ಇಲ್ಲಿ ದೇವರಾಗುವುದು ಸುಲಭ ಎನ್ನುತ್ತಿದ್ದಾರೆ ಜನ
ಅದಕ್ಕೆ ಮನುಷ್ಯರಾಗುವುದರಲ್ಲಿ ಕಷ್ಟ ಪಡುತ್ತಿದ್ದಾರೆ ಜನ
ನಾಡಿನ ಗಜಲ್ ಓದುಗರ ಎದೆಯೊಳಗೆ ಅನಭಿಷಿಕ್ತ ಗಜಲ್ ದೊರೆಯಾಗಿ ಸಮತೆ, ಸಹಿಷ್ಣುತೆ, ಭಾವೈಕ್ಯತೆಯ ಹರಿಕಾರನಂತೆ, ಅಕ್ಷರದ ನಂಟಿನ ಮೂಲಕ ಮನುಷ್ಯ ಪ್ರೀತಿ ಬಿತ್ತುತ್ತಿರುವ ಕನಕಗಿರಿಯ ಅಲ್ಲಾಗಿರಿರಾಜ್ ಈ ನಾಡು ಕಂಡ ಅಪ್ರತಿಮ ಗಜಲ್ ಬರಹಗಾರರು. ಗಜಲ್ ಅನ್ನು ಜೀವದುಸಿರನ್ನಾಗಿಸಿಕೊಂಡು, ಆರು ವರ್ಷಗಳ ಕಾಲ ದೇಶದ ನಾನಾ ರಾಜ್ಯಗಳಲ್ಲಿ ಅಲೆಮಾರಿಯಂತೆ ತಿರುಗಿ, ಅಲ್ಲಿನ ಜನರ ನೋವು-ನಲಿವುಗಳನ್ನು ‘ಗಜಲ್’ ನೊಳಗೆ ಅನಾವರಣಗೊಳಿಸಿದವರು ‘ನೂರ್ ಗಜಲ್’ ಸಂಕಲನದ ಲೇಖಕ ಅಲ್ಲಾಗಿರಿರಾಜ್. ಗಜಲುಗಳನ್ನೇ ತಮ್ಮ ಹೃದಯದ ಮಾತನ್ನಾಗಿಸಿಕೊಂಡು ಅಂತರಂಗದ ಸಖಿಯೊಂದಿಗೆ ಸಂವಾದಕ್ಕಿಳಿಯುವ ಗಿರಿರಾಜ್ ತಮ್ಮ ಅನೇಕ ಗಜಲುಗಳಲ್ಲಿ ಪ್ರೇಮದ ಉತ್ಕಟತೆಯನ್ನು ಶೋಕದ ಪರಮಾವಧಿ ಮೀರಿ ಪ್ರತಿಧ್ವನಿಸುತ್ತಾರೆ. ಮನುಷ್ಯ ಪ್ರೀತಿಯುಳ್ಳವರನ್ನು ಅಪ್ಪಿಕೊಳ್ಳುತ್ತಾರೆ. ‘ನನ್ನೊಳಗಿನ ದುಃಖಗಳೇ ನಾಳೆಯ ಬದುಕನ್ನು ಹುಡುಕಲು ಪ್ರೇರಣೆಯಾದವು’ ಎಂದು ಗಜಲ್ ಬರೆಯಲು ಕಾರಣವಾದ ದುಃಖಗಳನ್ನು ಆಪ್ತವಾಗಿಸುತ್ತಾರೆ. ಅಂತಹ ಗಜಲ್ ದೊರೆಗಿಂದು ಅಖಿಲ ಭಾರತ ಗಜಲ್ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆಯ ಪಟ್ಟ ಒಲಿದು ಬಂದಿದೆ. ಗಜಲ್ ಪ್ರಿಯರ ಸಂಭ್ರಮ ಮುಗಿಲು ಮುಟ್ಟಿದೆ. ದಲಿತ ಸಾಹಿತ್ಯ ಪರಿಷತ್ತು ರಾಜ್ಯಘಟಕ ಗದಗ, ನರಗುಂದದ ಭೈರನಹಟ್ಟಿಯ ಭಾವೈಕ್ಯತಾ ಮಠವಾದ ದೊರೆಸ್ವಾಮಿ ವಿರಕ್ತಮಠದಲ್ಲಿ ಅ. 30 ರಂದು ಅಖಿಲ ಭಾರತ ಗಜಲ್ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಿದೆ.
