ಧಾರವಾಡ 17: ನಮ್ಮ ಫೌಂಡೇಶನ್ ಕಳೆದ ಏಳೆಂಟು ವರ್ಷಗಳಿಂದ ಧಾರವಾಡವನ್ನು ಕೇಂದ್ರವನ್ನಾಗಿಸಿಕೊಂಡು ದಿವ್ಯಾಂಗ ಮಕ್ಕಳಿಗಾಗಿ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಂಡು ಕೆಲಸ ಮಾಡುತ್ತಿದೆ. ಮೊದಲಿನ ವರ್ಷಗಳಲ್ಲಿ ವಿದ್ಯಾರ್ಥಿಗಳ ಒಂದು ತಂಡವಾಗಿ ದಿವ್ಯಾಂಗ ಮಕ್ಕಳಿಗಾಗಿ ಸಾಂತ್ವನ ಎಂಬ ಹೆಸರಿನಿಂದ ಕೆಲಸ ಮಾಡುತ್ತಿತ್ತು. ಈ ಚಟುವಟಿಕೆಗಳು ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರುತ್ತಿದ್ದವು ಎಂದು ಆಡಳಿತ ಮಂಡಳಿ ತಿಳಿಸಿದೆ.
ತಂಡದ ಸದಸ್ಯರು ಈ ಚಟುವಟಿಕೆಗಳನ್ನು ವಿಸ್ತರಿಸಿ ಒಂದು ವ್ಯವಸ್ಥಿತ ರೀತಿಯಲ್ಲಿ ವಿವಿಧ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಇದಕ್ಕೆ ಒಂದು ಅಧಿಕೃತ ಮಾನ್ಯತೆ ಹಾಗೂ ಸಾಮಾಜಿಕ ಜವಾಬ್ದಾರಿಯುತ ಸಂಸ್ಥೆಯನ್ನಾಗಿ ಮಾಡಲು ಚಿಂತನೆ ನಡೆಸಿದರು. ಅದರ ಪರಿಣಾಮವಾಗಿ ಅಂತಃಕರಣ ಫೌಂಡೇಶನ್ ಎಂಬ ಹೆಸರಿನಲ್ಲಿ ದಿ. 17ರಂದು ಕೋ-ಆಪರೇಟಿವ್ ಸಂಘಗಳ ಕಾಯ್ದೆಯಡಿ ವಿಧ್ಯುಕ್ತವಾಗಿ ನೊಂದಾವಣೆಗೊಂಡಿದ್ದು ಈ ಅವಧಿಯಲ್ಲಿ ಉತ್ತಮ ಸಾಧನೆಯನ್ನು ದಾಖಲಿಸಿದೆ.
ಕಳೆದ ವರ್ಷದಲ್ಲಿ ನಮ್ಮ ಫೌಂಡೇಶನ್ ಅನೇಕ ಚಟುವಟಿಕೆಗಳನ್ನು ಆಯೋಜಿಸಿದ್ದು ಅವುಗಳ ಸಂಕ್ಷಿಪ್ತ ಪರಿಚಯ ಮಾಡಿಕೊಡಲು ಹರ್ಷವಾಗುತ್ತದೆ.
ಫೌಂಡೇಶನ್ನಿನ ಮುಖ್ಯ ಕಾರ್ಯ ಚಟುವಟಿಕೆಗಳು ದಿವ್ಯಾಂಗ ಮಕ್ಕಳ ವಿಶೇಷವಾಗಿ ದಿವ್ಯಾಂಗ ಶಾಲಾ ಮಕ್ಕಳ ಶ್ರೇಯೋಭವೃದ್ಧಿಗಾಗಿ ಶ್ರಮಿಸುವ ನಿಟ್ಟಿನಲ್ಲಿ ನಡೆದಿರುತ್ತವೆ.
ಜೊತೆ ಜೊತೆಗೇ ವೃದ್ಧರು, ಭಿಕ್ಷುಕರು, ಅನಾಥರು, ಬೀದಿಬದಿಯ ವೃದ್ಧ ವ್ಯಾಪಾರಿಗಳಿಗೆ ಸಹಾಯ ನೀಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುತ್ತಿದೆ. ಹೆಬ್ಬಳ್ಳಿಯ ಸರಕಾರಿ ಶಾಲೆಗೆ ಗ್ರೀನ್ ನೇಮ್ ಬೋರ್ಡ ವಾಲ್ ಕ್ಲಾಕ್ ಚಾಕ್ ಪೀಸ್ ಡಸ್ಟರ್ ಗಳನ್ನು ನೀಡಲಾಯಿತು. ಹುಬ್ಬಳ್ಳಿಯ ನ್ಯೂ ಸ್ಟಾರ್ ಫಿಸಿಯೋಥೆರಪಿ ಥೆರಪಿ ಕೇಂದ್ರಕ್ಕೆ ಸಹಾಯ ನೀಡಲಾಯಿತು.
