ಜ. 19 ರಿಂದ ಬೆಂಗಳೂರಿನಲ್ಲಿ 24 ನೇ ರಿಫೈನಿಂಗ್ ಅಂಡ್ ಪೆಟ್ರೋಕೆಮಿಕಲ್ ಟೆಕ್ನಾಲಜಿ ಸಮ್ಮೇಳನ: ಧರ್ಮೇಂದ್ರ ಪ್ರಧಾನ್ ಚಾಲನೆ

ಬೆಂಗಳೂರು, ಜ 17 ,ರಿಪೈನರಿ ಅಂಡ್ ಪೆಟ್ರೋಕೆಮಿಕಲ್ಸ್ ವಲಯದ ತಂತ್ರಜ್ಞಾನ ಕುರಿತ ಜಾಗತಿಕ ಸಮ್ಮೇಳನ ಜ. 19 ರಿಂದ 21ರ ವರೆಗೆ ತುಮಕೂರು ರಸ್ತೆಯ ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಮೈದಾನ –ಬಿಐಇಸಿಯಲ್ಲಿ ನಡೆಯಲಿದೆ. ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಿಭಾಗದ ಉನ್ನತ ತಂತ್ರಜ್ಞಾನ ಸಂಸ್ಥೆ - ಸಿ.ಎಚ್.ಟಿ ಸಹಯೋಗದೊಂದಿಗೆ ರಾಜ್ಯದ ಮಂಗಳೂರು ರಿಪೈನರಿ ಅಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ ಈ ಸಮ್ಮೇಳನ  ಆಯೋಜಿಸುತ್ತಿದೆ. ದೇಶ ವಿದೇಶಗಳ 1,500 ಕ್ಕೂ ಹೆಚ್ಚು ತೈಲ ಮತ್ತು ಅನಿಲ ಕೈಗಾರಿಕೆಗಳ ವೃತ್ತಿಪರರು ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಓ.ಎನ್.ಜಿ.ಸಿ/ಎಂ.ಆರ್.ಪಿ.ಎಲ್. ಕಾರ್ಪೋರೇಟ್ ಕಮ್ಯುನಿಕೇಷನ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕ ರುಡೋಲ್ಫ್ ನರೋನ್ಹ, ಸಮ್ಮೇಳನದಲ್ಲಿ ಜಾಗತಿಕ ತೈಲ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ಚರ್ಚೆ ನಡೆಯಲಿದೆ. ಇರಾನ್ ಹಾಗೂ ಅಮೆರಿಕದ ನಡುವೆ ಎದುರಾಗಿರುವ ಸಂಘರ್ಷ, ಅದರ ಪರಿಣಾಮಗಳು, ಕಳೆದೊಂದು ವರ್ಷದಲ್ಲಿ ಆಗಿರುವ ಬೆಳವಣಿಗೆಗಳು, ಕಚ್ಚಾತೈಲ ಉತ್ಪಾದನೆ ಹೆಚ್ಚಳ ಕುರಿತಂತೆಯೂ ಚರ್ಚೆ ನಡೆಯಲಿದೆ ಎಂದರು. ಇತ್ತೀಚೆಗೆ ಎಲ್ಲೆಡೆ ಎಲೆಕ್ಟ್ರಿಕ್ ವಾಹನಗಳ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿದ್ದು, ವಾಹನ ಉದ್ಯಮ ಎಲೆಕ್ಟ್ರಿಕ್ ವಲಯದತ್ತ ಹೆಚ್ಚು ಸಕ್ರಿಯವಾದರೆ ತೈಲೋದ್ಯಮದ ಪರಿಸ್ಥಿತಿ ಬಗ್ಗೆಯೂ ಸಮ್ಮೇಳನದಲ್ಲಿ ವಿಶೇಷವಾಗಿ ಬೆಳಕು ಚೆಲ್ಲಲಾಗುವುದು ಎಂದು ಹೇಳಿದರು.  

 ಮಂಗಳೂರು ರಿಪೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ – ಎಂ.ಆರ್.ಪಿ.ಎಲ್ ಮಿನಿರತ್ನ ಕಂಪೆನಿಯಾಗಿದ್ದು, ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಒ.ಎನ್.ಜಿ.ಸಿಯ ಒಂದು ಘಟಕವಾಗಿದೆ. ಎಂ.ಆರ್.ಪಿ.ಎಲ್ ಶೇ 6 ರಷ್ಟು ಕಚ್ಚಾ ತೈಲವನ್ನು ಸಂಸ್ಕರಣೆ ಮಾಡುತ್ತಿದ್ದು, ದಕ್ಷಿಣ ಭಾರತದ ಅನೇಕ ಪ್ರದೇಶಗಳ ಹೈಡ್ರೋ ಕಾರ್ಬನ್ ಅಗತ್ಯಗಳನ್ನು ಪೂರೈಸುತ್ತಿದೆ. ಮೂರು ದಿನಗಳ ಜಾಗತಿಕ ಸಮ್ಮೇಳವನ್ನು ಕೇಂದ್ರ ತೈಲ ಮತ್ತು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಉದ್ಘಾಟಿಸುತ್ತಿದ್ದು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಕಾರ್ಯದರ್ಶಿ ಎಂ.ಎಂ. ಕುಟ್ಟಿ, ಎಂ.ಆರ್.ಪಿ.ಎಲ್ ವ್ಯವ್ಥಾಪಕ ನಿರ್ದೇಶಕ ಎಂ. ವೆಂಕಟೇಶ್, ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ವಿಭಾಗದ ಉನ್ನತ ತಂತ್ರಜ್ಞಾನ ಸಂಸ್ಥೆ ಸಿ.ಎಚ್.ಟಿ ಯ ಕಾರ್ಯಕಾರಿ ನಿರ್ದೇಶಕ ಕೆ.ಕೆ. ಜೈನ್ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ. ಓ.ಎನ್.ಜಿ.ಸಿ, ಐ.ಓ.ಸಿ.ಎಲ್, ಬಿ.ಪಿ.ಸಿ.ಎಲ್, ಎಚ್.ಪಿ.ಸಿ.ಎಲ್ ಮತ್ತು ಎಂ.ಆರ್.ಪಿ.ಎಲ್  ಮತ್ತಿತರ ಪ್ರಮುಖ ತೈಲ ಮತ್ತು ಅನಿಲ ಕೈಗಾರಿಕೆಗಳ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು. 