ಕೊಪ್ಪಳದ ಕನಕಗಿರಿಯವರಾದ ಅಲ್ಲಾಗಿರಿರಾಜ್ ಸಮಾಜಸೇವೆ, ಸಾಹಿತ್ಯ ಬರಹ, ಅಧ್ಯಯನ, ಬೀದಿನಾಟಕ, ಸಂಘಟನೆ, ಪತ್ರಿಕೋದ್ಯಮ ಮುಂತಾದ ರಂಗಗಳಲ್ಲಿ ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡವರು. ಜನರಿಗೆ ಚಿರಪರಿಚಿತರಾಗಿದ್ದು ಮಾತ್ರ ಕನ್ನಡದ ಹೆಸರಾಂತ ಗಜಲ್ ಕವಿಯಾಗಿ. 1990 ರಿಂದ 1993 ರವರೆಗೆ ರಾಯಚೂರ ಜಿಲ್ಲೆಯಲ್ಲಿ ಸಾಕ್ಷರತಾ ಕಾರ್ಯಕ್ರಮದಲ್ಲಿ 1000 ಕ್ಕೂ ಹೆಚ್ಚು ಬೀದಿನಾಟಕಗಳನ್ನು ಮಾಡಿ ಜನಜಾಗೃತಿ ಮೂಡಿಸಿದರು. ಕರ್ನಾಟಕ, ಆಂದ್ರ್ರದೇಶದಲ್ಲಿ ಬುದ್ಧಿಮಾಂದ್ಯ ಮತ್ತು ಬೀದಿಮಕ್ಕಳು ಹಾಗೂ ಅನಾಥ ಮಕ್ಕಳ ಬದುಕಿನ ಬದಲಾವಣೆಗಾಗಿ ವಿಶೇಷ ಕಾರ್ಯಕ್ರಮಗಳ ಆಯೋಜನೆ. 1997 ರಲ್ಲಿ ಕೇಂದ್ರ ಸರ್ಕಾರದಿಂದ ಭಾರತ ದರ್ಶನ ಪ್ರವಾಸಕ್ಕೆ ಆಯ್ಕೆಯಾಗಿ ಭಾರತದ ಸಂಸ್ಕೃತಿ ಮತ್ತು ಯುವಜನಾಂಗ, ಕೃಷಿ ಕುರಿತು ಅಧ್ಯಯನ. 1998 ರಿಂದ 2010 ರವರೆಗೆ ಹಾಯ್ ಬೆಂಗಳೂರ್, ಅಗ್ನಿ, ಸ್ಪಂದನಾ, ಬಿಸಿಲ ಬದುಕು, ಬೆಳಕಿಂಡಿ, ನಾಡನುಡಿ, ಸುವರ್ಣಗಿರಿ, ರಾಯಚೂರು ವಾಣಿ, ಕನ್ನಡಪ್ರಭ, ಉದಯ ಟಿವಿ ಹಾಗೂ ಈ ಟಿವಿಯಲ್ಲಿ ಪ್ರಮುಖ ಹುದ್ದೆಗಳಲ್ಲಿ ಸೇವೆ ಸಲ್ಲಿಕೆ. ಕರ್ನಾಟಕ ರಾಜ್ಯದ ಸ್ಲಂ ನಿವಾಸಿಗಳ ಕುರಿತು ಅಧ್ಯಯನ. ಮಹಾರಾಷ್ಟ್ರ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸಗಡ್, ಜಾರ್ಖಂಡ ರಾಜ್ಯಗಳ ಆದಿವಾಸಿ ಜನಾಂಗದ ಮಕ್ಕಳು ಮತ್ತು ಮಹಿಳೆಯರ ಕುರಿತು ಅಧ್ಯಯನ. ರಾಜ್ಯದ ದೇವದಾಸಿ ತಾಯಂದಿರ ಮತ್ತು ಮಕ್ಕಳ ಕುರಿತು ವಿಶೇಷ ಅಧ್ಯಯನ. ವಿದ್ಯಾರ್ಥಿ ಇದ್ದಾಗಿನಿಂದಲೂ ಕೋಮು ಸೌಹಾರ್ದತೆಗಾಗಿ ಶ್ರಮಿಸುತ್ತಿದ್ದಾರೆ. ಸದ್ಯ ಕೃಷಿ ಇಲಾಖೆ ಕೊಪ್ಪಳದಲ್ಲಿ ಜಿಲ್ಲೆಯ ಕೃಷಿಕರ ಕುರಿತು ಅಧ್ಯಯನ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ.
