ಬೆಳಗಾವಿ 28: ಬಸವಣ್ಣನವರು ಮಾನವೀಯತೆಯ ಧರ್ಮವನ್ನು ಭಿತ್ತಿ ಸರ್ವ ಸಮಾನತೆಯ ಸಮಾಜವನ್ನು ಹುಟ್ಟುಹಾಕಲು ಕ್ರಾಂತಿಗೈದ ಯುಗಪುರುಷ. ಅವರ ಸಂದೇಶಗಳು ಮನಕುಲದ ಏಳ್ಗೆಗೆ ಸಂಜೀವಿನಿಯಾಗಿವೆ. ಅವು ನಮ್ಮ ಬದುಕಿನ ಅನುಕರಣೆಯ ಭಾಗವಾದ ಜಗತ್ತಿನಲ್ಲಿ ಶಾಂತಿ ನೆಲೆಸುವುದೆಂದು ಗೋಕಾಕ ತಾಲೂಕಿನ ಕಸಪ ಅಧ್ಯಕ್ಷೆ ಭಾರತಿ ಮದಭಾವಿ ಹೇಳಿದರು.
ಅವರು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆಯು ಲಿಂಗಾಯತ ಭವನದಲ್ಲಿ ಆಯೋಜಿಸಿದ್ದ ಅಮವಾಸ್ಯೆ ಅನುಭಾವ ಗೋಷ್ಠಿಯಲ್ಲಿ ‘ಬಸವಣ್ಣನವರು ಪ್ರತಿಪಾದಿಸಿದ ಮೌಲ್ಯಗಳು’ ವಿಷಯ ಕುರಿತು ಉಪನ್ಯಾಸ ನೀಡಿದರು.
ಅವರು ‘ಸಮಾಜದಲ್ಲಿ ಬೇರುಬಿಟ್ಟಿದ ಜಾತಿ, ವರ್ಗ, ಲಿಂಗತಾರತಮ್ಯತೆಗಳನ್ನು ಹೋಗಲಾಡಿಸಿದ ಬಸವಣ್ಣನವರು ಸಮಾನತೆಯ ತತ್ತ-್ವವನ್ನು ಮೂಡಿಸಿದರು. ದಯವೇ ಧರ್ಮದ ಮೂಲ ಎಂದು ಧರ್ಮದ ತಿರುಳನ್ನು ತಿಳಿಸಿಕೊಟ್ಟರು, ಕಾಯಕ-ದಾಸೋಹ ಸಿದ್ಧಾಂತಗಳನ್ನು ಪ್ರತಿಪಾದಿಸಿ ಪ್ರತಿಯೊಬ್ಬನು ದುಡಿಯಬೇಕೆಂಬ ಸಂಸ್ಕೃತಿಯನ್ನು ಅನಾವರಣಗೊಳಿಸಿದರು. ದೇಹವನ್ನೇ ದೇಗುಲವನ್ನಾಗಿ ಮಾಡಿ ಧರ್ಮ ಅಸ್ತಿತ್ವವನ್ನು ನಿರೂಪಿಸಿದರು. ಬದುಕಿಗೆ ಕಳಬೇಡ, ಕೊಲಬೇಡ, ಹುಸಿಯನುಡಿಯಲುಬೇಡ ಎಂಬ ಸಪ್ತದಿವ್ಯ ಸೂತ್ರಗಳನ್ನು ಹಾಕಿಕೊಟ್ಟು ಜೀವನದ ಪಥವನ್ನು ತಿಳಿಸಿಕೊಟ್ಟರು. ಅವರು ಹೇಳಿದ ವಿಚಾರಗಳು ಯುಗಯುಗಗಳು ಕಳೆದರೂ ಸತ್ಯದರ್ಶನಗಳಾಗಿವೆ. ಅವುಗಳನ್ನು ಅನುಕರಣೆಗೆ ತರಬೇಕು. ನಮ್ಮ ಮಕ್ಕಳಲ್ಲಿ ವಚನ ಸಂಸ್ಕೃತಿಯನ್ನು ಬೆಳೆಸಬೇಕಾಗಿದೆ. ಪ್ರಜ್ಞಾವಂತ ಯುವಕ ಯುವತಿಯರಲ್ಲಿ ವಚನಗಳ ವಿಶ್ಲೇಷಣೆಯನ್ನು ತಿಳಿಸಿಕೊಡಬೇಕಾಗಿದೆ ಹಾಗೂ ಶರಣಮಾರ್ಗದೆಡೆಗೆ ಕರೆತರಬೇಕಾಗಿದೆ’ ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ, ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ‘ಪ್ರಸ್ತುತ ದಿನಗಳಿಗೆ ಅಣ್ಣನವರ ವಿಚಾರಗಳು ಅಗತ್ಯವಾಗಿ ಸಮಾಜಕ್ಕೆ ಬೇಕಾಗಿದೆ. ಜಗದ ಮಹಾಮಾನವತಾವಾದಿ ಅವರು. ಎಂಟುನೂರು ವರ್ಷಗಳಾದರೂ ತಮ್ಮ ಪ್ರಖರವಾದ ವಿಚಾರಗಳಿಂದ ಜೀವಂತವಾಗಿ ಉಳಿದಿದ್ದಾರೆ. ಅವರು ಹಾಕಿಕೊಟ್ಟ ದಿವ್ಯಮಾರ್ಗದಲ್ಲಿ ಸಾಗೋಣ. ಮಹಾಸಭೆ ಅಣ್ಣನವರ ಜೀವನ ದರ್ಶನವನ್ನು ಯುವಪ್ರತಿಭೆಗಳಿಗೆ ಮುಟ್ಟಿಸುವ ಗುರುತರದ ಕಾರ್ಯಮಾಡುತ್ತಿದೆ ಎಂದು ತಿಳಿಸಿದರು.
ಸಾನ್ನಿಧ್ಯವಹಿಸಿದ್ದ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತ, ಬಸವಣ್ಣನವರು ಸಮಾಜದ ಕೊಳೆಯನ್ನು ಕಿತ್ತುಹಾಕಿದ ಕ್ರಾಂತಿಕಾರಿ ಯುಗಪುರುಷರು. ಅವರು ಯುಗದ ಉತ್ಸಾಹ. ಅವರ ದರ್ಶನಸಾರ ಬದುಕಿಗೆ ಅನುಕರಣೀಯ. ಇಂದಿನ ಮಕ್ಕಳಿಗೆ ಅದನ್ನು ವ್ಯವಸ್ಥಿತವಾಗಿ ಮುಟ್ಟಿಸಿ ಭವ್ಯನಾಗರಿಕರನ್ನಾಗಿ ಮಾಡುವುದು ಎಲ್ಲರ ಸಂಕಲ್ಪವಾಗಲಿ ಎಂದು ನುಡಿದರು.
ಇದೇ ಸಂದರ್ಭದಲ್ಲಿ ‘ಬೆಳಗಾವಿ ವೀರಶೈವ ವಾಣಿ’ ಪತ್ರಿಕೆಯ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು. ಸೋಮಲಿಂಗ ಮಾವಿನಕಟ್ಟಿ ಸ್ವಾಗತಿಸಿದರು. ಬಸವ ಜಯಂತಿ ನಿಮಿತ್ತವಾಗಿ ಏರಿ್ಡಸಿದ್ದ ಪ್ರಾಥಮಿಕ, ಮಾಧ್ಯಮಿ, ಪದವಿಪೂರ್ವ, ಪದವಿ, ಸ್ನಾತಕೋತ್ತರ ಹಾಗೂ ಎಲ್ಲ ವಯೋಮಾನದವರಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ವೇದಿಕೆಯ ಮೇಲೆ ಬಾಲಚಂದ್ರ ಬಾಗಿ, ಶಂಕರ ಪಟ್ಟೇದ, ಸೋಮಶೇಖರ ಚೊಣ್ಣದ ಉಪಸ್ಥಿತರಿದ್ದರು. ಸವಿತಾ ವಿರುಪಾಕ್ಷಿ ಅತಿಥಿಗಳನ್ನು ಪರಿಚಯಸಿದರು, ಗೀತಾ ಬೆಣಚಮರಡಿ ವಚನ ವಿಶ್ಲೇಷಣೆ ಮಾಡಿದರು. ನಂದಿತಾ ಮಾಸ್ತಿಹೊಳೀಮಠ ವಚನ ಪ್ರಾರ್ಥನೆ ಸಲ್ಲಿಸಿದರು. ಕಿರಣ ಅಗಡಿ ವಂದಿಸಿದರು. ಅನುಪಮಾ ದೊಡವಾಡ ನಿರೂಪಿಸಿದರು.