 “ ಪೆಟ್ರೋಕೆಮಿಕಲ್ಸ್ ಮತ್ತು ಸಂಸ್ಕರಣೆ ವಲಯದಲ್ಲಿ ಸುಸ್ಥಿರ ಅಭಿವೃದ್ಧಿಯತ್ತ ಚಾಲನೆ” ಎನ್ನುವ ವಿಷಯದ ಆಧಾರದ ಮೇಲೆ ಈ ಸಮ್ಮೇಳನ ನಡೆಯುತ್ತಿದ್ದು, ಸಮ್ಮೇಳನದಲ್ಲಿ ಭಾರತೀಯ ತೈಲ ಕ್ಷೇತ್ರದ ಕಾರ್ಯಕ್ಷಮತೆ ಪ್ರಶಸ್ತಿಗಳನ್ನು ಸಹ ನೀಡಿ ಗೌರವಿಸಲಾಗುತ್ತಿದೆ. ಎಂ.ಆರ್.ಪಿ.ಎಲ್ ಸಂಸ್ಥೆಗೆ ಲಭ್ಯವಾಗಿರುವ ಮಾಹಿತಿ ಅನುಸಾರ ಜಗತ್ತಿನ ಪ್ರಮುಖ ತೈಲ ಸಂಸ್ಥೆಗಳು, ತೈಲ ಕ್ಷೇತ್ರದ ದಿಗ್ಗಜರು ಈ ಪ್ರತಿಷ್ಠಿತ ಸಮ್ಮೇಳನದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ರುಡೋಲ್ಫ್ ನರೋನ್ಹ ಮಾಹಿತಿ ನೀಡಿದರು.

 ಬರುವ ದಿನಗಳಲ್ಲಿ ತೈಲ ಮತ್ತು ನೈಸರ್ಗಿಕ ಅನಿಲ ಕೈಗಾರಿಕಾ ಕ್ಷೇತ್ರದ ಭವಿಷ್ಯ, ಸವಾಲುಗಳು ಮತ್ತು ಅಳವಡಿಸಿಕೊಳ್ಳಬೇಕಾದ ಕಾರ್ಯತಂತ್ರ ಕುರಿತು ಗಣ್ಯರು ವಿಚಾರ ಮಂಡನೆ ಮಾಡಲಿದ್ದಾರೆ. ತೈಲ ಮತ್ತು ಅನಿಲ ಕೈಗಾರಿಕಾ ವಲಯದಲ್ಲಿ ಇಂಧನ ಕ್ಷಮತೆ ವಿಚಾರದಲ್ಲಿ ಉತ್ತಮ ಸಾಧನೆಯನ್ನು ಪ್ರೋತ್ಸಾಹಿಸುವ, ಕಾರ್ಯದಕ್ಷತೆ, ನಾವೀನ್ಯತೆ, ಸಂಶೋಧನೆ ಮತ್ತು ಉತ್ಪಾದನೆಯನ್ನು ಹೆಚ್ಚಿಸುವ ಕಾರ್ಯ ವಿಧಾನಗಳ ಬಗ್ಗೆಯೂ ಪರಿಣಿತರು ಸಮ್ಮೇಳನದಲ್ಲಿ ಬೆಳಕು ಚೆಲ್ಲಲಿದ್ದಾರೆ. ಬರುವ ದಿನಗಳಲ್ಲಿ ಈ ಕ್ಷೇತ್ರವನ್ನು ಸುಸ್ಥಿರಗೊಳಿಸಲು ಮತ್ತು ಪ್ರವರ್ಧಮಾನಕ್ಕೆ ತರಲು, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಜ್ಞಾನ ಮತ್ತು ಪರಿಣಿತಿಯನ್ನು ವಿನಿಮಯ ಮಾಡಿಕೊಳ್ಳುವ ಜತೆಗೆ ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳುವ ಕುರಿತಂತೆಯೂ ಸಮ್ಮೇಳನದಲ್ಲಿ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು. ಓ.ಎನ್.ಜಿ.ಸಿ/ಎಂ.ಆರ್.ಪಿ.ಎಲ್. ಕಾರ್ಪೋರೇಟ್ ಕಮ್ಯುನಿಕೇಷನ್ ವಿಭಾಗದ ಮುಖ್ಯ ವ್ಯವಸ್ಥಾಪಕ ಡಿ.ಕಣ್ಣನ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.