ಕರ್ನಾಟಕಕ್ಕೆ ಇನ್ನಿಂಗ್ಸ್ ಮುನ್ನಡೆ, ಡ್ರಾ ದತ್ತ ಮುಖಮಾಡಿದ ಪಂದ್ಯ

ಹುಬ್ಬಳ್ಳಿ, ಡಿ.19 :      ಆಲ್ ರೌಂಡರ್ ಶ್ರೇಯಸ್ ಗೋಪಾಲ್ (58) ಹಾಗೂ ಜೆ.ಸುಚಿತ್ (28) ಇವರುಗಳ ಸಮಯೋಚಿತ ಬ್ಯಾಟಿಂಗ್ ನೆರವಿನಿಂದ ಕರ್ನಾಟಕ ರಣಜಿ ಟೂರ್ನಿಯಲ್ಲಿ ಉತ್ತರ ಪ್ರದೇಶ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಸಾಧಿಸಿದೆ.   

ಗುರುವಾರ 4 ವಿಕೆಟ್ ಗೆ 168 ರನ್ ಗಳಿಂದ ಆಟ ಮುಂದುವರಿಸಿದ ಕರ್ನಾಟಕ ಭೋಜನ ವಿರಾಮದ ವೇಳೆಗೆ ಮೂರು ವಿಕೆಟ್ ಕಳೆದುಕೊಂಡಿತು. ಶ್ರೇಯಸ್ ಗೋಪಾಲ್ ಜೊತೆಗೆ ಇನ್ನಿಂಗ್ಸ್ ಬೆಳೆಸುವ ಕನಸಿನೊಂದಿಗೆ ಅಂಗಳಕ್ಕೆ ಇಳಿದ ಅಭಿಷೇಕ್ ರೆಡ್ಡಿ, ತಮ್ಮ ಮೊತ್ತಕ್ಕೆ ಒಂಬತ್ತು ರನ್ ಸೇರಿಸಿ ಔಟ್ ಆದರು.   

ವಿಕೆಟ್ ಕೀಪರ್ ಬಿ.ಆರ್.ಶರತ್ ಒಂದು ಬೌಂಡರಿ, ಒಂದು ಸಿಕ್ಸರ್ ಸಹಾಯದಿಂದ 16 ರನ್ ಬಾರಿಸಿ ಔಟ್ ಆದರು. ಡೇವಿಡ್ ಮಥಾಯಿಸ್ (4) ಬೇಗನೆ ವಿಕೆಟ್ ಒಪ್ಪಿಸಿದರು.   

ಎಂಟನೇ ವಿಕೆಟ್ ಗೆ ಆಲ್ ರೌಂಡರ್ ಗಳಾದ ಶ್ರೇಯಸ್ ಗೋಪಾಲ್ ಹಾಗೂ ಜೆ.ಸುಚಿತ್ ಉತ್ತಮ ಜೊತೆಯಾಟದ ಕಾಣಿಕೆ ನೀಡಿ ತಂಡಕ್ಕೆ ಆಸರೆಯಾದರು. ಈ ಜೋಡಿ ಇನ್ನಿಂಗ್ಸ್ ಹಿನ್ನಡೆಯ ಭೀತಿಯಲ್ಲಿದ್ದ ತಂಡಕ್ಕೆ ಚೇತರಿಕೆ ನೀಡಿತು. ಸೊಗಸಾದ ಬ್ಯಾಟಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಗೋಪಾಲ್, 182 ಎಸೆತಗಳಲ್ಲಿ 6 ಬೌಂಡರಿ ಸೇರಿದಂತೆ 58 ರನ್ ಬಾರಿಸಿ, ಸೌರಭ್ ಕುಮಾರ್ ಗೆ ವಿಕೆಟ್ ಒಪ್ಪಿಸಿದರು.   

ಜೆ.ಸುಚಿತ್ 2 ಬೌಂಡರಿ ಸಹಾಯದಿಂದ 28 ರನ್ ಸಿಡಿಸಿ ಔಟ್ ಆದರು. ಅಭಿಮನ್ಯು ಮಿಥುನ್ ಕೊನೆಯಲ್ಲಿ ಬಿರುಸಿನ ಬ್ಯಾಟಿಂಗ್ ನಡೆಸಿದರು. 3 ಬೌಂಡರಿ, 1 ಸಿಕ್ಸರ್ ಸಹಾಯದಿಂದ 34 ರನ್ ಬಾರಿಸಿದ ಇವರು ಅಜೇಯರಾಗುಳಿದರು. ಅಂತಿಮವಾಗಿ ಕರ್ನಾಟಕ 321 ರನ್ ಗಳಿಗೆ ಆಲೌಟ್ ಆಯಿತು.  

 ಉತ್ತರ ಪ್ರದೇಶ ಪರ ಸ್ಪಿನ್ ಬೌಲರ್ ಸೌರಭ್ ಕುಮಾರ್ ಮೊನಚಾದ ದಾಳಿ ನಡೆಸಿದರು. 116 ರನ್ ನೀಡಿದ ಸೌರಭ್ ಆರು ವಿಕೆಟ್ ಪಡೆದರು.   

40 ರನ್ ಹಿನ್ನಡೆಯಿಂದ ಎರಡನೇ ಇನ್ನಿಂಗ್ಸ್ ಆರಂಭಿಸಿದ ಉತ್ತರ ಪ್ರದೇಶ ದಿನದಾಟದ ಅಂತ್ಯಕ್ಕೆ ತಮಿಳುನಾಡು ಒಂದು ವಿಕೆಟ್ ನಷ್ಟಕ್ಕೆ 25 ರನ್ ಕಲೆ ಹಾಕಿದೆ. ಮಾಧವ್ ಕೌಶಿಕ್ (19), ಅಲ್ಮಾಸ್ (6) ಕೊನೆಯ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.     

ಸಂಕ್ಷಿಪ್ತ ಸ್ಕೋರ್ 

ಉತ್ತರ ಪ್ರದೇಶ ಮೊದಲ ಇನ್ನಿಂಗ್ಸ್ 281, ಎರಡನೇ ಇನ್ನಿಂಗ್ಸ್  ಒಂದು ವಿಕೆಟ್ ನಷ್ಟಕ್ಕೆ 25

ಕರ್ನಾಟಕ ಮೊದಲ ಇನ್ನಿಂಗ್ಸ್ 321