ಸಲಿಂಗ ಯುವತಿಯರ ಸಹಜೀವನದ ಹಕ್ಕನ್ನು ಎತ್ತಿ ಹಿಡಿದಿರುವ ಆಂಧ್ರ ಪ್ರದೇಶ ಹೈಕೋರ್ಟ್‌

Andhra Pradesh High Court upholds same-sex cohabitation rights of young women

ಅಮರಾವತಿ 19: ಸಲಿಂಗ ಯುವತಿಯರ ಸಹಜೀವನದ ಹಕ್ಕನ್ನು ಎತ್ತಿ ಹಿಡಿದಿರುವ ಆಂಧ್ರ ಪ್ರದೇಶ ಹೈಕೋರ್ಟ್‌, ತಮ್ಮ ಸಂಗಾತಿಯ ಆಯ್ಕೆಯ ಸ್ವಾತಂತ್ರ್ಯವನ್ನು ದೃಢೀಕರಿಸಿದೆ.

ತನ್ನ ಸಂಗಾತಿ ಮಾಲಾ (ಹೆಸರು ಬದಲಿಸಲಾಗಿದೆ) ಇಚ್ಛೆಯ ವಿರುದ್ಧವಾಗಿ ಅವರ ಪಾಲಕರು ನರಸಿಪಟ್ಟಣಂನಲ್ಲಿ ಅಕ್ರಮವಾಗಿ ಬಂಧಿಸಿಟ್ಟಿದ್ದಾರೆ ಎಂದು ಸಂಗೀತಾ (ಹೆಸರು ಬದಲಿಸಲಾಗಿದೆ) ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನ್ಯಾ. ರಘುನಂದನ್ ರಾವ್ ಹಾಗೂ ನ್ಯಾ. ಕೆ. ಮಹೇಶ್ವರ ರಾವ್ ಅವರನ್ನೊಳಗೊಂಡ ವಿಭಾಗೀಯ ಪೀಠವು ನಡೆಸಿತ್ತು.

ವಿಜಯವಾಡದಲ್ಲಿ ನೆಲೆಸಿರುವ ಈ ಜೋಡಿಯು ಕಳೆದ ಒಂದು ವರ್ಷದಿಂದ ಸಹಜೀವನ ನಡೆಸುತ್ತಿದ್ದಾರೆ.

ಸಂಗಾತಿ ಕಾಣೆಯಾಗಿರುವ ಕುರಿತು ಸಂಗೀತ ನೀಡಿದ ದೂರಿನನ್ವಯ ಪೊಲೀಸರು ತನಿಖೆ ಕೈಗೊಂಡು, ಲಲಿತಾ ಅವರನ್ನು ಅವರ ಪಾಲಕರ ಮನೆಯಲ್ಲಿ ಪತ್ತೆ ಮಾಡಿದ್ದರು. ಅವರನ್ನು ರಕ್ಷಿಸಿದ ನಂತರ, ಪುನರ್ವಸತಿ ಕೇಂದ್ರದಲ್ಲಿ 15 ದಿನಗಳ ಕಾಲ ಅವರನ್ನು ಇಡಲಾಗಿತ್ತು. ತಾನು ವಯಸ್ಕಳಾಗಿದ್ದು, ನನ್ನ ಸಂಗಾತಿಯೊಂದಿಗೆ ಇರಬಯಸುತ್ತೇನೆ ಎಂದು ಅವರು ಮನವಿ ಸಲ್ಲಿಸಿದ್ದರು. ಜತೆಗೆ ತನ್ನನ್ನು ಅಕ್ರಮ ಬಂಧನದಲ್ಲಿಟ್ಟಿರುವ ಕುರಿತು ತನ್ನ ತಂದೆಯ ವಿರುದ್ಧ ಮಾಲಾ ದೂರು ನೀಡಿದ್ದರು.

ಪೊಲೀಸರ ಮಧ್ಯಪ್ರವೇಶದಿಂದಾಗಿ ಮಾಲಾ ವಿಜಯವಾಡಕ್ಕೆ ಬಂದಿದ್ದರು ಹಾಗೂ ವೃತ್ತಿಗಾಗಿ ಕಚೇರಿಗೆ ಹೋಗುತ್ತಿದ್ದರು. ಜತೆಗೆ ತನ್ನ ಸಂಗಾತಿಯನ್ನೂ ಆಗಾಗ್ಗ ಭೇಟಿಯಾಗುತ್ತಿದ್ದರು. ಆದರೆ ಈ ನಡುವೆ, ಮಾಲಾ ಅವರ ತಂದೆ ಬಲವಂತದಿಂದ ಮಗಳನ್ನು ತಮ್ಮ ಕಾರಿನಲ್ಲಿ ಕರೆದೊಯ್ದಿದ್ದರು. ಇದರ ವಿರುದ್ಧ ಸಂಗೀತಾ ಅವರು ನ್ಯಾಯಾಲಯದಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದರು.

ಇದಕ್ಕೆ ವಿರುದ್ಧವಾಗಿ ಮಾಲಾ ಅವರ ತಂದೆಯೂ ಸಂಗೀತಾ ವಿರುದ್ಧ ಪ್ರತಿ ದೂರು ನೀಡಿದ್ದು, ತನ್ನ ಮಗಳ ಭೇಟಿಗೆ ಪಾಲಕರಿಗೆ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದ್ದರು.

ಮಾಲಾ ಅವರು ವಯಸ್ಕರಾಗಿದ್ದು, ಅವರ ಬದುಕಿನ ನಿರ್ಧಾರವನ್ನು ಅವರೇ ತೆಗೆದುಕೊಳ್ಳಲು ಸ್ವತಂತ್ರರು ಮತ್ತು ಶಕ್ತರು. ಹೀಗಾಗಿ ಈ ಜೋಡಿಯ ಸಂಬಂಧದಲ್ಲಿ ಮಧ್ಯಪ್ರವೇಶಿಸಬಾರದು ಎಂದು ಹೈಕೋರ್ಟ್ ಪಾಲಕರಿಗೆ ತಾಕೀತು ಮಾಡಿದೆ.