ಲೋಕದರ್ಶನ ವರದಿ
ಮೂಡಲಗಿ 14: ಸ್ಥಳೀಯ ಮಂಜುನಾಥ ಸೈನಿಕ ತರಭೇತಿ ಕೇಂದ್ರ ಮತ್ತು ಗಾರ್ಡನ್ ಅಭಿವೃದ್ದಿ ಸಂಸ್ಥೆಯಿಂದ ಕಳೆದ ವರ್ಷ ಫೆ. 14ರಂದು ಜಮ್ಮುವಿನ ಪುಲ್ವಾಮದಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಹುತಾತ್ಮರಾದ ಕೇಂದ್ರ ಮೀಸಲು ಪಡೆಯ ವೀರಯೋಧರ ಬಲಿದಾನದ ನೆನಪಿಗಾಗಿ ಭಾವಪೂರ್ಣ ಶ್ರದ್ದಾಂಜಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹುತಾತ್ಮರಾದ 44 ವೀರಯೋಧರರಿಗೆ ಮೌನಚರಣೆ ಮಾಡುವ ಮೂಲಕ ಶ್ರದ್ದಾಂಜಲಿ ಅರ್ಪಿಸಲಾಯಿತು.
ಮೂಡಲಗಿ ವೃತ್ತ ನಿರೀಕ್ಷಕ ವೆಂಕಟೇಶ ಮುರನಾಳ ವೀರ ಯೋಧರಿಗೆ ನುಡಿನಮನ ಸಲ್ಲಿಸಿ ಮಾತನಾಡಿ, ಕಳೆದ ವರ್ಷ ಫೆ. 14ರಂದು ನಡೆದ ಜೈಷ್ ಇ ಮೊಹಮದ್ ಭಯೋತ್ಪಾದಕ ಸಂಘಟನೆಯ ಕೃತ್ಯ ದೇಶವೇ ಬೆಚ್ಚಿ ಬೀಳಿಸುವಂತಹದು. ನಮ್ಮ ಭಾರತೀಯ ವೀರ ಯೋಧರನ್ನು ಎದುರಿಸಲೂ ಯೋಗ್ಯತೆ ಇಲ್ಲದ ಉಗ್ರಾಗಾಮಿಗಳು ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದ ಸಿಆರ್ಫಿಎಫ್ ಯೋಧರ ವಾಹನಕ್ಕೆ ಅತ್ಮಾಹುತಿ ಬಾಂಬರ್ ಇದ್ದ ವಾಹನ ಡಿಕ್ಕಿ ಹೊಡೆಸಿ ಸ್ಪೋಟ ನಡೆಸಲಾಯಿತು. ಈ ದಾಳಿಯಿಂದ ಹುತಾತ್ಮರಾದ 44 ವೀರಯೋಧರರಿಗೆ ಗೌರವ ಸಲ್ಲಿಸಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಕೆಲವರು ಪಾಶ್ಚತ್ಯ ಸಂಸ್ಸೃತಿಗೆ ಮಾರು ಹೋಗಿ ಫೆ.14ರಂದು ಪ್ರೇಮಿಗಳ ದಿನಾಚರಣೆಯನ್ನು ಮಾಡುತ್ತಿರುವುದು ನಮ್ಮ ದುರ್ದೈವವಾಗಿದೆ. ಈ ಸಂಸ್ಥೆಗಳು ಇಂತಹ ಕಾರ್ಯಕ್ರಮ ಹಮ್ಮಿಕೊಂಡು ದೇಶಪ್ರೇಮ ಮೆರೆದಿರುವುದು ಶ್ಲಾಘನೀಯ. ಪ್ರತಿ ವರ್ಷವೂ ಫೆ.14 ವೀರಯೋಧರ ದಿನವಾಗಿ ದೇಶ ಪ್ರೇಮಿಗಳ ದಿನಾಚರಣೆ ನಡೆಯುವಂತಾಗಲಿ ಎಂದರು.
ವಾಸ್ತು ತಜ್ಞ ಎಚ್. ಜಿ. ಹರ್ಷ ಮಾತನಾಡಿ, ಒಬ್ಬ ಸೈನಿಕ ನಮ್ಮ ದೇಶದ ಆಸ್ತಿಯಾಗಿದ್ದಾನೆ. ಕಳೆದ ವರ್ಷ ಪುಲ್ವಾಮದಲ್ಲಿ ಭಯೋತ್ಪಾದಕರ ಅಟ್ಟಹಾಸಕ್ಕೆ ನಮ್ಮ ದೇಶದ 44 ಅಮೂಲ್ಯ ಆಸ್ತಿಯನ್ನು ಕಳೆದುಕೊಂಡಿರುವುದು ನಮಗೆ ನೋವಿನ ಸಂಗತಿಯಾಗಿದೆ. ಉಗ್ರರ ಅಟ್ಟಹಾಸದಲ್ಲಿ ಭಾರತದ ಆಸ್ಮಿತತೆಯ ಉಳಿವಿಗಾಗಿ ಹೋರಾಟ ನಡೆಸಿ ತಾಯಿ ಭಾರತಾಂಬೆಯ ಮಡಿಲಲ್ಲಿ ವೀರ ಮರಣವನ್ನಪ್ಪಿದ ವೀರಯೋಧರಿಗೆ ಶತ ಶತ ನಮನಗಳು. ಯುವಕರು ದೇಶ ಸೇವೆ ಮಾಡುವುದರ ಜೊತೆಗೆ ದೇಶ ಕಾಯುವ ಸೈನಿಕರಿಗೆ ಗೌರವ ಸಲ್ಲಿಸುವ ಕಾರ್ಯವನ್ನು ಮಾಡಬೇಕು ಎಂದರು.
