ವಾರ್ಷಿಕ ಸ್ನೇಹ ಸಮ್ಮೇಳನ, ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ

ವಾರ್ಷಿಕ ಸ್ನೇಹ ಸಮ್ಮೇಳನ, ಪಿಯು ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ Annual Friendship Conference, Farewell Ceremony for PU Students

ವಿಜಯಪುರ, 01 : ದಿ. 31 ಡಿ. 2025ರಂದು ವಿಜಯಪುರದ ಕಂದಗಲ್ ಹನುಮಂತರಾಯ ರಂಗಮಂದಿರದಲ್ಲಿ ವಿ.ಭ.ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜಿನ 2025-26ನೇ ಸಾಲಿನ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಾಗಲಕೋಟೆ ಜಿಲ್ಲೆಯ ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಸಚಿವರಾದ ಸೋಮಲಿಂಗ ಗೆಣ್ಣೂರ ರವರು ಸನ್ಮಾನ ಸ್ವೀಕರಿಸಿ ಮಾತನಾಡಿ ಬಡತನ ಮತ್ತು ಕಷ್ಟಗಳನ್ನು ಮೆಟ್ಟಿ ನಿಂತು ಸತತ ಪರಿಶ್ರಮದೊಂದಿಗೆ ಶ್ರದ್ಧೆಯಿಂದ ಅಭ್ಯಾಸ ಮಾಡಿದರೆ ಉನ್ನತ ಮಟ್ಟದ ಗುರಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಂದು ತಮ್ಮ ಸ್ವಂತ ಜೀವನಾನುಭವಗಳ ಮೂಲಕ ವಿದ್ಯಾರ್ಥಿಗಳಿಗೆ ಮನ ಮುಟ್ಟುವಂತೆ ತಿಳಿಸಿದರು. ವಿದ್ಯಾರ್ಥಿಗಳು ಆದರ್ಶ ಶಿಕ್ಷಕರನ್ನು ಮಾದರಿಯಾಗಿಸಿಕೊಳ್ಳಬೇಕು. ಗುರು-ಹಿರಿಯರು ಮತ್ತು ಪಾಲಕರಿಗೆ ಭಕ್ತಿ, ಗೌರವ ನೀಡುವುದರ ಮೂಲಕ ಜೀವನದಲ್ಲಿ ವಿನಯಶೀಲರಾಗಿ, ಶಿಸ್ತು, ಸಂಯಮ ರೂಢಿಸಿಕೊಳ್ಳಬೇಕೆಂದರು. 

ಅತಿಥಿಗಳಾದ ಡಾಽಽ ಸಿ.ಕೆ. ಹೊಸಮನಿ, ಮಾನ್ಯ ಉಪನಿರ್ದೇಶಕರು, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವಿಜಯಪುರ ಮಾತನಾಡಿ ವಿದ್ಯಾರ್ಥಿಗಳು ಮುಂಬರುವ ವಾರ್ಷಿಕ ಪರೀಕ್ಷೆಗಳಿಗೆ ಇಲಾಖೆ ಹೊರಡಿಸಿರುವ ಮಾರ್ಗಸೂಚಿಗಳನ್ನು ತಿಳಿಸಿ ಅದಕ್ಕೆ ಅನುಗುಣವಾಗಿ ಸೂಕ್ತ ತಯಾರಿ ಮಾಡಿಕೊಂಡು ಉತ್ತಮ ಫಲಿತಾಂಶವನ್ನು ಪಡೆಯುವ ಮೂಲಕ ಪಾಲಕರಿಗೆ ಹಾಗೂ ಕಲಿತ ಕಾಲೇಜಿಗೆ ಕೀರ್ತಿ ತರಬೇಕೆಂದು ತಿಳಿಹೇಳಿದರು. ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ರಾಜೇಶ ಡಿ. ದರಬಾರ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಆಡಳಿತ ಮಂಡಳಿಯ ಯುವ ಸದಸ್ಯರಾದ ಶ್ರೀ ವಿಕಾಸ ದರಬಾರ ರವರು ಗೌರವ ಉಪಸ್ಥಿತಿ ವಹಿಸಿದ್ದರು. 

ಮುಖ್ಯ ಅತಿಥಿಗಳಾದ ಸೋಮಲಿಂಗ ಗೆಣ್ಣೂರ ಇವರು ರಚಿಸಿದ ಕೃತಿಗಳನ್ನು ಅಧ್ಯಕ್ಷರಾದ ರಾಜೇಶ ಡಿ. ದರಬಾರ ಇವರಿಗೆ ಅರ​‍್ಿಸಿದರು. ಉಪನ್ಯಾಸಕರಾದ ಎ. ನಾಗರಾಜ ಇವರು ಕೃತಿಗಳ ಬಗ್ಗೆ ಪರಿಚಯಿಸಿದರು. ದ್ವಿತೀಯ ಪಿಯುಸಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಾದ ಕುಮಾರಿ ಅಪೂರ್ವ ಕಲಾದಗಿ, ಕುಮಾರ ಸರ್ವಜ್ಞ ಗುರ್ಜಾಲ ಮತ್ತು ಕುಮಾರಿ ಶ್ರದ್ಧಾ ಚಿಲ್ಲಾಳ ಇವರು ತಮ್ಮ ಎರಡು ವರ್ಷಗಳ ಅನುಭವಗಳನ್ನು ಹಂಚಿಕೊಂಡರು. 

ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಪ್ರಾಚಾರ್ಯರಾದ ಟಿ. ಆರ್‌. ಕುಲಕರ್ಣಿ ರವರು ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕರಾದ ಅಶೋಕ ಕೆ. ಸಣ್ಣಿಂಗಮ್ಮನವರ ಮತ್ತು ಜೆ. ಎಸ್‌. ಯಾದವ ಇವರು ಅತಿಥಿ ಗಣ್ಯರನ್ನು ಪರಿಚಯಿಸಿದರು. ಉಪನ್ಯಾಸಕಿಯರಾದ ಎ. ಎಸ್‌. ಕುಲಕರ್ಣಿ ರವರು ವಾರ್ಷಿಕ ವರದಿ ವಾಚಿಸಿದರು. ಜಿ. ಬಿ. ಕುಲಕರ್ಣಿ ರವರು ಕ್ರೀಡಾ ಪಾರಿತೋಷಕ ಯಾದಿಯನ್ನು ಪ್ರಸ್ತುತಪಡಿಸಿದರು. ವೇದನಿಧಿಆಚಾರ್ಯ ಕುಲಕರ್ಣಿ ರವರು ಕಾರ್ಯಕ್ರಮವನ್ನು ನಿರೂಪಿಸಿದರು. ಆರ್‌. ಜಿ. ದರಬಾರ ರವರು ವಂದಿಸಿದರು. ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.