ಬೆಂಗಳೂರು, ಮೇ 12,ಇಡೀ ದೇಶ ಮತ್ತು ಜಗತ್ತು ಕೋವಿಡ್ 19ರ ವಿರುದ್ಧ ಎಲ್ಲ ಭೇದಗಳನ್ನು ಮರೆತು ಹೋರಾಟದಲ್ಲಿ ತೊಡಗಿರುವಾಗ ಈ ಸಂದರ್ಭವನ್ನು ದುರುಪಯೋಗಪಡಿಸಿಕೊಂಡು ದೇಶದ ರೈತರು ಹಾಗೂ ರೈತ ಕೂಲಿಕಾರರ ಆಧಾರಿತ ವ್ಯವಸಾಯದ ಮೇಲೆ ಕಾರ್ಪೋರೇಟ್ ಕಂಪನಿಗಳ ಪರವಾಗಿ ಗಂಭೀರ ದಾಳಿ ಮಾಡಲು ಮುಂದಾದ ಕೇಂದ್ರ ಸರ್ಕಾರದ ನೀಚತನವನ್ನು ಕರ್ನಾಟಕ ಪ್ರಾಂತ ರೈತ ಸಂಘ ಬಲವಾಗಿ ಖಂಡಿಸುತ್ತದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಸಂಘದ ಅಧ್ಯಕ್ಷ ಜೆ.ಸಿ.ಬಯ್ಯಾರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಯು.ಬಸವರಾಜು, ವ್ಯವಸಾಯ ಮತ್ತು ರೈತಾಪಿ ಜನತೆ ಲಾಕ್‌ಡೌನ್‌ನಿಂದಾಗಿ ಮತ್ತು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜನ ವಿರೋಧಿ ನಿಲುಮೆಗಳಿಂದಾಗಿ ನಲುಗಿ ಹೋಗಿದ್ದಾರೆ. ಆದಾಗ್ಯೂ ಅವರು ಕೋವಿಡ್ 19 ವಿರುದ್ಧದ ಐಕ್ಯ ಹೋರಾಟದಲ್ಲಿ ತೊಡಗಿದ್ದಾರೆ. ಲಾಕ್‌ಡೌನ್‌ನಿಂದಾಗಿ ಸಂಕಷ್ಟದಲ್ಲಿರುವ ರೈತಾಪಿ ಜನತೆಯ ಪರವಾಗಿ ನಿಂತು ನೆರವಾಗುವ ಬದಲು ಬೆನ್ನಿಗೆ ಇರಿಯುವ ಕೆಲಸದಲ್ಲಿ ಕೇಂದ್ರ ಸರ್ಕಾರಗಳು ತೊಡಗಿವೆ ಎಂದು ಟೀಕಿಸಿದ್ದಾರೆ.
ಭಾರತ ಸರ್ಕಾರದ ಕೃಷಿ ಮತ್ತು ರೈತ ಕಲ್ಯಾಣ ಮಂತ್ರಾಲಯ ಮತ್ತು ಕೃಷಿ ಸಹಕಾರ ಹಾಗೂ ರೈತ ಕಲ್ಯಾಣ ಇಲಾಖೆಯಿಂದ ಮೇ 5ರಂದು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ರಾಜ್ಯದ ಖಾಸಗಿ ಕೃಷಿ ಮಾರುಕಟ್ಟೆಯ ಮೇಲಿನ ಕೃಷಿ ಉತ್ಪನ್ನಗಳ ಮಾರುಕಟ್ಟೆ ಸಮಿತಿಯ ನಿಯಂತ್ರಣವನ್ನು ತೆಗೆದು ಹಾಕಲು ಸೂಚಿಸಿದೆ ಮತ್ತು ಈ ಕಾಯ್ದೆಗೆ ತಿದ್ದುಪಡಿ ತರಲು ಕೋರಿದೆ. ಅದಾಗಲೇ ಕಾರ್ಪೋರೇಟ್ ಕಂಪನಿಗಳ ಲೂಟಿಕೋರ ಮುಕ್ತ ಮಾರುಕಟ್ಟೆಗೆ ಅಗತ್ಯವಾಗಿದ್ದ ಮತ್ತು ಕೇಂದ್ರ ಮಾದರಿ ಮಾರುಕಟ್ಟೆಯ ಉಳಿದೆಲ್ಲಾ ಸೂಚನೆಗಳನ್ನು ಜಾರಿ ಮಾಡಿದ್ದಕ್ಕೆ ರಾಜ್ಯ ಸರ್ಕಾರವನ್ನು ಶ್ಲಾಘಿಸಿದೆ. ಮಾತ್ರವಲ್ಲ ಆದಷ್ಟು ಬೇಗ ಈ ಕಾಯ್ದೆಗೆ ತಿದ್ದುಪಡಿ ಮಾಡಿ ಎಪಿಎಂಸಿ ನಿಯಂತ್ರಣವನ್ನು ತೆಗೆದುಹಾಕಿ ಅದರ ಮಾಹಿತಿಯನ್ನು ತನಗೆ ನೀಡುವಂತೆ ಕೇಂದ್ರ ಸರ್ಕಾರ ಕೇಳಿದೆ ಎಂದು ಅವರು ತಿಳಿಸಿದರು.
