ಟೆಸ್ಟ್‌ ಕ್ರಿಕೆಟ್‌ನಲ್ಲಿ ಅನಿಲ್‌ ಕುಂಬ್ಳೆ ಬೆಸ್ಟ್‌ ಕ್ಯಾಪ್ಟನ್: ಗಂಭೀರ್‌

ಹೊಸದಿಲ್ಲಿ, ಏ 22,ಸೌರವ್‌ ಗಂಗೂಲಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾಗ ಭಾರತ ತಂಡಕ್ಕೆ  ಪದಾರ್ಪಣೆಗೈದ ಎಡಗೈ ಆರಂಭಿಕ ಬ್ಯಾಟ್ಸ್‌ಮನ್‌ ಗೌತಮ್‌ ಗಂಭೀರ್‌, ಹಲವು ನಾಯಕರ ಗರಡಿಯಲ್ಲಿ ಪಳಗಿದ್ದಾರೆ.  ಭಾರತ ಕ್ರಿಕೆಟ್‌ ಇತಿಹಾಸ ಕಂಡ ನಾಲ್ವರು ಅತ್ಯುತ್ತಮ ನಾಯಕರ ಅಡಿಯಲ್ಲಿ ಆಡಿದ ಅನುಭವ ಹೊಂದಿರುವ ಗಂಭೀರ್‌, ಈಗ  ಆ ನಾಲ್ವರಲ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ತಮ್ಮ ಅಚ್ಚು ಮೆಚ್ಚಿನ ನಾಯಕನನ್ನು ಆಯ್ಕೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ತಮ್ಮ ನೆಚ್ಚಿನ ನಾಯಕ ಇನ್ನಷ್ಟು ಕಾಲ ನಾಯಕನಾಗಿ ಆಡಿದ್ದರೆ ಮತ್ತಷ್ಟು ದಾಖಲೆಗಳನ್ನು ಬರೆಯುತ್ತಿದ್ದರು ಎಂದಿದ್ದಾರೆ.ಧೋನಿ ನಾಯಕತ್ವದ ಅಡಿಯಲ್ಲೇ ಹೆಚ್ಚು ಪಂದ್ಯಗಳನ್ನು ಆಡಿದ್ದ ಗಂಭೀರ್‌, 2007ರ ಟಿ20 ವಿಶ್ವಕಪ್‌ ಮತ್ತು 2011ರಲ್ಲಿ ಐಸಿಸಿ ಏಕದಿನ ಕ್ರಿಕೆಟ್‌ ವಿಶ್ವಕಪ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದ ಭಾರತ ತಂಡದ ಸದಸ್ಯ ಕೂಡ. ಇನ್ನು ವಿರಾಟ್‌ ಕೊಹ್ಲಿ ನಾಯಕನಾಗಿದ್ದಾಗ ಭಾರತ ಟೆಸ್ಟ್‌ ತಂಡಕ್ಕೆ ಗಂಭೀರ್‌ ಕಮ್‌ಬ್ಯಾಕ್‌ ಮಾಡಿದ್ದರು. ಆದರೆ, ನಂತರದ ದಿನಗಳಲ್ಲಿ ತಮ್ಮ 13 ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದ್ದರು.
ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತಕ್ಕೆ ಕೀರ್ತಿತಂದ ಅತ್ಯುತ್ತಮ ನಾಯಕರ ಅಡಿಯಲ್ಲಿ ಗಂಭೀರ್‌ ಆಡಿದ್ದು, ಅದರಲ್ಲಿ ತಾವು ಕಂಡ ಶ್ರೇಷ್ಠ ನಾಯಕ ಯಾರೆಂದು ಹೆಸರಿಸಿದ್ದಾರೆ. ಧೋನಿ ನಾಯಕತ್ವದಲ್ಲಿ ಭಾರತ ತಂಡ ಟೆಸ್ಟ್‌ ಶ್ರೇಯಾಂಕ ಪಟ್ಟಿಯಲ್ಲಿ ಮೊದಲ ಬಾರಿ ನಂ.1 ಸ್ಥಾನದೊಂದಿಗೆ ವರ್ಷದ ಕೊನೆಗೆ ಟ್ರೋಫಿ ಎತ್ತಿ ಹಿಡಿದಿತ್ತು. ಆದರೆ, ಗಂಭೀರ್ ಅವರ ನೆಚ್ಚಿನ ಕನ್ನಡಿಗ ನಾಯಕ ಅನಿಲ್‌ ಕುಂಬ್ಳೆ ಎಂದಿದ್ದಾರೆ. "ದಾಖಲೆಗಳನ್ನು ಗಮನಿಸಿದರೆ ಎಂಎಸ್‌ ಧೋನಿ ಎಂದು ಹೇಳಬೇಕಾಗುತ್ತದೆ. ಆದರೆ ನನ್ನ ಪ್ರಕಾರ ನಾನು ಕಂಡ ಅತ್ಯುತ್ತಮ ಟೆಸ್ಟ್‌ ನಾಯಕರಲ್ಲಿ ಅನಿಲ್‌ ಕುಂಬ್ಳೆ ಮೊದಲಿಗರು. ಸೌರವ್‌ ಗಂಗೂಲಿ ಕೂಡ ಉತ್ತಮವಾಗಿ ನಿಭಾಯಿಸಿದ್ದರು. ಆದರೆ, ಕುಂಬ್ಳೆ ಇನ್ನಷ್ಟು ಕಾಲ ನಾಯಕರಾಗಿ ಮುಂದುವರಿಯಬೇಕಿತ್ತು. ನಾನು ಕುಂಬ್ಳೆ ನಾಯಕತ್ವದಡಿಯಲ್ಲಿ 6 ಟೆಸ್ಟ್‌ಗಳನ್ನು ಆಡಿದ್ದೇನೆ. ಅವರು ಹೆಚ್ಚು ಸಮಯ ನಾಯಕರಾಗಿ ಇರಲಿಲ್ಲ. ಅವರೇನಾದರೂ ಬಹಳ ಸಮಯ ನಾಯಕನಾಗಿ ಉಳಿದಿದ್ದರೆ ಇನ್ನು ಸಾಕಷ್ಟು ದಾಖಲೆಗಳನ್ನು ಮುರಿಯುತ್ತಿದ್ದರು," ಎಂದಿದ್ದಾರೆ.