ನವದೆಹಲಿ, ಆಗಸ್ಟ್ 26 ನಕ್ಸಲ್ ಸಮಸ್ಯೆ ನಿವಾರಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇಂದು ನಕ್ಸಲ್ ಪೀಡಿತ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಉನ್ನತಮಟ್ಟದ ಪರಿಶೀಲನಾ ಸಭೆ ನಡೆಸಲಿದ್ದಾರೆ . ಉನ್ನತ ಮೂಲಗಳ ಪ್ರಕಾರ ಸಭೆಯಲ್ಲಿ ಮಹಾರಾಷ್ಟ್ರ, ತೆಲಂಗಾಣ ಮತ್ತು ಛತ್ತೀಸ್ ಗಡದಲ್ಲಿ ನಕ್ಸಲ್ ಚಟುವಟಿಕೆ ಹೆಚ್ಚಿದ ಕಾರಣ ಭದ್ರತೆ ಬಿಗಿಗೊಳಿಸಲು ಮತ್ತು ನಕ್ಸಲ್ ಗುಂಪುಗಳ ಆರ್ಥಿಕ ಸ್ಥಿತಿ ಬಗ್ಗೆ ಮೌಲ್ಯಮಾಪನ ಮಾಡಲಾಗುವುದು ಎನ್ನಲಾಗಿದೆ.
ಭದ್ರತಾ ಪಡೆಗಳ ಇತ್ತೀಚಿನ ಕಾರ್ಯಾಚರಣೆಗಳ ಹೊರತಾಗಿಯೂ ನಕ್ಸಲರು ಕಾರ್ಯಾಚರಣೆ ಮಾಡುವ ಸ್ಥಳಗಳು,ಪ್ರದೇಶಗಳ ಬಗ್ಗೆ ಜಿಲ್ಲಾವಾರು ಪರಿಶೀಲನೆ ನಡೆಸಲಾಗುವುದು ಎಂದು ಭದ್ರತಾ ಸಂಸ್ಥೆಯ ಮೂಲಗಳು ಇಲ್ಲಿ ತಿಳಿಸಿವೆ.
ನಕ್ಸಲ್ ಭೀತಿ ಎದುರಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುವುದು ಸಭೆಯ ಒಂದು ಪ್ರಮುಖ ಅಂಶವಾಗಿದೆ ಎಂದು ಮೂಲಗಳು ತಿಳಿಸಿವೆ.
ಇತ್ತೀಚಿನ ದಿನಗಳಲ್ಲಿ, ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (ಸಿಎಪಿಎಫ್), ರಾಜ್ಯ ಪೊಲೀಸ್ ಪಡೆ ನಕ್ಸಲ್ ಪೀಡಿತ ರಾಜ್ಯಗಳಲ್ಲಿ ಮಾವೋವಾದಿಗಳ ವಿರುದ್ಧ ಕಾರ್ಯಾಚರಣೆ ನಡೆಸಿ ಸಾಕಷ್ಟು ಪ್ರಾಬಲ್ಯ ಸಾಧಿಸಿದೆ.
ಕೆಲವು ರಾಜ್ಯಗಳಲ್ಲಿ ಮಾವೋವಾದಿ ಗುಂಪಿಗೆ ಆರ್ಥಿಕ ನೆರವು ನೀಡುವುದನ್ನು ತಡೆಯಲು ರಾಷ್ಟ್ರೀಯ ತನಿಖಾ ಸಂಸ್ಥೆ ಸಹ ಕ್ರಮ ಕೈಗೊಂಡಿದೆ.