ವಿಜಯಪುರ, ಡಿ. 16: ಆಯುರ್ವೇದ, ಉತ್ಕೃಷ್ಠ ಯೋಗ ಪದ್ಧತಿ ಮತ್ತು ಸಾತ್ವಿಕ ಜೀವನ ಶೈಲಿಯ ಮೂಲಕ ಸದೃಢ ಆರೋಗ್ಯ ಹೊಂದುವ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು ಎಂದು ನಿರಂಜನ ಮಹಾಸ್ವಾಮೀಜಿ ಹೇಳಿದ್ದಾರೆ.
ರವಿವಾರ ನಗರದ ಬಿ. ಎಲ್. ಡಿ. ಇ ಸಂಸ್ಥೆಯ ಎ. ವಿ. ಎಸ್. ಆಯುರ್ವೇದ ಮಹಾವಿದ್ಯಾಲಯ, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ನಡೆದ ಹಳೆಯ ವಿದ್ಯಾರ್ಥಿಗಳ ಸಂಘದ ವಾರ್ಷಿಕ ಸ್ನೇಹ ಸಮಾಗಮ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಇಂಥ ಸಮಾಗಮ ಕಾರ್ಯಮಕ್ರಗಳ ಮೂಲಕ ಹಳೆಯ ವಿದ್ಯಾರ್ಥಿಗಳು ಒಂದೆಡೆ ಸೇರುವುದರಿಂದ ಜೀವನದ ಕ್ಷಣಗಳನ್ನು ಸ್ಮರಣೀಯವಾಗಿಸಬಹುದು. ಅಲ್ಲದೇ, ಪರಸ್ಪರ ಆಚಾರ, ವಿಚಾರಗಳನ್ನು ವಿನಿಮಯ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು. ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಹುಬ್ಬಳ್ಳಿ ಆಯುರ್ವೇದ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಡಾ. ಬಿ. ಬಿ. ಜೋಶಿ ಮಾತನಾಡಿ, ಎ. ವಿ. ಎಸ್. ಆಯುರ್ವೇದ ಮಹಾವಿದ್ಯಾಲಯದಲ್ಲಿ ತಾವು ಮಾಡಿದ ವಿದ್ಯಾರ್ಜನೆ ಮತ್ತು ಅದರಿಂದ ವೈದ್ಯಕೀಯ ಕ್ಷೇತ್ರಕ್ಕೆ ತಾವು ಸಲ್ಲಿಸಿದ ಸೇವೆಯ ಕುರಿತು ಮಾತನಾಡಿದರು. ಅಲ್ಲದೇ, ಸಂಸ್ಥೆಯ ಅಭಿವೃದ್ಧಿಗೆ ಎಲ್ಲರೂ ಸಹಕರಿಸುವಂತೆ ಕೋರಿದರು. ಕಾಲೇಜಿನ ಪ್ರಚಾರ್ಯ ಡಾ. ಸಂಜಯ ಕಡ್ಲಿಮಟ್ಟಿ ಹಳೆಯ ವಿದ್ಯಾರ್ಥಿಗಳ ಸಂಘ ನಡೆದು ಬಂದ ದಾರಿ ಕುರಿತು ಮಾತನಾಡಿದರು.
300ಕ್ಕೂ ಹೆಚ್ಚು ಹಳೆಯ ವೈದ್ಯರು ಪಾಲ್ಗೋಂಡಿದ್ದ ಈ ಕಾರ್ಯಕ್ರಮದಲ್ಲಿ ಬಿ. ಎ. ಎಂ. ಎಸ್ ಅಂತಿಮ ವರ್ಷದ ಪದವಿ ಪರೀಕ್ಷೆಯಲ್ಲಿ ಗರಿಷ್ಠ ಅಂಕಗಳನ್ನು ಪಡೆದ ವಿದ್ಯಾರ್ಥಿನಿ ಡಾ. ಮೋಸಮಿ ಸಾಮಂತ ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಗಾಯಕಿ ಸಮನ್ವಿ ರೈ ಮತ್ತು ವೀರೇಶ ವಾಲಿ ತಮ್ಮ ಹಾಡುಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದರು. ಕಲಾವಿದ ಶ್ರೀಶೈಲ ಹೂಗಾರ ತಮ್ಮ ಹಾಸ್ಯ ಚಟಾಕಿಯ ಮೂಲಕ ಸಭಿಕರು ನಗೆಗಡಲಲ್ಲಿ ತೇಲುವಂತೆ ಮಾಡಿದರು. ಸಂಘಧ ಉಪಾಧ್ಯಕ್ಷ ಡಾ. ಡಿ. ಎನ್. ಧರಿ ಸ್ವಾಗತಿಸಿದರು. ಡಾ. ರೇಣುಕಾ ತೆನಹಳ್ಳಿ ಮತ್ತು ಡಾ. ದೌಲಭಿ ಚೌಧರಿ ನಿರೂಪಿಸಿದರು. ಡಾ. ಸುನೀಲ ಹುಂಡೇಕರ ವಂದಿಸಿದರು.