ಅಂಫಾನ್ ಹಾವಳಿ : ಪ್ರಧಾನಿ ಮೋದಿ, ಮುಖ್ಯಮಂತ್ರಿ ಮಮತಾರಿಂದ ವೈಮಾನಿಕ ಸಮೀಕ್ಷೆ

ಕೋಲ್ಕತಾ, ಮೇ 22, ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಜಿಲ್ಲೆಗಳಲ್ಲಿಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.  ಭೀಕರ ಚಂಡಮಾರುತಕ್ಕೆ ಇಲ್ಲಿಯವರೆಗೆ 72 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಅನೇಕ ಪ್ರದೇಶಗಳಿಗೆ ತೆರಳು ಸಾಧ್ಯವಾಗುತ್ತಿಲ್ಲವಾದ್ದರಿಂದ ಅಲ್ಲಿನ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. "ಅಂಫಾನ್ ಚಂಡಮಾರುತದ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಮತ್ತು ಒಡಿಶಾಗೆ ಪ್ರಯಾಣಿಸಲಿದ್ದಾರೆ" ಎಂದು ಪ್ರಧಾನಿ ಕಚೇರಿ ಟ್ವೀಟರ್ ತಿಳಿಸಿದೆ. "ಪ್ರಧಾನಿಯವರು ವೈಮಾನಿಕ ಸಮೀಕ್ಷೆಗಳನ್ನು ನಡೆಸಿ, ಪರಿಶೀಲನಾ ಸಭೆಗಳಲ್ಲಿ ಪಾಲ್ಗೊಳ್ಳುತ್ತಾರೆ, ಅಲ್ಲಿ ಪರಿಹಾರ ಮತ್ತು ಪುನರ್ವಸತಿ ಅಂಶಗಳನ್ನು ಚರ್ಚಿಸಲಾಗುವುದು" ಎಂದು ಅದು ಹೇಳಿದೆ. ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರೊಡನೆ ರಕ್ಷಣಾ ಹೆಲಿಕಾಪ್ಟರ್ ಮೂಲಕ ದಕ್ಷಿಣ 24 ಪರಗಣಗಳು ಮತ್ತು ಉತ್ತರ 24 ಪರಗಣಗಳ ವೈಮಾನಿಕ ಸಮೀಕ್ಷೆಯನ್ನು ನಡೆಸಲಿದ್ದಾರೆ. ಇವು ಚಂಡಮಾರುತದಿಂದ ಹೆಚ್ಚು ಹಾನಿಗೊಳಗಾದ ಜಿಲ್ಲೆಗಳಾಗಿವೆ. ಉತ್ತರ 24 ಪರಗಣ ಜಿಲ್ಲೆಯ ಬಸಿರ್ಹತ್‌ನಲ್ಲಿ ವಿಶೇಷ ಆಡಳಿತ ಸಭೆ ನಡೆಯಲಿದ್ದು, ಪ್ರಧಾನಿ ಮತ್ತು ಸಿಎಂ ಇಬ್ಬರೂ ಸಂಬಂಧಪಟ್ಟ ಆಡಳಿತಾಧಿಕಾರಿಗಳೊಂದಿಗ ಚರ್ಚಿಸಲಿದ್ದಾರೆ.