ಬೆಂಗಳೂರು 17: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ತೂಗುದೀಪ, ಅವರ ಗೆಳತಿ ಪವಿತ್ರಾ ಗೌಡ ಮತ್ತು ಇತರ ಆರೋಪಿಗಳಿಗೆ ಹೈಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಬಿ ದಯಾನಂದ ಅವರು ಮಂಗಳವಾರ ತಿಳಿಸಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿ ಎಸ್ ವಿಶ್ವಜಿತ್ ಶೆಟ್ಟಿ ಅವರ ಏಕ ಸದಸ್ಯಪೀಠ ಆರೋಪಿ ನಂಬರ್ 1 ದರ್ಶನ್ ಅವರ ಸ್ನೇಹಿತೆ ಪವಿತ್ರಾ ಗೌಡ, 2ನೇ ಆರೋಪಿಯಾಗಿರುವ ದರ್ಶನ್, ಇತರ ಆರೋಪಿಗಳಾದ ಆರ್ ನಾಗರಾಜು, ಅನು ಕುಮಾರ್ ಅಲಿಯಾಸ್ ಅನು, ಲಕ್ಷ್ಮಣ್ ಎಂ, ಜಗದೀಶ್ ಅಲಿಯಾಸ್ ಜಗ್ಗ ಮತ್ತು ಪ್ರದೂಷ್ ಎಸ್ ರಾವ್ ಅವರಿಗೆ ಕಳೆದ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಜೂನ್ 11ರಂದು ದರ್ಶನ್ ಅವರನ್ನು ಬಂಧಿಸಲಾಗಿತ್ತು. ಇದೇ ಅವಧಿಯಲ್ಲಿ ಪವಿತ್ರಾ ಗೌಡ ಸೇರಿ 15 ಸಹ ಆರೋಪಿಗಳನ್ನು ಬಂಧಿಸಲಾಗಿತ್ತು.
ಮೊದಲ ಆರೋಪಿ ಪವಿತ್ರಾ ಗೌಡ ಅವರು ಇಂದು ಜಾಮೀನಿನ ಮೇಲೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಿಡುಗಡೆಯಾಗಿದ್ದಾರೆ.