ಕೀರ್ತಿಪುರ್, ಫೆ.12 : ನೇಪಾಳ ವಿರುದ್ಧದ ಏಕದಿನ ಪಂದ್ಯದಲ್ಲಿ ಅಮೆರಿಕ 35 ರನ್ ಗಳಿಗೆ ಆಲೌಟ್ ಆಯಿತು. ಈ ಮೂಲಕ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಕನಿಷ್ಠ ಮೊತ್ತ ದಾಖಲಿಸಿತು.
ತ್ರಿಭುವನ್ ವಿಶ್ವವಿದ್ಯಾಲಯದ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಆತಿಥೇಯ ನೇಪಾಳ ವಿರುದ್ಧದ ಐಸಿಸಿ ಕ್ರಿಕೆಟ್ ಕಪ್ ಲೀಗ್ 2 2019-22ರ ಪಂದ್ಯದಲ್ಲಿ ಅಮೆರಿಕ ತಂಡವು 12 ಓವರ್‌ಗಳಲ್ಲಿ ಕೇವಲ 35 ರನ್‌ಗಳಿಗೆ ಕುಸಿಯಿತು. 5.2 ಓವರ್‌ಗಳಲ್ಲಿ ಎರಡು ವಿಕೆಟ್‌ಗೆ 36 ರನ್ ಗಳಿಸುವ ಮೂಲಕ ನೇಪಾಳ ಪಂದ್ಯವನ್ನು ಗೆದ್ದುಕೊಂಡಿತು.
ಏಪ್ರಿಲ್ 25, 2004 ರಂದು ಹರಾರೆಯಲ್ಲಿ ಶ್ರೀಲಂಕಾ ವಿರುದ್ಧ ಜಿಂಬಾಬ್ವೆ 35 ರನ್ ಗಳಿಗೆ ಸರ್ವಪತನ ಹೊಂದಿತ್ತು. ಏಕದಿನ ಇತಿಹಾಸದಲ್ಲಿ ಅತಿ ಕಡಿಮೆ ರನ್ ಗಳಿಸಿದ ದಾಖಲೆಯನ್ನು ಈಗ ಜಂಟಿಯಾಗಿ ಅಮೆರಿಕ ಮತ್ತು ಜಿಂಬಾಬ್ವೆ ಹಂಚಿಕೊಂಡಿವೆ.
ಅಮೆರಿಕ ಪರ ಆರಂಭಿಕ ಕ್ಸೇವಿಯರ್ ಮಾರ್ಷಲ್ 22 ಎಸೆತಗಳಲ್ಲಿ 16 ರನ್ ಗಳಿಸಿದರು. ಅಮೆರಿಕ ಎಂಟು ರನ್ ಗಳ ಅಂತರದಲ್ಲಿ ಎಂಟು ವಿಕೆಟ್ ಕಳೆದುಕೊಂಡಿತು. ಲೆಗ್ ಸ್ಪಿನ್ನರ್ ಸಂದೀಪ್ ಲಮಿಚಾನೆ ಆರು ಓವರ್‌ಗಳಲ್ಲಿ 16 ರನ್‌ಗಳಿಗೆ ಆರು ವಿಕೆಟ್ ಪಡೆದರೆ, ಎಡಗೈ ಸ್ಪಿನ್ನರ್ ಸುಶಾನ್ ಭಾರಿ ಮೂರು ಓವರ್‌ಗಳಲ್ಲಿ ಐದು ರನ್‌ಗಳಿಗೆ ನಾಲ್ಕು ವಿಕೆಟ್ ಪಡೆದರು.
ನೇಪಾಳದ ಇನ್ನಿಂಗ್ಸ್‌ನಲ್ಲಿ ಪರಸ್ ಖಡ್ಕಾ ಅಜೇಯ 20 ಮತ್ತು ದೀಪೇಂದ್ರ ಸಿಂಗ್ ಆರಿ ಅಜೇಯ 15 ರನ್ ಗಳಿಸಿ ತಮ್ಮ ತಂಡವನ್ನು ಎಂಟು ವಿಕೆಟ್‌ಗಳಿಂದ ಜಯಗಳಿಸಿದರು. ಲಮಿಚಾನೆ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಪಡೆದರು.