ಲೋಕದರ್ಶನ ವರದಿ
ರಾಮದುರ್ಗ 11: ಶೈಕ್ಷಣಿಕ ವ್ಯವಸ್ಥೆಯ ಸುಧಾರಣೆಯಿಂದ ಮಾತ್ರ ದೇಶದ ಪ್ರಗತಿ ಸಾಧ್ಯವಿದೆ. ತಾಲೂಕಿನ ಬಡ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹಿಂದಿನ ಅವಧಿಯಲ್ಲಿ ಶಾಸಕನಾಗಿದ್ದ ಅವಧಿಯಲ್ಲಿ ತಾಲೂಕಿಗೆ ಐದು ಪದವಿಪೂರ್ವ ಮಹಾವಿದ್ಯಾಲಯ, ಒಂದು ಪದವಿ ಮಹಾವಿದ್ಯಾಲಯವನ್ನು ಮಂಜೂರು ಮಾಡಿಸಿದ್ದೇನೆ ಎಂದು ಶಾಸಕ ಮಹಾದೇವಪ್ಪ ಯಾದವಾಡ ಹೇಳಿದರು.
ಪಟ್ಟಣದ ಸಮೀಪದ ನೇತಾಜಿ ಸುಭಾಸಚಂದ್ರ ಬೋಸ್ ಸರಕಾರಿ ಪ.ಪೂ ಮಹಾವಿದ್ಯಾಲಯದ ನೂತನ ಕೊಠಡಿಗಳ ಉದ್ಘಾಟನೆ ಹಾಗೂ 1 ಕೋಟಿ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿಗಳ ನಿಮರ್ಾಣಕ್ಕೆ ಸೋಮವಾರ ಅಡಿಗಲ್ಲು ನೆರವೇರಿಸಿ ಅವರು ಮಾತನಾಡಿದರು.
ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನ ಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಸರ್ವ ಶಿಕ್ಷಣ ಅಭಿಯಾನ ಪ್ರಾರಂಭಿಸಿ, ಬಡ ಮಕ್ಕಳ ಕಲಿಕೆ ಹಾಗೂ ಸರಕಾರಿ ಶಾಲೆಗಳ ಸಬಲೀಕರಣಕ್ಕೆ ಶ್ರಮಿಸಿದ್ದಾರೆ. ಅವರು ಇಲ್ಲವಾದರೂ ಅವರು ಶಿಕ್ಷಣ ವ್ಯವಸ್ಥೆಗೆ ನೀಡಿದ ಕೊಡುಗೆ ಮಾತ್ರ ಮೆರೆಯುವಂತಿಲ್ಲ. ಶೈಕ್ಷಣಿಕ ವ್ಯವಸ್ಥೆಗೆ ಬೇಕಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ತಾವು ಸದಾ ಬದ್ಧರಿದ್ದು, ವಿದ್ಯಾರ್ಥಿಗಳು ನಿರ್ಧಿಷ್ಠ ಗುರಿಯೊಂದಿಗೆ ಉನ್ನತ ಸಾಧನೆ ಮಾಡಿ, ಕಲಿತ ಕಾಲೇಜು ಹಾಗೂ ಪಾಲಕರ ಮೆಚ್ಚುಗೆ ಗಳಿಸುವ ಜೊತೆಗೆ ತಾಲೂಕಿನ ಕೀರ್ತಿ ಹೆಚ್ಚಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಬೆಳಗಾವಿ ಪ.ಪೂ ಮಹಾವಿದ್ಯಾಲಯಗಳ ಉಪ ನಿರ್ದೇಶಕ ರಾಜಶೇಖರ ಪಟ್ಟಣಶೆಟ್ಟಿ ಮಾತನಾಡಿ, ಸರಕಾರಿ ಶಾಲಾ ಕಾಲೇಜುಗಳಿಗೆ ಸರಕಾರ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಜೊತೆಗೆ ಅವಶ್ಯಕ ಸಿಬ್ಬಂದಿ ಭರ್ತಿ ಮಾಡಿದಾಗ ಮಾತ್ರ ವಿದ್ಯಾರ್ಥಿಗಳ ಕಲಿಕೆಗೆ ಸಹಾಯಕವಾಗಲಿದೆ. ಶಾಸಕರು ಈ ಕುರಿತು ಸರಕಾರದ ಗಮನ ಸೆಳೆಯಬೇಕೆಂದು ಶಾಸಕ ಮಹಾದೇವಪ್ಪ ಯಾದವಾಡ ಅವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತುರನೂರ ಗ್ರಾ.ಪಂ ಅಧ್ಯಕ್ಷ ಲಕ್ಕಪ್ಪ ಕ್ವಾರಿ, ಎಪಿಎಂಸಿ ಸದಸ್ಯ ಮಾರುತಿ ಕೊಪ್ಪದ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಶಶಿಧರ ಮಾಳವಾಡ, ಸದಸ್ಯರಾದ ಬಾಲಮುಕುಂದ ಮಹಾಲಿಂಗಪೂರ, ರಾಜೇಶ ರಾಠೋಡ, ರಾಜೇಶ ಬೀಳಗಿ, ವಿಠ್ಠಲ ಕಂಬಾರ ಜಿ.ಪಂ ಎಇಇ ಬಸಪ್ಪ ಕುರ್ತಕೋಟಿ, ಜೆಇಗಳಾದ ವಿಜಯಕುಮಾರ, ಪ್ರತಾಪ, ಗುತ್ತಿಗೆದಾರದಾದ ಮೈಲಾರ ಬಸಿಡೋಣಿ, ರವಿಗೌಡ ಪಾಟೀಲ ಸೇರಿದಂತೆ ಇತರರಿದ್ದರು.
ಪ್ರಾಚಾರ್ಯ ಡಿ.ಡಿ. ಮುಜಾವರ ಸ್ವಾಗತಿಸಿದರು. ಉಪನ್ಯಾಸಕ ಬಿ.ಬಿ. ಹರನಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.