ಕಡಲಾಚೆಯ ನೋಟ

ವಾಸ್ತವವೇ ಬೇರೆ ಭ್ರಮಾ ಲೋಕವೇ ಬೇರೆ. ಭ್ರಮೆಯಲ್ಲಿ ಇಲ್ಲದ ಸುಖವನ್ನು ತಂದುಕೊಳ್ಳಬಹುದು. ಆದರೆ ವಾಸ್ತವದಲ್ಲಿ ಸುಖದುಃಖ ಎರಡೂ ಅನುಭವಕ್ಕೆ ಮಾತ್ರ ನಿಲುಕುವಂತದ್ದು. ಇಲ್ಲಿ ನಮ್ಮ ಶ್ರಮ, ಸಂಯಮ, ಶ್ರದ್ಧೆ, ಭಯ ಹೀಗೆ ನಾನಾರೀತಿಯ ಭಾವಗಳನ್ನು ಬೇಡುತ್ತದೆ. ಬದುಕು ನಿಂತ ನೀರಲ್ಲ. ಸಾಗುತ್ತಲೇ ಇರುತ್ತದೆ ಆದರೂ ಆ ಸಾಗಾಟದಲ್ಲಿ ಸಾಕಷ್ಟು ಸಂಘರ್ಷ, ಸಾಹಸ, ವಿಪರೀತ ಎನ್ನುವ ಒದ್ದಾಟ ಎಲ್ಲವೂ ಎದುರಿಸಬೇಕಾಗುತ್ತದೆ. ಇಲ್ಲವಾದರೆ ಆತನೊಬ್ಬ ಜಡ ಮನುಷ್ಯನಾಗಿ ಬಿಡುತ್ತಾನೆ. ಇನ್ನು ಕೆಲವು ಬಾರಿಗೆ ನಾವು ಅಂದುಕೊಂಡಿದ್ದು ಒಂದಾದರೆ ನಮ್ಮ ಎದುರು ಬಂದು ನಿಲ್ಲುವುದು ಬೇರೆಯದ್ದಾಗಿರುತ್ತದೆ. ಕೆಲವರಿಗೆ ಕೈಗೆಟಕುವಷ್ಟು ಹತ್ತಿರದಲ್ಲಿ ಅವರ ಕನಸುಗಳಿದ್ದರೂ ಅದನ್ನು ಮುಟ್ಟಿದರೆ ಏನಾಗುವುದೋ? ಯಾರೆನೆಂದುಕೊಳ್ಳುವರೋ ಎನ್ನುವ ಆತಂಕ ಇರುತ್ತದೆ. ಇಂಥಹ ಎಲ್ಲ ಆಗುಹೋಗುಗಳನ್ನು ದಾಟಿ ಹೊಸ ಮಜಲಿಗೆ ತೆರೆದುಕೊಳ್ಳಲು ಸಿದ್ದ ಆಗುವವನಿಗೆ ಜಯ ಸಿಗುತ್ತದೆ.  

