ಮಮತಾ ಬ್ಯಾನರ್ಜಿಯವರೊಂದಿಗೆ ಅಮಿತ್‍ ಶಾ ಚರ್ಚೆ: ಅಂಫಾನ್‍ ಚಂಡಮಾರುತ ಎದುರಿಸಲು ಎಲ್ಲ ನೆರವಿನ ಭರವಸೆ

ಕೊಲ್ಕತಾ, ಮೇ 19,ಅಂಫಾನ್‍ ಚಂಡಮಾರುತ ಹಿನ್ನೆಲೆಯಲ್ಲಿ ಹೊರಗೆ ಯಾರೊಬ್ಬರೂ ಬರಬಾರದೆಂದು ಕರೆನೀಡಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸದ್ಯಕ್ಕೆ ವಲಸೆ ಕಾರ್ಮಿಕರನ್ನು ರಾಜ್ಯಕ್ಕೆ ಕಳುಹಿಸದಿರಲು ಕೇಂದ್ರ ಗೃಹಸಚಿವ ಅಮಿತ್‍ ಶಾ ಅವರಿಗೆ ಮನವಿ ಮಾಡಿರುವುದಾಗಿ ಹೇಳಿದ್ದಾರೆ. ಚಂಡಮಾರುತ ಹಿನ್ನೆಲೆಯಲ್ಲಿ ಸಂಬಂಧಿತ ಇಲಾಖೆಗಳಿಗೆ ಎಚ್ಚರ ವಹಿಸುವಂತೆ ಸೂಚಿಸಲಾಗಿದ್ದು, ವಿಪತ್ತು ನಿರ್ವಹಣಾ ತಂಡಗಳು ಈಗಾಗಲೇ ಅನೇ ಪ್ರದೇಶಗಳನ್ನು ತಲುಪಿವೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
 ದಕ್ಷಿಣ 24 ಪರಗಣಾಸ್‍ ಜಿಲ್ಲೆಯಿಂದ ಎರಡು ಲಕ್ಷ ಜನರನ್ನು, ಉತ್ತರ ಪರಗಣಾಸ್‍ ಜಿಲ್ಲೆಯಿಂದ 50 ಸಾವಿರ ಜನರನ್ನು, ಪೂರ್ವ ಮಿಡ್ನಾಪುರ್ ಜಿಲ್ಲೆಯಿಂದ 40,000 ಹಾಗೂ ಪಶ್ಚಿಮ ಮಿಡ್ನಾಪುರ್‍ ನಿಂದ 10,000 ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ. 24 ಪರಗಣಾಸ್‍ನ ಎರಡೂ ಜಿಲ್ಲೆಗಳು ವ್ಯಾಪಕ ಹಾನಿಗೊಳಗಾಗುವ ಸಾಧ್ಯತೆ ಇದ್ದು, ಮಿಡ್ನಾಪುರ್ ನ ಅನೇಕ ಭಾಗಗಳು ಸಹ ಹೆಚ್ಚು ಬಾಧಿತವಾಗಲಿವೆ ಎಂದು ಅವರು ಹೇಳಿದ್ದಾರೆ.  ಅಂಫಾನ್‍ ಚಂಡಮಾರುತದಿಂದ ಐಲಾ ಚಂಡಮಾರುತಕ್ಕಿಂತ ಹೆಚ್ಚು ಹಾನಿಯಾಗುವ ಸಾಧ್ಯತೆಯಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ. ಮುಖ್ಯ ಕಾರ್ಯದರ್ಶಿಯವರ ಮಾರ್ಗದರ್ಶನದೊಂದಿಗೆ ಕಾರ್ಯಪಡೆ ಈಗಾಗಲೇ ಕಾರ್ಯಪ್ರವೃತ್ತವಾಗಿದೆ ಎಂದು ಅವರು ಹೇಳಿದ್ದಾರೆ. ಈ ಮಧ್ಯೆ, ಗೃಹಸಚಿವ ಅಮಿತ್‍ ಶಾ ಅವರು ಮಮತಾ ಬ್ಯಾನರ್ಜಿ ಅವರೊಂದಿಗೆ ದೂರವಾಣಿ ಮೂಲಕ ಚರ್ಚಿಸಿ, ಅಂಫಾನ್‍ ಚಂಡಮಾರುತ ಎದುರಿಸಲು ಎಲ್ಲ ನೆರವು ನೀಡುವ ಭರವಸೆ ನೀಡಿದ್ದಾರೆ.