ಅದರಂತೆ ರಾಜ್ಯ ಸರ್ಕಾರವು ಕಾರ್ಪೋರೇಟ್ ಕಂಪನಿಗಳ ಲೂಟಿಕೋರ ಸೇವೆಗೆ ತುದಿಗಾಲ ಮೇಲೆ ನಿಂತಿದ್ದು, ಈ ವಿಷಯಕ್ಕೆ ಸಂಬಂಧಿಸಿ ಕೂಡಲೇ ಮುಂಬರುವ ಮಂತ್ರಿಮಂಡಲದ ಸಭೆಯಲ್ಲಿ ಸುಗ್ರೀವಾಜ್ಞೆ ಹೊರಡಿಸುವ ತವಕದಲ್ಲಿ ಇದೆ ಎನ್ನಲಾಗಿದೆ. ರಾಜ್ಯದ ಕೃಷಿ ಉತ್ಪನ್ನಗಳ ಮಾರುಕಟ್ಟೆಯ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆ 1996 ಮತ್ತು ನಿಯಮಗಳು-1968ರ ಕಲಂ 8, 66,77 ಮತ್ತು 70ರಂತೆ ಎಪಿಎಂಸಿಯ ಹೊರಗೆ ನಡೆಯುವ ಮಾರುಕಟ್ಟೆಯ ಮೇಲೆ ಎಪಿಎಂಸಿ ನಿಯಂತ್ರಣವನ್ನು ಹೇಳುತ್ತದೆ. ಎಪಿಎಂಸಿಯ ಹೊರಗಡೆ, ರೈತರಿಂದ ಕೃಷಿ ಉತ್ಪನ್ನಗಳನ್ನು ಲೈಸನ್ಸ್ ಹೊಂದಿಲ್ಲದ ವರ್ತಕರು ಖರೀದಿಸುವಂತಿಲ್ಲ. ವರ್ತಕರು ಮನಬಂದಂತೆ ರೈತರ ಶೋಷಣೆಯನ್ನು ನಡೆಸಲು ಮತ್ತು ಎಪಿಎಂಸಿ ಆದಾಯ ವಂಚನೆಯನ್ನು ಮಾಡಲು ಅವಕಾಶ ನೀಡುತ್ತಿಲ್ಲ. ಈರೀತಿಯಲ್ಲಿ ನಿಯಮಗಳನ್ವಯ ನಡೆಯದಿದ್ದಲ್ಲಿ ಅಂತಹ ವರ್ತಕರ ಮೇಲೆ ಕಲಂ, 114, 116,117ರಂತೆ ಕ್ರಿಮಿನಲ್ ದಾವೆ ಹೂಡಲು ಅವಕಾಶಗಳಿತ್ತು ಎಂದು ಅವರು ತಿಳಿಸಿದ್ದಾರೆ.