ಮೊನ್ನೆ ದಿನ ಬಸ್ಸು ಹತ್ತಿ ಸೀಟ್ ಹುಡುಕಿದೆ. ಬಸ್ಸಿನ ಬಾಗಿಲ ಪಕ್ಕದಲ್ಲಿರುವ ಇಬ್ಬರು ಕುಳಿತುಕೊಳ್ಳುವ ಸೀಟಿನಲ್ಲಿ ಒಂದು ಜಾಗವಿತ್ತು. ಅಲ್ಲಿಯೇ ಹೋಗಿ ಕುಳಿತೆ. ಒಂದಷ್ಟು ಸಮಯವಾದ ನಂತರ ಪಕ್ಕದಲ್ಲಿ ಕುಳಿತವಳನ್ನು ನೋಡಿದೆ. ಇನ್ನೂ ಅಂದಾಜು ಹದಿನೆಂಟರವಯಸ್ಸಿನ ಹುಡುಗಿಯಾಗಿರಬಹುದು. ಆಕೆಗೆ ಮದುವೆಯಾಗಿದೆ. ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ಒಂದಷ್ಟು ತನ್ನ ಬಟ್ಟೆಯನ್ನು ತುಂಬಿಕೊಂಡಿದ್ದಾಳೆ. ಆ ಬಟ್ಟೆ ತುಂಬಿದ ಕೊಟ್ಟೆಯನ್ನು ತನ್ನ ಎದೆಗೆ ಅವುಚಿಕೊಂಡು ಬಸ್ಸಿನಲ್ಲಿದ್ದವರನ್ನೊಮ್ಮೆ, ಕಿಟಕಿಯ ಮೂಲಕ ಹೊರ ಜಗತ್ತನ್ನೊಮ್ಮೆ ನೋಡುತ್ತಾಳೆ. ಅದೇನೋ ಖುಷಿ. ಪುಳಕ ಅವಳದ್ದು. ಅವಳ ಮುಖದಲ್ಲಿ ಆಗಾಗ ಬಂದು ಹೋಗುವ ಭಯ ಮಿಶ್ರಿತ ಸಂತೋಷ ಕಂಡು ನನ್ನ ಹಳೆಯ ದಿನಗಳು ನೆನಪಾದವು. ಮೊದಲ ಬಾರಿ ಬಸ್ ಹತ್ತಿದಾಗ ನಾನು ಕೂಡ ಕೈಲಿದ್ದ ಚೀಲವನ್ನು ಎದೆಗೆ ಅವುಚಿಕೊಂಡು ಕೂತಿದ್ದೆ. ಆ ಚೀಲದಲ್ಲಿಯ ವಸ್ತುಗಳು ನನ್ನ ಬಿಟ್ಟು ಹೋಗಬಾರದು. ಬಸ್ಸಿನ  ಕುಲುಕಾಟಕ್ಕೆ ಅವು ಚಿಲ್ಲಾಪಿಲ್ಲಿಯಾಗಿ ನಾನು ನಗೆಪಾಟಲಿಗೆ ಬೀಳಬಾರದು ಎಂದು. ಅಲ್ಲದೇ ನಾನು ಇಳಿಯುವ ಸ್ಥಳ ತಿಳಿಯದೇ ದಾಟಿಕೊಂಡು ನಡೆದುಬಿಟ್ಟರೆ ಎನ್ನುವ ಆತಂಕ. ಒಬ್ಬಳೆ ಬಸ್ಸಿಗೆ ಹೋಗುತ್ತಿದ್ದೇನೆ ಎನ್ನುವ ಖುಷಿ. ಈ ಎಲ್ಲ ಭಾವಗಳನ್ನು ನಾನು ಈ ಹುಡುಗಿಯಲ್ಲಿ ಕಂಡೆ.  

ಅಂದಿನ ಮುಗ್ದತೆಯನ್ನು ದಾಟಿ ಇಂದು ಬಹಳಷ್ಟು ಮುಂದೆ ಬಂದಿದ್ದಾಗಿದೆ. ಸಮಾಜದಲ್ಲಿ ನನ್ನ ಗುರುತಿಸಿಕೊಳ್ಳುವ ತುಡಿತಕ್ಕೆ  ದಿನವೂ ಹೆಜ್ಜೆ ಇಡುತ್ತಲೇ ಇದ್ದೇನೆ. ಕುಳಿತಲ್ಲಿಯೆ ಹತ್ತರಲ್ಲಿ ಹನ್ನೊಂದು ಎಂದು ಬದುಕುವುದು ಬೇರೆ, ನಾವು ಬೇರೆ ರೀತಿಯಾಗಿಯೇ ಬದುಕಬೇಕು ಎಂದೆಣಿಸಿ ಸಾಗುವುದು ಇದೆಯಲ್ಲ ಅದು ನಿಜವಾಗಿ ನಮ್ಮ ಸಾಮರ್ಥ್ಯದ  ಪರೀಕ್ಷೆಯಾಗುತ್ತದೆ.  

