ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಾದಕ ವ್ಯಸನ ವಿರೋಧಿ ದಿನಾಚರಣೆ

ಕಿಣಿಯೇ 29: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್‌ ಬೆಳಗಾವಿ 3 ತಾಲೂಕು, ಜಿಲ್ಲಾ ಜನಜಾಗೃತಿ ವೇದಿಕೆ ಮತ್ತು ಮರಾಠ ಮಂಡಳ ಸಿದ್ಧಿ ವಿನಾಯಕ ಇಂಗ್ಲಿಷ್ ಶಾಲೆ ಕಿಣಿಯೇ ಇವರುಗಳು ಸಂಯುಕ್ತ ಆಶ್ರಯದಲ್ಲಿ ರಾಜರ್ಷಿ ಡಾ. ಡಿ.ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರೀ ಡಾ. ಹೇಮಾವತಿ ವಿ.ಹೆಗ್ಗಡೆಯವರ ಕೃಪಾಶೀರ್ವಾದಗಳೊಂದಿಗೆ "ಮಾದಕ ವ್ಯಸನ ವಿರೋಧಿ ದಿನಾಚರಣೆ" ಅಂಗವಾಗಿ ವಿದ್ಯಾರ್ಥಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಬೆಳಗಾವಿ ತಾಲೂಕಿನ ಕಿಣಿಯೇ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.  

ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯೆ ಜಯಶ್ರೀ ಪಾಟೀಲ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಯುವಶಕ್ತಿ ದೇಶದ ಭವಿಷ್ಯ. ಉತ್ತಮ ಸ್ನೇಹಿತರನ್ನು ಹೊಂದುವುದರಿಂದ ಸಮಾಜದಲ್ಲಿ ಉತ್ತಮ ಪ್ರಜೆಯಾಗಿ ಬಾಳಬಹುದು. ವಿದ್ಯಾರ್ಥಿಗಳು ಈ ವಯಸ್ಸಿನಲ್ಲಿಯೇ ಜಾಗೃತರಾಗಬೇಕು. ಮಾದಕ ವ್ಯಸನಗಳಿಂದ ದೂರವಿದ್ದು ತಮ್ಮ ಜೊತೆಗೆ ದೇಶದ ಪ್ರಗತಿಯಲ್ಲಿ ಮುಖ್ಯ ಪಾತ್ರ ವಹಿಸಬೇಕು ಕರೆ ನೀಡಿದರು.  

ಡಾ. ವಿನಯ ಮುಖ್ಯ ಅತಿಥಿಯಾಗಿ ಮಾತನಾಡಿ ಮಾದಕ ವಸ್ತು ಸೇವನೆಯಿಂದ ಆಗುವ ದುಷ್ಪರಿಣಾಮಗಳ ಬಗ್ಗೆ ತಿಳಿಸಿದರು. ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆರೋಗ್ಯ ನೀರೀಕ್ಷಣಾಧಿಕಾರಿ ಗುರು ಮೇದಾರ ಅವರು ಮಾದಕ ವ್ಯಸನವೆಂಬುದೊಂದು ರೋಗ. ವಿಶ್ವ ಆರೋಗ್ಯ ಸಂಸ್ಥೆಯ ಕಳೆದ ಸಂಶೋಧನೆಯ ಪ್ರಕಾರ ನಮ್ಮ ಭಾರತ ದೇಶದಲ್ಲಿ ಒಂದು ವರ್ಷಕ್ಕೆ 5 ಲಕ್ಷ ಜನರು ಮಧ್ಯಪಾನದಿಂದ ಮರಣ ಹೊಂದಿದ್ದಾರೆ. 14.5 ಲಕ್ಷ ಜನರು ಮಾದಕ ದ್ರವ್ಯ, ಮಾದಕ ವ್ಯಸನ ಅಥವಾ ಇನ್ನಿತರ ಚಟಗಳಿಂದ ಬಲಿಯಾಗುತ್ತಿರುವುದು ಶೋಚನೀಯವಾಗಿದೆ. ಹದಿಹರೆಯದಲ್ಲಿನ ಒತ್ತಡಗಳು, ತಂದೆ - ತಾಯಂದಿರ ಒತ್ತಡ, ಸ್ನೇಹಿತರ ಒತ್ತಡ, ಜೀವನ ಶೈಲಿ, ಮಾಧ್ಯಮ, ಆರ್ಥಿಕ ಸ್ವಾತಂತ್ರ್ಯ, ಪ್ರೀತಿಯ ಕೊರತೆ, ಅನಾರೋಗ್ಯ, ಪಾಶ್ಚಾತ್ಯ ಸಂಸ್ಕೃತಿ, ಸಾಹಸ ಪ್ರವೃತ್ತಿ, ನಕಾರಾತ್ಮಕ ಚಿಂತನೆಗಳು, ಈ ಎಲ್ಲಾ ಕಾರಣಗಳಿಂದಾಗಿ ಅಮಲು ಪದಾರ್ಥ ಹಾಗೂ ಇನ್ನಿತರ ವ್ಯಸನಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ ಎಂದು ಹೇಳಿದರು.  