ನಿವೃತ್ತ ಸೈನಿಕರಾದ ಎಂ.ಡಿ ಮಹಾದೇವ ಮಾತನಾಡಿ, ಸೈನ್ಯದಲ್ಲಿ ಸೇವೆ ಮಾಡುವುದು ಪುಣ್ಯದ ಕೆಲಸವಾಗಿದೆ. ದೇಶ ಸೇವೆಯಂತಹ ಪವಿತ್ರ ಕೆಲಸ ಕೆಲವರಿಗೆ ಮಾತ್ರ ಸಿಗುತ್ತದೆ ಈ ನಿಟ್ಟಿನಲ್ಲಿ ಶ್ರೀ ಮಂಜುನಾಥ ಸೈನಿಕ ತರಭೇತಿ ಕೇಂದ್ರವು ಯುವಕರಿಗೆ ತಾಯಿ ಭಾರತೀಯ ಸೇವೆ ಮಾಡಲು ಅನುಕೂಲಕರ ಮಾಡಿರುವುದು ಹೆಮ್ಮೆಯ ವಿಷಯವಾಗಿದೆ. ಗ್ರಾಮೀಣ ಭಾಗದ ಯುವಕರು ಇದರ ಸದುಪಯೋಗ ಪಡೆದು ದೇಶ ಸೇವೆಗೆ ಸಜ್ಜಾಗಬೇಕು ಎಂದು ಹೇಳಿದರು.
ಭಾರತೀಯ ಸೇನೆಯಲ್ಲಿ ಹರಿಯಾಣ ರಾಜ್ಯದಲ್ಲಿ ಸೇನಾ ಹವಲ್ದಾರ ಆಗಿ ಕಾರ್ಯ ನಿರ್ವಹಿಸುತ್ತಿರುವ ರಫೀಕ ಶೇಖ ಮಾತನಾಡಿ, ಭಾರತೀಯ ಸೇನೆಗೆ ಹೆಚ್ಚು ಹೆಚ್ಚು ಯುವಕರು ಸೇರಬೇಕಾಗಿದೆ. ಭಾರತೀಯ ಸೇನೆ ಸೇರುವುದರಿಂದ ನಮ್ಮ ಆರ್ಥಿಕತೆ ಉತ್ತಮವಾಗುತ್ತದೆ ಎಂಬ ಅಲೋಚನೆಯನ್ನು ಬಿಟ್ಟು ದೇಶ ಸೇವೆಯಲ್ಲಿ ತೊಡಗಬೇಕು ಎಂಬ ನಿರ್ಧಾರವನ್ನು ಕೈಗೊಳ್ಳಿ. ಸಂಸ್ಥೆಯೂ ಶಿಭಿರಾರ್ಥಿಗಳಿಗೆ ಉತ್ತಮ ತರಭೇತಿ ನೀಡುತ್ತಿದ್ದು ಕಠಿಣ ಪರಿಶ್ರಮ ಮಾಡಿ ಇದರ ಸದುಪಯೋಗ ಪಡೆದುಕೊಳ್ಳಿ ಎಂದರು. ಕಾರ್ಯಕ್ರಮದಲ್ಲಿ ಬೆಂಗಳೂರು ಆರೋಗ್ಯ ಇಲಾಖೆಯ ಅಧಿಕಾರಿ ಬಿ. ತಿಪ್ಪಯ್ಯ, ಸಂಸ್ಥೆಯ ಸಂಸ್ಥಾಪಕ ಎಲ್.ವಾಯ್ ಅಡಿಹುಡಿ, ಮೂಡಲಗಿ ಪ್ರೇಸ್ ಕ್ಲಬ್ ಅಧ್ಯಕ್ಷ ಸುಧಾಕರ ಉಂದ್ರಿ, ಕಾರ್ಯದರ್ಶಿ ಅಲ್ತಾಫ್ ಹವಲ್ದಾರ, ವಿ.ಎಚ್ ಬಾಲರೆಡ್ಡಿ, ಸುಭಾಸ ಗೊಡ್ಯಾಗೋಳ, ಭಗವಂತ ಉಪ್ಪಾರ, ಸುಧೀರ ನಾಯರ್, ಯುವ ಜೀವನ ಸೇವಾ ಸಂಸ್ಥೆಯ ಅಧ್ಯಕ್ಷ ಈರಪ್ಪ ಢವಳೆಶ್ವರ, ಗುರು ಗಂಗನ್ನವರ, ಶಶಿಧರ ಆರಾಧ್ಯ, ಮಂಜು ಕುಂಬಾರ, ರಾಮಣ್ಣ ಮಂಟೂರ ಹಾಗೂ ಶ್ರೀ ಮಂಜುನಾಥ ಸೈನಿಕ ತರಭೇತಿ ಕೇಂದ್ರದ ನೂರಾರು ಶಿಭಿರಾರ್ಥಿಗಳು ಪಾಲ್ಗೋಂಡಿದ್ದರು.