ಬೆಂಗಳೂರು, ಜೂ.28: ಸಿಲಿಕಾನ್ ಸಿಟಿ ಪೊಲೀಸರನ್ನು ಬೆಂಬಡದೇ ಬೇತಾಳದಂತೆ ಕಾಡುತ್ತಿರುವ ಕೊರೊನಾ, ಇದೀಗ ಮತ್ತೋರ್ವ ಎಎಸ್ ಐ ಯನ್ನು ಬಲಿ ಪಡೆದುಕೊಂಡಿದೆ.ಈ ಮೂಲಕ ಕೋವಿಡ್-19 ಗೆ ಬಲಿಯಾದ ಪೊಲೀಸರ ಸಂಖ್ಯೆ 5ಕ್ಕೆ ಏರಿಕೆ ಆಗಿದೆ. ನಗರದ ವೈಟ್ ಫೀಲ್ಡ್ ನ 57 ವರ್ಷದ ಎಎಸ್ಐ ಕೊರೊನಾಗೆ ಬಲಿಯಾಗಿದ್ದಾರೆ.ಶನಿವಾರ ರಾತ್ರಿ ಅವರು ಏಕಾಏಕೀ ಮನೆಯ ಶೌಚಾಲಯ ಕೋಣೆಯಲ್ಲಿ ಕುಸಿದುಬಿದ್ದಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.
ಆದರೆ, ತಪಾಸಣೆ ಮಾಡಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.ನಂತರ ಅವರ ಮೃತ ದೇಹವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಕೋವಿಡ್ -19ಸೋಂಕು ತಗುಲಿರುವುದು ದೃಢಪಟ್ಟಿತ್ತು. ಮೃತ ಎಎಸ್ ಐ ಅವರು ಪತ್ನಿ ಮತ್ತು ಮಗಳನ್ನು ಅಗಲಿದ್ದಾರೆ. 55 ವರ್ಷ ಮೇಲ್ಪಟ್ಟ ಎಲ್ಲಾ ಸಿಬ್ಬಂದಿ ಜೂನ್ 10ರಿಂದ ಮನೆಯಿಂದಲೇ ಕೆಲಸ ಮಾಡುತ್ತಿದ್ದಾರೆ. ನಿನ್ನೆಯಿಂದ 45 ವರ್ಷ ಮೇಲ್ಪಟ್ಟ ಪೊಲೀಸರನ್ನು ಕೂಡ ಮನೆಯಿಂದಲೇ ಕೆಲಸ ಮಾಡುವಂತೆ ಸೂಚಿಸಿ ಕಳುಹಿಸಲಾಗಿತ್ತು. ಸಿಬ್ಬಂದಿಯ ಸುರಕ್ಷೆತೆಗೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದೇವೆ ಎಂದು ವೈಟ್‌ಫೀಲ್ಡ್ ಡಿಸಿಪಿ ತಿಳಿಸಿದ್ದಾರೆ.