ಓರಿಯೆಂಟಲ್ ಇನ್ಸೂರೆನ್ಸ್‌ ಕಂಪನಿ ಮೇಲೆ ಶಿಸ್ತು ಕ್ರಮಕ್ಕೆ ಆಗ್ರಹಿಸಿ ಮನವಿ

Appeal seeking disciplinary action against Oriental Insurance Company

ತಾಳಿಕೋಟಿ 11: ತಾಲೂಕಿನ ಬಂಟನೂರ, ಬೆಕಿನಾಳ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ರೈತರಿಗೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಹಣ ಮಂಜೂರು ಮಾಡದೆ ಇರುವ ಓರಿಯಂಟಲ್ ಇನ್ಸೂರೆನ್ಸ್‌ ಕಂಪನಿಯ ಮೇಲೆ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿ ಜಯ ಕರ್ನಾಟಕ ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ ದಾಸ್ಯಾಳ ಹಾಗೂ ಮುಖಂಡ ಪಿಂಟು ಗಬ್ಬೂರ ನೇತೃತ್ವದಲ್ಲಿ ರೈತ ಮುಖಂಡರು ಜಿಲ್ಲಾಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದರು.  

ಮನವಿ ಪತ್ರದಲ್ಲಿ ಸನ್ 2024 -25 ನೇ ಸಾಲಿನಲ್ಲಿ ಮಳೆ ಆಗದೆ ಉತ್ತಮ ಫಸಲು ಬಂದಿರುವುದಿಲ್ಲ ಹಾಗೂ ಬೆಳೆದ ಅಲ್ಪ ಬೆಳೆಗೆ ಯೋಗ್ಯ ಬೆಲೆ ಇಲ್ಲದೆ ರೈತರು ಸಂಕಷ್ಟದಲ್ಲಿ ಇರುವ ಸಮಯದಲ್ಲಿ ಪರಿಹಾರ ಮೂಲಕ ವಿಮೆ ಕೊಡಬೇಕಾದ ಓರಿಯಂಟಲ್ ಇನ್ಸೂರೆನ್ಸ್‌ ಕಂಪನಿಯವರು ರೈತರಿಗೆ ವಿಮೆ ನೀಡದೇ ಮೋಸ ಮಾಡುತ್ತಿದೆ. ಅದೇ ರೀತಿ ಸನ್ 2021-22, 2022-23, 2023-24 ಈ ಮೂರು ವರ್ಷಗಳಲ್ಲಿ ಉತ್ತಮ ಇಳುವರಿ ಬರೆದಿದ್ದರೂ ಯಾವ ಕಂಪನಿಯವರು ವಿಮೆ ನೀಡಿರುವುದಿಲ್ಲ, ಸನ್ 2024-25 ನೇ ಸಾಲಿನಲ್ಲಿ ಬಂಟನೂರ ಬೆಕಿನಾಳ ಗ್ರಾಮಗಳ ರೈತರಿಗೆ ಸ್ಥಳೀಯವಾಗಿ ಸರ್ವೆ ಕಾರ್ಯದಲ್ಲಿ ಇನ್ಸೂರೆನ್ಸ್‌ ಕಂಪನಿಯವರು ಭಾಗ ವಹಿಸದೇ ನಿಸ್ಕಾಳಜಿ ತೋರಿಸಿ ರೈತರಿಗೆ ಬೆಳೆ ವಿಮೆ ಹಂಚಿಕೆ ಮಾಡದೆ ಇಲ್ಲಸಲ್ಲದ ತಾಂತ್ರಿಕ ಕಾರಣಗಳನ್ನು ನೀಡುತ್ತಾ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಈಗಾಗಲೇ ಸರಿಯಾದ ಸಮಯದಲ್ಲಿ ಬೆಳೆ ಬಾರದೆ ಹಾಳಾಗಿರುವ ರೈತರು ಸಾಲದ ಸುಳಿಯಲ್ಲಿ ಸಿಲುಕಿ ಜೀವನ ನಡೆಸುವುದು ಕಷ್ಟಕರವಾಗಿರುತ್ತದೆ ಇಂಥಹ ಸಮಯದಲ್ಲಿ ಕಂಪನಿಗಳು ವಿಮೆ ಹಣ ನೀಡದೆ ರೈತರ ಜೀವನ ಜೊತೆ ಚೆಲ್ಲಾಟ ಆಡುತ್ತಿವೆ ಎಂದು ತಿಳಿಸಿ ರೈತರಿಗೆ ಬೆಳೆ ಪರಿಹಾರ ನೀಡದ ಓರಿಯಂಟಲ್ ಇನ್ಸೂರೆನ್ಸ್‌ ಕಂಪನಿ ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ಸದರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ರೈತರಿಗೆ ವಿಮೆ ಪರಿಹಾರ ನೀಡಲು ಯೋಗ್ಯ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದಾರೆ.  

ಈ ಸಮಯದಲ್ಲಿ ಜಯ ಕರ್ನಾಟಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಶಿವರಾಜಗೌಡ ಪಾಟೀಲ( ಗೊಟಖಂಡಕಿ), ಬಸವರಾಜ ಸಿಂಗ್ನಳ್ಳಿ( ಬಂಟನೂರ), ಎಚ್‌.ಡಿ.ಜಲಪೂರ( ಸಾಸನೂರ),ಡಾ. ಬಲವಂತ್ರಾಯಗೌಡ ನಡಹಳ್ಳಿ, ಬಸನಗೌಡ ಚಿಂಚೊಳ್ಳಿ (ಶಳ್ಳಗಿ), ಮಲ್ಲನಗೌಡ ಬಿರಾದಾರ,ಅರವಿಂದ ಹಾಲಣ್ಣವರ( ಪೀರಾಪೂರ), ಸೋಮನಗೌಡ ಆನೇಸೂರ ಮತ್ತಿತರರು ಇದ್ದರು.