ಮತ್ತೊಂದು ದಾಖಲೆಯ ಸನಿಹ ನಾಯಕ ವಿರಾಟ್ ಕೊಹ್ಲಿ

ನವದೆಹಲಿ, ಜ 28 :     ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಇತ್ತೀಚೆಗೆ ಮುರಿದಿದ್ದಾರೆ. ಇದೀಗ ನಾಳೆ ನ್ಯೂಜಿಲೆಂಡ್ ವಿರುದ್ಧ ನಡೆಯುವ ಮೂರನೇ ಟಿ-20 ಪಂದ್ಯದಲ್ಲಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಲು ಮುಂದಾಗಿದ್ದಾರೆ.

 ಟಿ-20 ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ನಾಯಕ ಎಂಬ ಮಹೇಂದ್ರ ಸಿಂಗ್ ಧೋನಿ ದಾಖಲೆ ಮುರಿಯಲು ರನ್ ಮಶೀನ್ ಖ್ಯಾತಿಯ ಕೊಹ್ಲಿ ಕೇವಲ 25 ರನ್ ಅಗತ್ಯವಿದೆ. ಕೊಹ್ಲಿ ಸದ್ಯ ಈ ದಾಖಲೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದಾರೆ. ಮೂರನೇ ಸ್ಥಾನದಲ್ಲಿ ಧೋನಿ ಇದ್ದಾರೆ. ಫಾಫ್ ಡುಪ್ಲೆಸಿಸ್ (1,273) ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ (1,148) ಇವರಿಬ್ಬರು ಅಗ್ರ ಎರಡು ಸ್ಥಾನಗಳಲ್ಲಿ ಇದ್ದಾರೆ.

ಬುಧವಾರ ನಡೆಯುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ 25 ರನ್ ಗಳಿಸಿದ್ದೇ ಆದಲ್ಲಿ ಚುಟುಕು ಕ್ರಿಕೆಟ್ ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತದ ಮೊದಲ ಹಾಗೂ ವಿಶ್ವದ ಮೂರನೇ ನಾಯಕ ಎಂಬ ಹಿರಿಮೆಗೆ ಭಾಜನರಾಗಲಿದ್ದಾರೆ.

ಒಂದು ವೇಳೆ 50 ಕ್ಕೂ ಹೆಚ್ಚು ರನ್ ಗಳಿಸಿದರೆ, ಟಿ-20 ಕ್ರಿಕೆಟ್ ನಲ್ಲಿ ಅತಿ ಹೆ್ಚ್ಚು ಅರ್ಧಶತಕ ಬಾರಿಸಿದ ವಿಶ್ವದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ವಿಲಿಯಮ್ಸನ್ ಹಾಗೂ ಪಾಫ್ ಡುಪ್ಲೆಸಿಸ್ ಜಂಟಿಯಾಗಿ ಅಗ್ರ ಸ್ಥಾನದಲ್ಲಿದ್ದಾರೆ.

ಮೊದಲ ಎರಡು ಪಂದ್ಯಗಳಲ್ಲಿ ಭಾರತ ಜಯ ಸಾಧಿಸಿದೆ. ಆ ಮೂಲಕ ಐದು ಪಂದ್ಯಗಳ ಟಿ-20 ಸರಣಿಯಲ್ಲಿ ಕೊಹ್ಲಿ 2-0 ಮುನ್ನಡೆಯಲ್ಲಿದೆ. ನಾಳಿನ ಪಂದ್ಯದಲ್ಲಿ ಗೆಲುವು ಪಡೆದರೆ, ಚುಟುಕು ಸರಣಿ ವಶಪಡಿಸಿಕೊಳ್ಳಲಿದೆ.