ಅದೊಂದು ಪುಟ್ಟ ದ್ವೀಪ. ಆ ದ್ವೀಪದಲ್ಲಿ ಸಾಕಷ್ಟು ಜನರು ಒಟ್ಟಿಗೆ ಬದುಕುತ್ತಿದ್ದರು. ಸಮುದ್ರದ ಮಧ್ಯದ ದ್ವೀಪವಾಗಿದ್ದರಿಂದ ಅಲ್ಲಿ ಉಪ್ಪು ನೀರು ಮಾತ್ರ ಸಿಗುತಿತ್ತು. ಸಿಹಿ ನೀರಿಗಾಗಿ ಬಾವಿ ತೋಡಿದರೂ ಉಪ್ಪು ನೀರೆ ಬರುತಿತ್ತು. ಆ ದ್ವಿಪದಿಂದ ದೂರದಲ್ಲಿ ಒಂದು ಹಸಿರು ವನ ಕಾಣಿಸುತಿತ್ತು. ಮೀನುಗಾರ ಯುವಕನೊಬ್ಬನಿಗೆ ಆ ಹಸಿರು ತಾಣದತ್ತ ತಾನು ಹೋಗಬೇಕು ಎಂದು ಬಯಸಿದ. ತನ್ನ ಜೊತೆಗಾರರಲ್ಲಿ ಈ ಮೀನು ಹಿಡಿಯುವ ದೋಣಿಯನ್ನು ಅತ್ತ ಚಲಾಯಿಸಲು ಒಪ್ಪಿಸಿದ. ಆದರೆ ಆ ಹಸಿರುಬನದ ಬಳಿ ಬಂದಂತೆ ದೊಡ್ಡದೊಡ್ಡ ಸಮುದ್ರದ ತೆರೆಗಳು ಕಾಣಿಸಿಕೊಂಡವು. ಪುಟ್ಟ ದೋಣಿ ಮೊಗಚಿ ಬೀಳುವುದು ಎಂದು ಹಿಂತಿರುಗಿದರು. ಈ ವಿಚಾರ ಊರವರಿಗೆಲ್ಲ ತಿಳಿದು ಆ ಮಿನುಗಾರ ಯುವಕನಿಗೆ ಅಂಥಹ ಸಾಹಸ ಮಾಡಬೇಡ. ನಾವು ಎಲ್ಲಿದ್ದೇವೋ ಅಲ್ಲಿಯೇ ಇರೋಣ. ಅಲ್ಲಿ ಹೋಗಿ ಜೀವ ಕಳೆದುಕೊಳ್ಳುವುದು ಬೇಡ ಎಂದು ತಿಳಿಸಿ ಬುದ್ಧಿ ಹೇಳಿದರು. ಆದರೆ ಆ ಹುಡುಗನಿಗೆ ಹೇಗಾದರೂ ಒಮ್ಮೆ ಆ ತೆರೆಗಳನ್ನು ದಾಟಿ ಹಸಿರುಬನಕ್ಕೆ ಹೋಗಬೇಕು ಎನ್ನುವ ಆಶೆ. ಅಲ್ಲದೇ ದಿನಬೆಳಗ್ಗೆಯಿಂದ ಅದರ ಬಗ್ಗೆಯೇ ಯೋಚನೆ.   

