ಅಮಿತ್ ಶಾ ಅವಹೇಳನಕಾರಿ ಹೇಳಿಕೆ: ಕೊಪ್ಪಳ ಬಂದ್ ಸಂಪೂರ್ಣ ಯಶಸ್ವಿ

Amit Shah's disparaging statement: Koppal Bandh was a complete success

ಅಮಿತ್ ಶಾ ಅವಹೇಳನಕಾರಿ ಹೇಳಿಕೆ: ಕೊಪ್ಪಳ ಬಂದ್ ಸಂಪೂರ್ಣ ಯಶಸ್ವಿ  

ಕೊಪ್ಪಳ 06: ಬಾಬಾ ಸಾಹೇಬ ಬಿ.ಆರ್‌. ಅಂಬೇಡ್ಕರ್ ಅವರ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದನ್ನು ಖಂಡಿಸಿ ಸೋಮವಾರ ಕರೆ ನೀಡಿದ್ದ ಕೊಪ್ಪಳ ಬಂದ್ ಸಂಪೂರ್ಣ ಯಶಸ್ವಿಗೊಂಡಿತು. ಗಂಗಾವತಿ, ಕುಷ್ಟಗಿ, ಹೊಸಪೇಟೆ ಹಾಗೂ ಗದಗ ಮಾರ್ಗದಿಂದ ಬಂದ ಬಸ್ಸುಗಳನ್ನು ನಗರದ ಹೊರವಲಯದಲ್ಲಿಯೇ ನಿಲ್ಲಿಸಲಾಯಿತು.  

ಕೊಪ್ಪಳಕ್ಕೆ ಬರಬೇಕಾದ ಪ್ರಯಾಣಿಕರು ಹೊರ ವಲಯದಿಂದ ನಗರಕ್ಕೆ ನಡೆದುಕೊಂಡು ಬಂದರು.ಪ್ರತಿ ಸೋಮವಾರ ಅಪಾರ ಜನಸಂದಣಿ ಇರುತ್ತಿದ್ದ ಜವಾಹರ ರಸ್ತೆ, ಕೇಂದ್ರೀಯ ಬಸ್ ನಿಲ್ದಾಣ, ಅಶೋಕ, ಗಂಜ್ ವೃತ್ತದಲ್ಲಿ ಜನರ ಓಡಾಟ ಕಡಿಮೆಯಿತ್ತು. ನಗರದಲ್ಲಿ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಿತ್ತು, ಖಾಸಗಿ ಶಾಲೆ ಕಾಲೇಜುಗಳು ರಜೆ ನೀಡಿದ್ದವು.ಕೊಪ್ಪಳ ಬಂದ್‌ಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ, ಮುಖಂಡರು ಬಂದ್ ನಲ್ಲಿ ಪಾಲ್ಗೊಂಡಿದ್ದರು.ಸಂವಿಧಾನ ಸಂರಕ್ಷಣಾ ಸಮಿತಿಯ ಅನೇಕ ಮುಖಂಡರು ಮಾತನಾಡಿ ಕೇಂದ್ರ ಸಂಸತ್ತು ಅಧಿವೇಶನದಲ್ಲಿ ನಡೆದ ಚರ್ಚೆ ವೇಳೆ ಗೃಹ ಸಚಿವ ಅಮಿತ್ ಶಾ ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ್ದಾರೆ. ಅವರನ್ನು ಕೂಡಲೇ ಸಚಿವ ಸಂಪುಟದಿಂದ ವಜಾ ಮಾಡಿ ದೇಶದಿಂದ ಗಡಿಪಾರು ಮಾಡಬೇಕು ಎಂದು ಆಗ್ರಹಿಸಿದರು. ದಲಿತ ಸಂಘರ್ಷ ಸಮಿತಿ (ಭೀಮ ವಾದ) ರಾಜ್ಯ ಸಂಘಟನಾ ಸಂಚಾಲಕ ಯಲ್ಲಪ್ಪ ಹಳೆಮನಿ, ಸಂವಿಧಾನ ಸಂರಕ್ಷಣಾ ಸಮಿತಿಯ ಜಿಲ್ಲಾ ಮುಖಂಡರಾದ ಹನುಮೇಶ್ ಕಡೆಮನಿ, ಬಸವರಾಜ್ ಶೀಲವಂತರ್, ಹನುಮಂತಪ್ಪ ಮ್ಯಾಗಳಮನಿ, ನಿಂಗಜ್ಜ ಚೌದ್ರಿ ಶಾಹಪುರ, ಮಲ್ಲು ಪೂಜಾರ್, ರಾಮಣ್ಣ ಚೌಡಕಿ, ಕಾಶಪ್ಪ ಚಲವಾದಿ, ನಿಂಗಜ್ಜ ಬಣಕಾರ್, ಪರಶುರಾಮ್ ಕೆರೆಹಳ್ಳಿ, ರವಿ ಗುಡ್ಲಾನೂರ, ಗಾಳೆಪ್ಪ ಕುಕುನಪಳ್ಳಿ, ನಿಂಗಪ್ಪ ಮೈನಹಳ್ಳಿ, ಸುಧೀರ್ ಮ್ಯಾಗಳಮನಿ, ದುರ್ಗಪ್ಪ ಹೊಸಮನಿ, ರಾಮಪ್ಪ ದೊಡ್ಡ ಮನಿ, ಸಲೀಂ ಅಳವಂಡಿ, ಸೇರಿದಂತೆ ಅನೇಕ ಮುಖಂಡರು ಪಾಲ್ಗೊಂಡಿದ್ದರು.