 ಸಪ್ತ ವ್ಯಸನಗಳಲ್ಲಿ ಮಾದಕ ವ್ಯಸನ ಮೊದಲ ಮೆಟ್ಟಿಲು. ಈ ಮೆಟ್ಟಿಲನ್ನು ಜಾರಿದರೆ ಉಳಿದೆಲ್ಲಾ ಮೆಟ್ಟಿಲುಗಳು ತನ್ನಿಷ್ಟಕ್ಕೆ ಜಾರುತ್ತವೆ. ಸಮಾಜದಲ್ಲಿ ವ್ಯಸನಕ್ಕೆ ಬಲಿ ಬಿದ್ದವರಿಗೆ ಅಪಘಾತ, ಆತ್ಮಹತ್ಯೆ ಮತ್ತು ಅಕಾಲಿಕ ಮರಣ ಇವುಗಳು ಸರ್ವೇ ಸಾಮಾನ್ಯ. ಅತಿಯಾದ ಮೊಬೈಲ್ ಬಳಕೆಯಿಂದಲೂ ಯುವಜನತೆ ಹಾಳಾಗುತ್ತಿದೆ. ವಿದ್ಯಾರ್ಥಿಗಳು ಇದರ ಬಗ್ಗೆಯೂ ಗಮನ ಹರಿಸಬೇಕು. ಇವುಗಳಿಂದ ಹೊರಬರಲು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಎಚ್ಚೆತ್ತುಕೊಳ್ಳುವ ಅವಶ್ಯಕತೆಯಿದೆ. ದೃಢ ನಿರ್ಧಾರ, ಸಂಧಾನ ಕೌಶಲ್ಯ, ರಚನಾತ್ಮಕ ಚಿಂತನೆ, ವಿಮರ್ಶಾತ್ಮಕ ಚಿಂತನೆ, ಸಂವಹನ ಕೌಶಲ್ಯತೆ ವ್ಯಕ್ತಿ - ವ್ಯಕ್ತಿ ಸಂಬಂಧ, ಸಮಯ ಪಾಲನೆ, ನಡತೆ, ಗೌರವ, ಆತ್ಮಸ್ಥೈರ್ಯ, ಸಮಸ್ಯಾ ಪರಿಹಾರ, ಪರಾನುಭೂತಿ, ದೃಢ ನಿಲುವು, ಭಾವ ನಿಯಂತ್ರಣ, ಧನಾತ್ಮಕ ಚಿಂತನೆ, ಕರ್ತವ್ಯ ಪ್ರಜ್ಞೆ, ಮತ್ತು ಪ್ರೀತಿ ವಿಶ್ವಾಸಗಳಿಂದ ಮಾತ್ರ ವ್ಯಸನ ಮುಕ್ತ ಜೀವನವನ್ನು ನಡೆಸಲು ಸಾಧ್ಯ ಎಂದು ತಿಳಿಸಿದರು.   

ತಾಲೂಕಿನ ಯೋಜನಾಧಿಕಾರಿ ಜ್ಯೋತಿ ಜೋಳದ ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ತಿಳಿಸಿ ಆರೋಗ್ಯಪೂರ್ಣ ಸಮಾಜ ಅಥವಾ ದುಶ್ಚಟಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ. ಬಹುತೇಕ ಯುವಜನತೆ ಬಾಹ್ಯ ವ್ಯಕ್ತಿಗಳ ಪ್ರಭಾವದಿಂದ ದುಶ್ಚಟಗಳಿಗೆ ದಾಸರಾಗುತ್ತಿದ್ದು, ಇದನ್ನು ತಡೆಗಟ್ಟಲು ಸಂಕಲ್ಪ ಮಾಡೋಣ ಎಂದು ಪ್ರತಿಜ್ಞಾ ವಿಧಿ ಬೋಧಿಸಿದರು.  ವೇದಿಕೆಯಲ್ಲಿ ಸಿದ್ದಿವಿನಾಯಕ ಶಾಲಾ ಆಡಳಿತ ಮುಖ್ಯಸ್ಥರು ವೀರುಪಾಕ್ಷ, ರಮೇಶ್ ಪೂಜಾರಿ, ಉಪಸ್ಥಿತರಿದ್ದರು. ವನಿತಾ ನಿರ್ವಹಿಸಿ ಸ್ವಾಗತಿಸಿದರು. ಸೇವಾಪ್ರತಿನಿಧಿ ರಾಜೇಶ್ವರಿ ವಂದಿಸಿದರು.