ಬೆಂಗಳೂರು, ಜ.18, ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ರಾಜ್ಯಕ್ಕೆ ಒಂದು ದಿನದ ಭೇಟಿ ನೀಡಲಿದ್ದಾರೆ.ಮಧ್ಯಾಹ್ನ 12.15ಕ್ಕೆ ಬೆಂಗಳೂರಿಗೆ ಬರಲಿರುವ ಅವರು ಎಡತೊರೆ ಮಠದ ವೇದಾಂತ ಭಾರತಿ ಸಂಸ್ಥೆಯು ಅರಮನೆ ಮೈದಾನದಲ್ಲಿ ಏರ್ಪಡಿಸಿರುವ "ವಿವೇಕದೀಪಿನಿ" ಸ್ತೋತ್ರ ಸಮರ್ಪಣೆ ಹಾಗೂ ಸಾಮೂಹಿಕ ಪಠಣ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಬಳಿಕ ಅಮಿತ್ ಶಾ ಹುಬ್ಬಳ್ಳಿಗೆ ತೆರಳಲಿದ್ದು, ಸಂಜೆ 5 ಗಂಟೆಗೆ ಅಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.ಅಮಿತ್ ಶಾ ಭೇಟಿ ಹಿನ್ನೆಲೆಯಲ್ಲಿ ಬೆಂಗಳೂರು ಹಾಗೂ ಹುಬ್ಬಳ್ಳಿಯಲ್ಲಿ ಭಾರೀ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ. ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ಸಮ್ಮತಿ ನೀಡುವಂತೆ ಯಡಿಯೂರಪ್ಪ ಇದೇ ವೇಳೆ ಅಮಿತ್ ಶಾ ಅವರಿಗೆ ಮನವಿ ಸಲ್ಲಿಸಿ, ಸಚಿವರ ಪಟ್ಟಿ ನೀಡುವ ಸಾಧ್ಯತೆ ಇದೆ.