ರೈತ ವಿರೋಧಿ ನೀತಿ ಮುಂದಿನ ಅನಾಹುತಕ್ಕೆ ದಾರಿ: ಪಾಟೀಲ

ಗಾಡ ನಿದ್ರೆಯಲ್ಲಿರುವ ಜಿಲ್ಲಾಡಳಿತಕ್ಕೆ ದಿಕ್ಕಾರ

ರಾಣೇಬೆನ್ನೂರು 18: ಬೆಳೆವಿಮೆ ಯೋಜನೆಯಲ್ಲಿ ರಿಲಾಯನ್ಸ ಇನ್ಸೂರನ್ಸ ಕಂಪನಿಯ ಬ್ರಟೀಷ್ ಪಾಲಿಸಿ ನೀತಿ ಖಂಡಿಸಿ ನ್ಯಾಯಕ್ಕಾಗಿ  ಸರತಿಯಂತೆ ದಿನಕ್ಕೊಂದು ಗ್ರಾಮಪಂಚಾಯತಿ ಮುಂದೆ ಧರಣಿ ನೆಡೆಸಿ ಗ್ರಾಮ ಪಂಚಾಯ್ತಿಗೆ ಬೀಗ ಜಡಿಯುವ ಪ್ರತಿಭಟನಾ ಕಾರ್ಯಕ್ರಮ ದಿನದಿಂದ ದಿನಕ್ಕೆ ಕಾವು ಪಡೆದು ಹೋರಾಟ ಬೇರೆ ತಿರುವು ಪಡೆಯುತ್ತಿದ್ದರೂ ಕೂಡ ಜಿಲ್ಲಾಡಳಿತ ಮಾತ್ರ ಗಾಡ ನಿದ್ರೆಯಲ್ಲಿದೆ. ಈ ಜಿಲ್ಲಾಡಳಿತಕ್ಕೆ ದಿಕ್ಕಾರ ಹೇಳದೆ ಬೇರೆ ವಿಧಿಯಿಲ್ಲ. ಕಣ್ಣು, ಕಿವಿ, ಮೂಗು, ಬಾಯಿ ಇಲ್ಲದೆಂತೆ ವರ್ತಿಸುತ್ತಾ ಮೌನವಾಗಿದ್ದು ರೈತರ ವಿರೋಧಿ ನೀತಿ ಅನುಸರಿಸುತ್ತಿದೆ. ಇಂತಹ ವರ್ತನೆ ಹೊಂದಿದ ದಿನಮಾನಗಳಲ್ಲಿ ಭಾರಿ ಅನಾಹುತಕ್ಕೆ ಕಾರಣವಾಗಲಿವೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಎಫ್‌. ಪಾಟೀಲ ಆಕ್ರೋಶಭರಿತವಾಗಿ ಜಿಲ್ಲಾಡಳಿತಕ್ಕೆ ಎಚ್ಚರಿಸಿದರು.  

ಅವರು ಇಂದು ‘ಸುಣಕಲ್ಲಬಿದರಿ’ ಗ್ರಾಮ ಪಂಚಾಯಿತಿ ಮುಂದೆ ಬೆಳೆವಿಮೆ ಯೋಜನೆಯಲ್ಲಿ ರಿಲಾಯನ್ಸ್‌ ಇನ್ಸೂರನ್ಸ್‌ ಕಂಪನಿ ರೈತರಿಗೆ ಮಾಡುತ್ತಿರುವ ಅನ್ಯಾಯದ ವಿರುದ್ಧ ಸರತಿಯಂತೆ ಗ್ರಾಮ ಪಂಚಾಯಿತಿಗಳಿಗೆ ಬೀಗ ಜಡಿದು ಪ್ರತಿಭಟಿಸು ಪ್ರತಿಭಟನಾ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದ ಅವರು ಜಿಲ್ಲಾಡಳಿತದ ಇಂತಹ ನಿರ್ಲಕ್ಷತನದಿಂದಲೇ ಈ ಹಿಂದೆ ಜಿಲ್ಲೆಯಲ್ಲಿ ರಸಗೊಬ್ಬರದ ಅಭಾವ ಉಂಟಾಗಿ ‘ರಸಗೊಬ್ಬರ’ ಕೇಳಿದ ರೈತರಿಬ್ಬರ ಮೇಲೆ ಪೊಲೀಸರು ಗೋಲಿಬಾರ್ ನಡೆಸಿ ಇಬ್ಬರು ರೈತರನ್ನು ಬಲಿತೆಗೆದ ದುರ್ಘಟನೆಯೊಂದು ಕಪ್ಪು ಚುಕ್ಕೆಯಾಗಿ ಉಳಿದರೆ, ರೈತ ಆತ್ಮಹತ್ಯೆ ಪ್ರಕರಣದಲ್ಲಿ ರಾಜ್ಯದಲ್ಲಿಯೇ ಹಾವೇರಿ ಜಿಲ್ಲೆ ಪ್ರಥಮ ಸ್ಥಾನದಲ್ಲಿರುವುದು ಸೇರಿದಂತೆ ನಿನ್ನೆ ಜಿಲ್ಲಾಡಳಿತದ ನಿರ್ಲಕ್ಷತನದಿಂದ ಹಾವೇರಿ ನಗರದಲ್ಲಿ ಅಮಾಯಕ ಮಗುವೊಂದು ‘ಗಟಾರಕ್ಕೆ’ ಬಿದ್ದು ಮಳೆ ನೀರಿನಲ್ಲಿ ಕೊಚ್ಚಿ ಪ್ರಾಣ ಕಳೆದುಕೊಂಡ ಘಟನೆಯಂತಹ ಹತ್ತು ಹಲವಾರು ಜಿಲ್ಲಾಡಳಿತದ ನಿರ್ಲಕ್ಷದ ಪ್ರಕರಣಗಳನ್ನು ಸ್ಮರಿಸಿಕೊಂಡ ಪಾಟೀಲರು ಈ ಹೋರಾಟ ಕೂಡ ಮುಂದೆ ಯಾವ ತಿರುವು ಪಡೆಯುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಅದಕ್ಕೆ ಜಿಲ್ಲಾಡಳಿತವೇ ಹೊಣೆ ಎಂದರು.  

