸಂದರ್ಭದಲ್ಲಿ ಸಮಿತಿಯ ಸಂಚಾಲಕ ಭುವನೇಶ ಪೂಜಾರ ಮಾತನಾಡಿ, ಈ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಅಪ್ರತಿಮ ವೀರ ಸಾವರ್ಕರ್ ಅವರ ಬಗ್ಗೆ ಅವಹೇಳನಕಾರಿಯಾದ ಬರಹ ಸಲ್ಲದು. ಇದನ್ನು ದೇಶ ಕ್ಷಮಿಸಲಾರದು. ಈ ಬರಹವನ್ನು ಹಿಂಪಡೆಯಬೇಕೆಂದು ಕೇಂದ್ರ ಸರ್ಕಾರವನ್ನು ಆಗ್ರಹಿಸಿ ಮನವಿ ಸಲ್ಲಿಸಿದರು. ಮುತ್ತು ಚಿಕ್ಕನರಗುಂದ, ಭುವನೇಶ ಪೂಜಾರ, ಮಹಾಂತೇಶ ಹಿರೇಮಠ, ಅಶೋಕ ಗೌಡರ್, ಹುಚ್ಚಪ್ಪ ಹುಳಿಪಲ್ಲೇದ, ಅಂಬರೀಶ ಯಳಮೇಲಿ ಸೇರಿದಂತೆ ಇನ್ನೂ ಅನೇಕರು ಇದ್ದರು.