ನವದೆಹಲಿ, ಜ ೨೯ : ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಜೆಡಿಯು ಹಿರಿಯ ನಾಯಕರಾದ ಪವನ್ ವರ್ಮಾ ಹಾಗೂ ಪ್ರಶಾಂತ್ ಕಿಶೋರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟಿಸಲಾಗಿದೆ ಎಂದು ಜೆಡಿಯು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ವಕ್ತಾರ ಕೆ.ಸಿ. ತ್ಯಾಗಿ ಬುಧವಾರ ಪ್ರಕಟಿಸಿದ್ದಾರೆ.
ಇಬ್ಬರೂ ನಾಯಕರು ಪಕ್ಷದ ನಾಯಕತ್ವ ಕೈಗೊಂಡಿದ್ದ ಕೆಲವು ನಿರ್ಧಾರಗಳನ್ನು ಇತ್ತೀಚಿಗೆ ಪ್ರಶ್ನಿಸಿದ್ದರು.
ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ, ಜೆಡಿಯು ಮೈತ್ರಿ ಮಾಡಿಕೊಂಡು ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸುತ್ತಿದೆ, ಮತ್ತೊಂದೆಡೆ, ಜೆಡಿಯು ರಾಷ್ಟ್ರೀಯ ಉಪಾಧ್ಯಕ್ಷರಾಗಿರುವ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್, ಆಮ್ ಆದ್ಮಿ ಪಕ್ಷದ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇದರಿಂದಾಗಿ ಪ್ರಶಾಂತ್ ಕಿಶೋರ್ ಹಾಗೂ ನಿತೀಶ್ ಕುಮಾರ್ ತೀವ್ರ ಭಿನ್ನಾಭಿಪ್ರಾಯಗಳಿಗೆ ಕಾರಣವಾಗಿತ್ತು.
ದೆಹಲಿ ಚುನಾವಣೆಯಲ್ಲಿ ಪಕ್ಷದ ಮೈತ್ರಿ ಹಾಗೂ ಸಿಎಎ ಕುರಿತ ಜೆಡಿಯು ಅಧಿಕೃತ ನಿಲುವನ್ನು ಪವನ್ ವರ್ಮಾ ಬಹಿರಂಗವಾಗಿಯೇ ವಿರೋಧಿಸಿದ್ದರಿಂದ ವರ್ಮಾ ಹಾಗೂ ನಿತೀಶ್ ಕುಮಾರ್ ನಡುವೆ ಬಹಿರಂಗವಾಗಿಯೇ ಮಾತಿನ ಚಕಮಕಿಗಳು ನಡೆದಿದ್ದವು. ಪಕ್ಷದ ನಿಲುವು ಮರು ಪರಿಶೀಲಿಸುವಂತೆ ವರ್ಮಾ ಅವರು ನಿತೀಶ್ ಕುಮಾರ್ ಪತ್ರ ಬರೆದ ನಂತರ, ವರ್ಮಾ ಜೆಡಿಯು ತ್ಯಜಿಸಲು ಅವರು ಸ್ವತಂತ್ರರು ಪಕ್ಷದ ನಾಯಕರು ತಿರುಗೇಟು ನೀಡಿದ್ದರು.
ಜೆಡಿಯು ಪಕ್ಷದಿಂದ ಇಬ್ಬರೂ ನಾಯಕರು ನಿರ್ಗಮಿಸಲು ಸ್ವತಂತ್ರರು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಮಂಗಳವಾರ ಮುನ್ಸೂಚನೆ ನೀಡಿದ ನಂತರ ಇಬ್ಬರೂ ನಾಯಕರನ್ನು ಪಕ್ಷದಿಂದ ಉಚ್ಚಾಟಿಸುವ ಕ್ರಮ ಕೈಗೊಳ್ಳಲಾಗಿದೆ. ಈ ಇಬ್ಬರೂ ನಾಯಕರ ಹೇಳಿಕೆಗಳು ಹಾಗೂ ಜೆಡಿಯು ಪಕ್ಷದ ಹೊರಗೆ ಭವಿಷ್ಯ ಕಂಡುಕೊಳ್ಳುವ ವದಂತಿಗಳ ಹಿನ್ನಲೆಯಲ್ಲಿ ಜೆಡಿಯು ಈ ಕ್ರಮ ಕೈಗೊಂಡಿದೆ ಎಂದು ವಿಶ್ಲೇಷಿಸಲಾಗಿದೆ.
ಪ್ರಶಾಂತ್ ಕಿಶೋರ್ ೨೦೧೮ರಲ್ಲಿ ಜೆಡಿಯು ಸೇರ್ಪಡೆಗೊಂಡಿದ್ದರು. ತಕ್ಷಣವೇ ಅವರನ್ನು ಪಕ್ಷದ ರಾಷ್ಟ್ರೀಯ ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೊಂದಿಗಿನ ತೀವ್ರ ನಿಕಟತೆಯಿಂದಾಗಿ ಪಕ್ಷದ ಎರಡನೆಯ ನಾಯಕ ಎಂದೇ ಪರಿಗಣಿಸಲಾಗಿತ್ತು.