ಮೊದಲಿಗೆ ಸುಣಕಲಬಿದರಿ ಗ್ರಾಮದ ಬಸವೇಶ್ವರ ದೇವಸ್ಥಾನದಲ್ಲಿ ಸಭೆ ನಡೆಸಿದ ಐದನೂರಕ್ಕೂ ಹೆಚ್ಚು ರೈತರು ಪ್ರತಿಭಟನಾ ಮೆರವಣಿಗೆ ಮೂಲಕ ಗ್ರಾಮ ಪಂಚಾಯಿತಿಗೆ ತೆರಳಿ ಅಲ್ಲಿ ಪ್ರತಿಭಟನೆ ನಡೆಸಿ ಗ್ರಾಮ ಪಂಚಾಯಿತಿಗೆ ರೊಚ್ಚಿಗೆದ್ದ ರೈತರ ಬೀಗ ಜಡಿದು ಪ್ರತಿಭಟಿಸಿದ ಮೇಲೆ ಕಂದಾಯ ಇಲಾಖೆಯ ಅಶೋಕ ಅರಳೇಶ್ವರ ಮತ್ತು ಕೃಷಿ ಇಲಾಖೆಯ ಅರವಿಂದರವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.  

ಪ್ರತಿಭಟನೆಯಲ್ಲಿ ಭರತಗೌಡ ಕೂಸಗೂರ, ಮಂಜಪ್ಪ ಲಿಂಗದಹಳ್ಳಿ, ರಾಮನಗೌಡ ಪಾಟೀಲ, ಮಹಾದೇವಗೌಡ ಪಾಟೀಲ ಹೋರಾಟದ ರೂಪರೇಷಗಳ ಬಗ್ಗೆ ಸರ್ಕಾರ ಮತ್ತು ಜಿಲ್ಲಾಡಳಿತದ ನಿರ್ಲಕ್ಷತನದ ಬಗ್ಗೆ ಮಾತನಾಡಿದರು.  

ಪ್ರತಿಭಟನೆಯಲ್ಲಿ ಶಿವಮೂರ್ತೆಪ್ಪ ಅರಳಿ, ಸುರೇಶ ಅರಳಿ, ಗದಿಗೆಪ್ಪ ಸುಡಂಬಿ, ಬಸವಂತಪ್ಪ ಹಿಂಡೇರ, ಕರಬಸಪ್ಪ ಅರಳಿ, ಗೀರೀಶ ಹುಡೇದ, ಶಂಕ್ರಗೌಡ ಕುಸಗೂರ, ನಾಗಪ್ಪ ಪುಟ್ಟನಗೌಡ, ಶಿವನಗೌಡ ಪೊಲೀಸಗೌಡ, ವೀರಯ್ಯ ದೇವಗಿರಿಮಠ, ಗೀರೀಶ ಮುದಿಗೌಡ್ರ, ಭೀಮಪ್ಪ ಸಂಗಾಪುರ, ಕರಬಸಪ್ಪ ನಾಗರಜ್ಜಿ, ರಾಜಶೇಖರ ಗೌರ​‍್ಪಳವರ, ತಿರುಕಪ್ಪ ಹಿತ್ತಲಮನಿ, ನಾಗರಾಜ ಪೂಜಾರ, ಬಸನಗೌಡ ಹುಡೇದ, ಮಹೇಶ ಹಿರೇಮಠ, ಕುಬೇರ ಗೋಣಿಮಠ, ರುದ್ರೇಶ ಅಂಗಡಿ, ರಮೇಶ ಚಕ್ರಸಾಲಿ, ಶಿವನಗೌಡ ಹಿಂಡೇರ ಮುಂತಾದ 500 ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.  

ಹಲಗೇರಿ ಪಿ.ಎಸ್‌.ಐ. ಪರಶುರಾಮ ಲಮಾಣಿ ಸೂಕ್ತ ಪೊಲೀಸ್ ಬಂದೋಬಸ್ತ ಒದಗಿಸಿದ್ದರು.