ಹುಬ್ಬಳ್ಳಿಯಲ್ಲಿ ಅಮಿತ್ ಷಾ ಪ್ರಚೋದನಾಕಾರಿ ಭಾಷಣ ತಡೆಯಲು ಕೈಗೊಂಡಿರುವ ಕ್ರಮದ ಬಗ್ಗೆ ವಿವರ ನೀಡಿ: ಶಾಕೀರ್ ಸನದಿ

ಹುಬ್ಬಳ್ಳಿ,ಜ 17, ಜ. 18ರಂದು ಹುಬ್ಬಳ್ಳಿಯಲ್ಲಿ ಆಯೋಜನೆಗೊಂಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪೌರತ್ವ ತಿದ್ದುಪಡಿ ಕಾಯ್ದೆ - ಸಿಎಎ ಪ್ರಚಾರ ಅಭಿಯಾನ ಕಾರ್ಯಕ್ರಮ ಕುರಿತು ಸಮರ್ಪಕ ಮಾಹಿತಿ ನೀಡುವಂತೆ  ಹುಬ್ಬಳ್ಳಿ ಪೊಲೀಸ್ ಆಯುಕ್ತರಿಗೆ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಹಾಗೂ ಹುಬ್ಬಳ್ಳಿ ಕಾಂಗ್ರೆಸ್ ಮುಖಂಡ ಶಾಕೀರ್ ಸನದಿ ಪತ್ರ ಬರೆದಿದ್ದಾರೆ.ಈ ಕಾರ್ಯಕ್ರಮ‌ ಸರ್ಕಾರಿ ಕಾರ್ಯಕ್ರಮವೇ ಅಥವಾ ಬಿಜೆಪಿ ಪಕ್ಷದಿಂದ ಆಯೋಜಿಸಿರುವ ಕಾರ್ಯಕ್ರಮವೋ ಇಲ್ಲವೆ ಯಾವುದಾದರೂ ಸಂಘಟನೆಯಿಂದ ಆಯೋಜಿಸಲಾಗುತ್ತಿದೆಯೇ ಎನ್ನುವ ಮಾಹಿತಿ ಒದಗಿಸುವಂತೆ ಕೋರಿದ್ದಾರೆ. ವೈಯಕ್ತಿವಾಗಿ ಕಾರ್ಯಕ್ರಮ ಆಯೋಜಿಸಲಾಗುತ್ತಿದೆಯೇ, ಹಾಗೊಂದು ವೇಳೆ  ಸರ್ಕಾರಿ ಕಾರ್ಯಕ್ರಮ ಆಗಿದ್ದಲ್ಲಿ ಆಯೋಜಕರು ಸಲ್ಲಿಸಿರುವ ಅರ್ಜಿಯ ನಕಲು, ಅನುಮತಿ ಷರತ್ತುಗಳ‌ ಮಾಹಿತಿ ನೀಡಬೇಕು. ಜತೆಗೆ ಶಾಂತಿ ಸೌಹಾರ್ದತೆ ಕದಡಂತೆ ಮತ್ತು ಪ್ರಚೋದನಾ ಭಾಷಣ ಮಾಡದಂತೆ ಪೊಲೀಸ್ ಇಲಾಖೆ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ವಿವರ ಸಲ್ಲಿಸುವಂತೆ ಪತ್ರದಲ್ಲಿ ಶಾಕೀದ್ ಸನದಿ ತಿಳಿಸಿದ್ದಾರೆ.