ಒಂದು ದಿನ ರಾತ್ರಿ ಮಲಗಿದಾಗ ತಾನೇಕೆ ದೊಡ್ಡ ದೋಣಿ ತಯಾರಿಸಬಾರದು ಅನ್ನಿಸಿತು. ಮಾರನೇ ದಿನದಿಂದ ತಾನು ದೊಡ್ಡ ದೋಣಿಯನ್ನು ತಯಾರಿಸಲು ಆರಂಭಿಸಿದ. ಕೇಳಿದವರಿಗೆಲ್ಲ ಇದು ಮೀನು ಹಿಡಿಯಲು ತಯಾರಿಸುತ್ತಿದ್ದೇನೆ ಎಂದು ಮಾತ್ರ ಹೇಳಿದ. ಒಂದು ದೊಡ್ಡ ದೋಣಿ ತಯಾರಾದ ಮೇಲೆ ತನ್ನ ಕೆಲವು ಆಪ್ತ ಸ್ನೇಹಿತರ ಜೊತೆ ಸಮುದ್ರಯಾನ ಬೆಳೆಸಿದ. ದೊಡ್ಡ ತೆರೆಗಳು ಈ ದೋಣಿಯನ್ನು ಮುಳುಗಿಸುತ್ತವೆ ಎಂದು ಅರಿವಾದಾಗ ಆ ಸಮುದ್ರವನ್ನು ಒಂದಷ್ಟು ಸುತ್ತು ಹಾಕುವ ಮನಸ್ಸು ಮಾಡಿದ. ಒಂದು ನದಿ ಸೇರುವ ಪ್ರದೇಶದಲ್ಲಿ ತೆರೆಗಳು ಅಷ್ಟಾಗಿ ಇರಲಿಲ್ಲ. ಅಲ್ಲಿಂದ ಭೂಪ್ರದೇಶವನ್ನು ಹೊಕ್ಕು ಆ ವನವನ್ನು ನೋಡಿದರು. ನೀರಡಿಕೆ ಆಯಿತೆಂದು ಅಲ್ಲಿಯೇ ಕಂಡ ನೀರನ್ನು ತಾವು ಒಯ್ದಿದ್ದ ನೀರಿನ ಪಾತ್ರೆಯಲ್ಲಿ ತೆಗೆದುಕೊಂಡರು. ಈಗ ಇದರಿಂದ ಉಪ್ಪು ಬೇರಿ​‍್ಡಸುವುದು ಹೇಗೆ ಎಂದು ಯೋಚಿಸಿದರು. ಅವರಿಗೆ ಇದು ಸಿಹಿ ನೀರು ಎಂದು ಗೊತ್ತೇ ಇರಲಿಲ್ಲ. ಆದರೂ ಇದರ ಉಪ್ಪಿನ ಕಟು ಎಷ್ಟಿದೆ ನೋಡೋಣ ಎಂದು ಆ ಯುವಕ ಒಂದು ಗುಟುಕು ಬಾಯಿಗೆ ಇಟ್ಟುಕೊಂಡ. ನೀರು ಸಿಹಿಯಾಗಿತ್ತು. ಅಂದು ಹೊಟ್ಟೆ ತುಂಬಾ ಆ ನೀರನ್ನೇ ಕುಡಿದು ತಮ್ಮೂರಿಗೂ ಆ ನೀರನ್ನು ತೆಗೆದುಕೊಂಡು ಬಂದು ಎಲ್ಲ ವಿಚಾರವನ್ನು ತಿಳಿಸಿದ. ಆ ನಂತರದಲ್ಲಿ ಯುವಕನ ಸಾಹಸ ಕಂಡು ಶಬ್ಬಾಶ್ ಹೇಳಿದ್ದಲ್ಲದೇ ಇಡೀ ಆ ದ್ವೀಪದ ಜನರೆಲ್ಲ ತಮ್ಮ ಸಂಸಾರ, ಸಾಮಾನು ಸರಂಜಾಮಿನ ಜೊತೆ ಭೂಮಿಯತ್ತ ಬಂದರು.  

ಇದೊಂದು ಕಥೆ ಅಷ್ಟೆ. ಆದರೆ ಮನುಷ್ಯ ಪ್ರಯತ್ನ ಎನ್ನುವದು ಯಾವ ಮಟ್ಟಕ್ಕೆ ಇರಬೇಕು ಎನ್ನುವದು ತೋರಿಸುತ್ತದೆ. ನಾವು ಸುಮ್ಮನೆ ಕುಳಿತರೆ ನಿಂತ ನೀರಾಗಿರುತ್ತೇವೆ. ಕಷ್ಟವಾದರೂ ಸರಿ ಒಂದಷ್ಟು ನಡೆಯುತ್ತಿರಬೇಕು. ಅಲ್ಲಿ ಒಳ್ಳೇಯದು ಕೆಟ್ಟದ್ದು ಎಲ್ಲವೂ ಸಿಗುತ್ತದೆ. ಅದರಲ್ಲಿ ನಮಗೆ ಬೇಕಾದದ್ದನ್ನು ಆಯ್ಕೆ ಮಾಡಿಕೊಳ್ಳಬೇಕು. ಟೀಕೆ ಟಿಪ್ಪಣಿಗಳು ಬರುತ್ತವೆ ಅದನ್ನು ನೆನಪಿಸಿಕೊಂಡು ಅಳುವ ಬದಲು ನಾವು ಮಾಡಲು ಹೊರಟಿದ್ದಕ್ಕೆ ಮಾತ್ರ ಗಮನ ಕೊಟ್ಟರೆ ಬಹುಶಹ ನಮ್ಮ ಗುರಿಯ ದಾರಿ ಬಹಳ ಬೇಗ ಚಿಕ್ಕದಾಗಿಬಿಡುತ್ತದೆ. ಯುವಕನ ಕಡಲಾಚೆಯ ಒಂದು ದಿನದ ನೋಟವು ಇಡೀ ದ್ವೀಪದ ಜನರೆಲ್ಲ ಸಿಹೀನೀರನ ಭೂಮಿಗೆ ಬರುವಂತಾಯಿತು. ನಮ್ಮ ನೋಟ ನಮ್ಮ ಬದುಕನ್ನಾದರೂ ಉಜ್ವಲವಾಗಿಸಬಾರದೆ!  

- * * * -