ಈಗ ಅವುಗಳನ್ನೇ ತೆಗೆದುಹಾಕಿದಲ್ಲಿ ರೈತರ ಶೋಷಣೆ ವ್ಯಾಪಕವಾಗಿ ಹೆಚ್ಚಾಗಲಿದೆ. ಮಾತ್ರವಲ್ಲ ಎಪಿಎಂಸಿಗಳಿಗೆ ಆದಾಯ ಮತ್ತು ವ್ಯಾಪಾರವಿಲ್ಲದೆ ಮತ್ತು ಅವುಗಳ ಅಗತ್ಯವಿಲ್ಲದೇ ರಾಜ್ಯದ ಎಲ್ಲ ಎಪಿಎಂಸಿಗಳನ್ನು ಮುಚ್ಚಬೇಕಾಗುತ್ತದೆ. ಕೃಷಿ ಮಾರುಕಟ್ಟೆಯೆಂಬುದು ಪೂರ್ಣ ಮುಕ್ತವಾದ ಕಾರ್ಪೋರೇಟ್ ಲೂಟಿಕೋರ ಖಾಸಗಿ ಮಾರುಕಟ್ಟೆಯಾಗಲಿದೆ. ಇದು ಮುಖ್ಯವಾಗಿ ರೈತರನ್ನು ಮತ್ತು ಕೃಷಿ ಕೂಲಿಕಾರರನ್ನು ವ್ಯವಸಾಯದಿಂದ ಹೊರದೂಡಲಿದೆ. ಕೃಷಿಯನ್ನು ಮತ್ತು ರಾಜ್ಯದ ಗ್ರಾಹಕ ಮಾರುಕಟ್ಟೆಯನ್ನು ನಿಧಾನವಾಗಿ ಕಾರ್ಪೋರೇಟ್ ಕುಳಗಳ ಕೈಗೆ ವರ್ಗಾಯಿಸಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಇದು ರಾಜ್ಯದ 177 ಕೃಷಿ ಮಾರುಕಟ್ಟೆಗಳನ್ನು, ಅದೇ ರೀತಿ ಎಲ್ಲಾ ಉಪ ಮಾರುಕಟ್ಟೆಗಳನ್ನು ನಾಶ ಪಡಿಸಲಿದೆ. ಅಲ್ಲಿನ ಲಕ್ಷಾಂತರ ಹಮಾಲರು, ನೌಕರರ ಉದ್ಯೋಗಗಳನ್ನು ನಾಶಪಡಿಸಲಿದೆ. ಲಕ್ಷಾಂತರ ಸಣ್ಣ ಮತ್ತು ಮದ್ಯಮ ವರ್ತಕರನ್ನು ಉದ್ಯೋಗದಿಂದ ಹೊರದೂಡಲಿದೆ. ಆದ್ದರಿಂದ ರಾಜ್ಯ ಸರ್ಕಾರ ಇಂತಹ ಗಂಭೀರವಾದ ಜನ ವಿರೋಧಿ ತಿದ್ದುಪಡಿಯ ಕುರಿತು ಕ್ರಮವಹಿಸಬಾರದು. ಬದಲಿಗೆ ಎಪಿಎಂಸಿಗಳನ್ನು ಬಲಪಡಿಸಲು ಮತ್ತು ಖಾಸಗಿ ಮಾರುಕಟ್ಟೆಯನ್ನು ನಿಷೇಧಿಸಲು ಅಗತ್ಯ ಕ್ರಮ ವಹಿಸಬೇಕು ಎಂದು ಸಂಘ ಒತ್ತಾಯಿಸುತ್ತದೆ. ಅದೇ ರೀತಿ ರಾಜ್ಯದ ರೈತ ಮತ್ತು ಕೂಲಿಕಾರರ ಸಂಘಗಳು, ವರ್ತಕರು, ಎಪಿಎಂಸಿಗಳ ಕಾರ್ಮಿಕರು, ಹಮಾಲಿ ಸಂಘಗಳು ಮಾತ್ರವಲ್ಲ ಗ್ರಾಹಕರ ಸಂಘಗಳು, ಈ ಕಾರ್ಪೋರೇಟ್ ಲೂಟಿ ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಂತಹ ಪ್ರಸ್ತಾಪಗಳನ್ನು ತಿರಸ್ಕರಿಸಿ ಹಿಮ್ಮೆಟ್ಟಿಸಲು ಅಗತ್ಯ ಜಂಟಿ ಚಳವಳಿಯಲ್ಲಿ ತೊಡಗಲು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಕರೆ ನೀಡುತ್ತದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.