ಮರಾಠಿ ಚಿತ್ರದಲ್ಲಿ ಅಮಿತಾಬ್..!!!

ಮುಂಬೈ, ಫೆ 13 :   ಬಿಟೌನ್ ಬಿಗ್ ಬಿ ಅಮಿತಾಬ್ ಬಚ್ಚನ್, ಮರಾಠಿ ಚಿತ್ರವೊಂದಕ್ಕೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.

ಎಬಿ ಅಣಿ ಸಿಡಿ ಎಂಬ ಮರಾಠಿ ಚಿತ್ರದಲ್ಲಿ ಅಮಿತಾಬ್ ನಟಿಸುತ್ತಿದ್ದು, ಭಾರಿ ಸುದ್ದಿಯಲ್ಲಿದ್ದಾರೆ. 

ಈ ಚಿತ್ರದ ಬಜೆಟ್ ಕಡಿಮೆ ಇದ್ದ ಕಾರಣ ಅಮಿತಾಬ್, ತಮ್ಮ ಮನೆಯಲ್ಲಿದ್ದ ಬಟ್ಟೆಯನ್ನು ಚಿತ್ರೀಕರಣಕ್ಕೆ ತೆಗೆದುಕೊಂಡು ಬಂದಿದ್ದರು ಎಂಬ ಗುಟ್ಟೊಂದನ್ನು ನಿರ್ಮಾಪಕ ಅಕ್ಷಯ್ ಬಾರದಾಪುರ್ಕರ್ ಬಿಟ್ಟುಕೊಟ್ಟಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅಕ್ಷಯ್, ತಮ್ಮ‌ ಪಾತ್ರಕ್ಕಾಗಿ ತಕ್ಕ ಉಡುಗೆಯನ್ನು ಅಮಿತಾಬ್ ಅವರು ಚಿತ್ರ ತಂಡಕ್ಕೆ ಕೇಳಲಿಲ್ಲ. ಬದಲಾಗಿ ಅವರೇ ತಮ್ಮ ನಿವಾಸದಿಂದ ತೆಗೆದುಕೊಂಡು ಬಂದಿದ್ದರು. ಬಟ್ಟೆ ಅಳತೆ ತೆಗೆದುಕೊಳ್ಳಲು ಟೇಲರ್ ಅನ್ನು ಕಳುಹಿಸುವ ಕುರಿತು ಅಮಿತಾಬ್ ಅವರನ್ನು ಕೇಳಿದಾಗ ಚಿಂತಿಸ ಬೇಡಿ, ನಾನೇ ಬಟ್ಟೆ ತೆಗೆದುಕೊಂಡು ಬರುವೆ ಎಂದು ಉತ್ತರಿಸಿದರು. 

ಚಿತ್ರೀಕರಣ ಆರಂಭದ ದಿನದಂದು ಅಮಿತಾಬ್ ಅವರು , ತಮ್ಮ ವ್ಯಾನ್ ನಲ್ಲಿ ಸುಮಾರು 20 ಜೊತೆ ಬಟ್ಟೆಗಳನ್ನು ತೆಗೆದುಕೊಂಡು ಬಂದಿದ್ದರು. ಇದರಲ್ಲಿ ಯಾವ ಬಟ್ಟೆ ಪಾತ್ರಕ್ಕೆ ಸೂಕ್ತ ವಾಗಲಿದೆ ಎಂದು ನಮ್ಮನ್ನು ಪ್ರಶ್ನಿಸಿದ್ದಾಗಿ ತಿಳಿಸಿದರು.

ಅಮಿತಾಬ್ ಅವರು ಸಲೀಸಾಗಿ ಮರಾಠಿ ಮಾತನಾಡುತ್ತಾರೆ. ಆದರೂ, ನಟನೆ ನಂತರ ಎಲ್ಲವೂ ಸರಿಯಾಗಿದೆಯೇ ಎಂದು ನಿರ್ದೇಶಕರಿಗೆ ಚಿತ್ರೀಕರಣ ಸಂದರ್ಭದಲ್ಲಿ ಪ್ರಶ್ನಿಸುತ್ತಿದ್ದರು. ಕೆಲವೊಮ್ಮೆ ಸ್ವಲ್ಪ ಎಡವಿದರೂ ಬಹುಬೇಗನೆ ಮರಾಠಿ ಭಾಷೆಯ ಪ್ರಭುತ್ವ ಸಾಧಿಸಿಕೊಂಡಿದ್ದಾಗಿ ತಿಳಿಸಿದರು. 

ಅಮಿತಾಬ್ ಮನಸ್ಸು ಮಾಡಿದ್ದರೆ ಬೇರೆಯವರಿಂದ ಡಬ್ಬಿಂಗ್ ಮಾಡಬಹುದಿತ್ತು. ಆದರೆ, ಅಮಿತಾಬ್ ಬಚ್ಚನ್ ಅವರು ಖುದ್ದಾಗಿ ಡಬ್ಬಿಂಗ್ ಮಾಡಿದ್ದಾರೆ ಎಂದು ನಿರ್ಮಾಪಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಚಿತ್ರ ವು ಮಾರ್ಚ್13 ರಂದು ಬಿಡುಗಡೆಗೊಳ್ಳಲಿದೆ.