‘ಸಾಂತ್ವನ’ ವಾರ್ಷಿಕ ಸಾಂಸ್ಕೃತಿಕ ಸ್ನೇಹ ಸಮ್ಮೇಳನವನ್ನು 21-01-2024ರಂದು ಧಾರವಾಡದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಸಹಯೋಗದಲ್ಲಿ ಅತ್ಯಂತ ಸಂಭ್ರಮದಿಂದ ನಡೆಸಲಾಯಿತು. ಅವಳೀ ನಗರ ಶಿರಸಿ ಲಕ್ಷ್ಮೇಶ್ವರ ಬೈಲಹೊಂಗಲ ಸವದತ್ತಿ ನಗರಗಳ ಶಾಲೆಗಳ 9 ಮಾನಸಿಕ 88ದಿವ್ಯಾಂಗ, ದೃಷ್ಟಿ ದಿವ್ಯಾಂಗ, ದೈಹಿಕ ದಿವ್ಯಾಂಗ ಹಾಗೂ ವಾಕ್ ಶ್ರವಣ ದಿವ್ಯಾಂಗ ಮಕ್ಕಳ ಶಾಲೆಗಳ/ಸಂಸ್ಥೆಗಳ 180 ವಿದ್ಯಾರ್ಥಿಗಳು, ಅಷ್ಟೇ ಸಂಖ್ಯೆಯ ಶಿಕ್ಷಕರು, ಪಾಲಕ ಪೋಷಕರು, ಹಾಗೂ ಅಪಾರ ಸಂಖ್ಯೆಯ ಜನರು ಭಾಗವಹಿಸಿದ್ದರು.
ಧಾರವಾಡದ ನುಗ್ಗೀಕೇರಿ ಶ್ರೀ ಹನುಮಂತ ದೇವಸ್ಥಾನದ ಆವರಣದಲ್ಲಿ ದಿವ್ಯಾಂಗ ಮಕ್ಕಳ ಕುರಿತು ಜನಜಾಗ್ರತಿ ಸಭೆಗಳನ್ನು ಫ್ಲ್ಯಾಷ್ ಮಾಬ್ ಚಟುವಟಿಕೆಗಳ ಮೂಲಕ ನಡೆಸಲಾಯಿತು.
ಭಿಕ್ಷುಕರಿಗೆ ಹೊದೆಯಲು ರಗ್ಗುಗಳನ್ನು ಬಡ ಮಹಿಳೆಯರಿಗೆ ಆಹಾರ ಸಾಮಗ್ರಿ ಪೊಟ್ಟಣಗಳನ್ನು, ಶೇಡ್ ಅಂಬ್ರೆಲ್ಲಾ ವಿತರಿಸಲಾಯಿತು.
9 ಬಡ ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ದಿವ್ಯಾಂಗ ಹಾಗೂ ಬಡ ಮಕ್ಕಳಿಗೆ ಶೈಕ್ಷಣಿಕ ಸಹಾಯ ನಿಡಲಾಯಿತು. ಬಡ ವಿದ್ಯಾರ್ಥಿಗಳಿಗೆ ಲೇಖನ ಸಾಮಗ್ರಿಗಳನ್ನು ಒದಗಿಸಲಾಯಿತು. ಭಿನ್ನಸಾಮರ್ಥ್ಯ ಶಾಲೆಯ ವಿದ್ಯಾರ್ಥಿಗಳಿಗೆ ಸಹಾಯ ರೂಪವಾಗಿ ದೇಣಿಗೆ ನೀಡಲಾಯಿತು
ನಗರದ ಥೆರೆಸಾ ಮಾರ್ಗರೇಟ್ ಸಂಸ್ಥೆಯ ಸಹಯೋಗದಲ್ಲಿ ಸಮರ್ಥ ಎಂಬ ಅನಾಥ ದಿವ್ಯಾಂಗ ಮಗುವಿಗೆ ವರ್ಷವೀಡೀ ಪೌಷ್ಟಿಕಾಂಶ ನೀಡುವ ಹಾಲು ಬೋರ್ನವೀಟಾ ಸರಬರಾಜು ಸಹಾಯನ್ನು ಈ ವರ್ಷವೂ ನೀಡಲಾಯಿತು.
ಮುಂದಿನ ದಿನಗಳಲ್ಲಿ ಫೌಂಡೇಶನ್ ತನ್ನ ಚಟುವಟಿಕೆಗಳನ್ನು ವಿಸ್ತರಿಸಲು ಅದರಲ್ಲಿಯೂ ವಿಶೇಷವಾಗಿ ಸಾಂತ್ವನ ಕಾರ್ಯಕ್ರಮವನ್ನು ಇತರ ನಗರಗಳಲ್ಲಿಯೂ ಹಮ್ಮಿಕೊಳ್ಳಲು ಚಿಂತನೆ ನಡೆಸುತ್ತಿದೆ. ತಮ್ಮೆಲ್ಲರ ಸಹಕಾರ ಸಲಹೆ ಸಹಾಯ ಹಾಗೂ ಮಾರ್ಗದರ್ಶನವನ್ನು ನೀರೀಕ್ಷಿಸುತ್ತೇವೆ.
ಎಂದಿನಂತೆ ನಮ್ಮ ಕೆಲಸಗಳಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ಡಾ. ಅಜಿತಪ್ರಸಾದ್ ನೇತೃತ್ವದ ಜೆಎಸ್‌ಎಸ್ ವಿದ್ಯಾ ಸಂಸ್ಥೆಗಳ ಆಡಳಿತ ಮಂಡಳಿ, ಸಿಬ್ಬಂದಿ ಹಾಗೂ ಶಿಕ್ಷಕರ ಸಹಾಯ ಸಹಕಾರವನ್ನು ಗೌರವದಿಂದ ಸ್ಮರಿಸಿಕೊಳ್ಳುತ್ತೇವೆ. ಎಲ್ಲ ಸಹೃದಯರನ್ನೂ ದಾನಿಗಳನ್ನೂ ಅವರ ಸಹಾಯವನ್ನೂ ಈ ಸಂದರ್ಭದಲ್ಲಿ ತುಂಬು ಹೃದಯದಿಂದ ಸ್ಮರಿಸಿಕೊಳ್ಳುತ್ತೇವೆ ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.