ಲೋಕದರ್ಶನ ವರದಿ
ಪುರಸಭೆ ಅಧ್ಯಕ್ಷ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿಗೆ ಮನವಿ
ಸಿಂದಗಿ 20: ಪಟ್ಟಣದ ಪುರಸಭೆ ಅಧ್ಯಕ್ಷ ಶಾಂತವೀರ ಸಿದ್ದಪ್ಪ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಅವರ ಕಾರ್ಯ ವೈಖರಿಗೆ ಅಸಮಾಧಾನಗೊಂಡು ಪುರಸಭೆಯ 16ಜನ ಸದಸ್ಯರು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡಿಸುವ ಸಲುವಾಗಿ ವಿಶೇಷ ಸಾಮಾನ್ಯ ಸಭೆ ಕರೆಯುವಂತೆ ಸದಸ್ಯರ ಜೊತೆಗೆ ಗೂಡಿ ಮನವಿ ಸಲ್ಲಿಸಲಾಗುತ್ತಿದೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಶಾಂತವೀರ ಮನಗೂಳಿ ಹೇಳಿದರು.
ಈ ಕುರಿತು ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಅವಿಶ್ವಾಸ ಪತ್ರದಲ್ಲಿ 16ಜನ ಸದಸ್ಯರು, ಪುರಸಭೆ ಹಾಲಿ ಅಧ್ಯಕ್ಷ ಶಾಂತವೀರ ಬಿರಾದಾರ ಹಾಗೂ ಉಪಾಧ್ಯಕ್ಷ ರಾಜಣ್ಣ ನಾರಾಯಣಕರ ಅವರು ತಮ್ಮ ಅಧಿಕಾರದ ಅವಧಿಯಲ್ಲಿ ಸದಸ್ಯರ ಅಭಿಪ್ರಾಯಗಳಿಗೆ ಸ್ಪಂದಿಸದೇ ಹಾಗೂ ಗಣನೆಗೆ ತೆಗದುಕೊಳ್ಳದೇ ಸ್ವ-ಇಚ್ಚೆಯಂತೆ ಆಡಳಿತ ನಡೆಸುತ್ತಿದ್ದಾರೆ. ಪ್ರಸ್ತುತ ಅಧಿಕಾರಿದಲ್ಲಿರುವ ಅಧ್ಯಕ್ಷರ ಮೇಲೆ ಯಾವುದೇ ರೀತಿಯ ವಿಶ್ವಾಸ ಉಳಿದಿಲ್ಲ. ಆದ್ದರಿಂದ ನಾವುಗಳು ಸ್ವ-ಇಚ್ಚೆಯಿಂದ ಸಹಿ ಮಾಡುವುದರೊಂದಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ಗೊತ್ತುವಳಿ ಅರ್ಜಿ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಪುರಸಭೆಗೆ ಸಂಬಂಧಿಸಿದ ಯಾವುದೇ ಕಾರ್ಯ ಕಲಾಪಗಳಿಗೆ ನಮ್ಮ ಅಭಿಪ್ರಾಯ ಕೇಳುತ್ತಿಲ್ಲ. ಹಲವಾರು ಬಾರಿ ಪುರಸಭೆಯ ಹಣ ಪೋಲಾಗುತ್ತಿದೆ ಎಂದು ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದು, ಪ್ರಸ್ತುತ ತಮ್ಮ ಕುಟುಂಬ ಮತ್ತು ಸ್ವ-ಆಸ್ತಿಯ ಗಣಕಿಕೃತ ಉತಾರಿ ಮಾಡಿಕೊಳ್ಳುವಾಗ ಪುರಸಭೆ ಖಾತೆಗೆ ಜಮಾವಣೆ ಮಾಡಬೇಕಾದ ತೆರಿಗೆ ಹಣ ಪಾವತಿ ಮಾಡಿರುವುದಿಲ್ಲ. ಜೊತೆಗೆ ನಕಲಿ ಚಲನ್ ಸೃಷ್ಟಿಸಿ ಪುರಸಭೆಗೆ ತೆರಿಗೆ ಹಣವೇ ಸಂದಾಯ ಮಾಡಿರುವುದಿಲ್ಲ. ಇದಕ್ಕೇನು ಉತ್ತರ ನೀಡುತ್ತಾರೆ ನೋಡಬೇಕಾಗಿದೆ ಎಂದರು.
ಪುರಸಭೆ ಸದಸ್ಯರಾದ ಉಮಾದೇವಿ ಸುಲ್ಪಿ, ಕಲಾವತಿ ಕಡಕೋಳ, ಖೈರುನಬಿ ನಾಟೀಕಾರ, ತಹಸಿನ್ ಮುಲ್ಲಾ, ಬಸಮ್ಮ ಸಜ್ಜನ, ಭಾಗವ್ವ ಡೋಣೂರ, ಭಾಷಾಸಾಬ ತಾಂಬೋಳಿ, ಗೊಲ್ಲಾಳಪ್ಪ ಬಂಕಲಗಿ, ನಾಮ ನಿರ್ದೇಶೀತ ಸದಸ್ಯರಾದ ಸಿದ್ದು ಮಲ್ಲೇದ, ಸಾಯಬಣ್ಣ ಪುರದಾಳ, ಅಬ್ದುಲ್‌ರಹಿಮ್ ದುದನಿ, ಚನ್ನಪ್ಪ ಗೋಣಿ ಸೇರಿದಂತೆ ಅನೇಕರಿದ್ದರು.