ಸಾಹಿತ್ಯ ಕೃತಿಗಳು- ಕಾವ್ಯಕಡಲು, ಕೊರಳ ಕೂಗು, ಹಸಿ ಬಾಣಂತಿ ಮತ್ತು ಗಾಂಧೀ ಬಜಾರ, ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ, ಗಿರಿರಾಜನ ಪದ್ಯಗಳು ಪ್ರಕಟಗೊಂಡ ಕವನ ಸಂಕಲನಗಳಾದರೆ, ಜಾನಕಿ ಮತ್ತು ರಬಿಯಾ, ಈ ಕವಿತೆ ಮುಗಿಯುವ ತನಕ ಮುದ್ರಣ ಹಂತದಲ್ಲಿರುವ ಕವನ ಸಂಕಲನಗಳಾಗಿವೆ. ನೂರ್ ಗಜಲ್, 99 ಗಜಲ್, ಸುರೂರ್ ಗಜಲ್, ಆಜಾದಿ ಗಜಲ್, ಸಾಕಿ ಗಜಲ್, ಸಂದಲ್ ಗಜಲ್, ಫಕೀರ್ ಗಜಲ್, ಪ್ರಕಟಿತ ಗಜಲ್ ಸಂಕಲನಗಳಾದರೆ, ರೀಖ್ತಿ ಗಜಲ್, ಸಂತನ ಸಾಲುಗಳು, ಹಿಲಾಲ್ ಗಜಲ್ ಮುದ್ರಣದ ಹಂತದಲ್ಲಿರುವ ಗಜಲ್ ಸಂಕಲನಗಳಾಗಿವೆ. ಸ್ಲಂಜನರ ಬದುಕು ಬವಣೆ, ಪುಣ್ಯಕ್ಷೇತ್ರ ಕನಕಗಿರಿ, ಕನಕಗಿರಿ ಕಲಾವೈಭವ, ಮುತ್ತು ಒಡೆಯುವ ಬನ್ನಿ, ದೇವದಾಸಿ ತಾಯಂದಿರ ಮನದಾಳದ ಮಾತು, ಸಾಕ್ಷಿ ಪ್ರಜ್ಞೆ, ರಂಗಭೂಮಿ ಸರದಾರ ಚಿಕ್ಕಪ್ಪಯ್ಯ ಇತರೆ ಪ್ರಕಟಿತ ಸಂಕಲನಗಳಾಗಿವೆ.
ಪಡೆದ ಪ್ರಶಸ್ತಿಗಳು- ದೆಹಲಿಯ ಡಾ. ಬಿ. ಆರ್. ಅಂಬೇಡ್ಕರ್ ರಾಷ್ಟ್ರೀಯ ಪ್ರಶಸ್ತಿ, ಹೂಗಾರ ಪ್ರಶಸ್ತಿ, ಪತ್ರಿಕೋದ್ಯಮ ಪ್ರಶಸ್ತಿ, ದೆಹಲಿ ಕನ್ನಡ ಸಂಘದಿಂದ 2012ರ ರಾಷ್ಟ್ರೀಯ ಕಾವ್ಯ ಪ್ರಶಸ್ತಿ, ಬಸವಜ್ಯೋತಿ ಪ್ರಶಸ್ತಿ, ಕಾಯಕಯೋಗಿ ಪ್ರಶಸ್ತಿ, ಮಂತ್ರಾಲಯ ಮಠದಿಂದ ಸುಯತೀಂದ್ರ ಪ್ರಶಸ್ತಿ, ಹಾಗೂ ಗಜಲ್ ಸಾಹಿತ್ಯಕ್ಕಾಗಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ 100 ಕ್ಕೂ ಹೆಚ್ಚು ಪ್ರಶಸ್ತಿ, ಪುರಸ್ಕಾರಗಳು ಅಲ್ಲಾಗಿರಿರಾಜ್ ಅವರಿಗೆ ಒಲಿದು ಬಂದಿವೆ.
ಅಲ್ಲಾಗಿರಿರಾಜ್ ಅವರ ಮೊದಲ ಗಜಲ್ ಸಂಕಲನ ‘ನೂರ್ ಗಜಲ್’ ಆರಕ್ಕೂ ಹೆಚ್ಚು ಬಾರಿ ಮುದ್ರಣಗೊಂಡ ಜನಪ್ರಿಯ ಗಜಲ್ ಸಂಕಲನವಾಗಿದೆ. 18 ಕ್ಕಿಂತ ಹೆಚ್ಚು ಪ್ರಶಸ್ತಿಗಳು ಈ ಸಂಕಲನಕ್ಕೆ ಸಂದಿವೆ ಎಂಬುದು ಗಮನಾರ್ಹ ಸಂಗತಿ. ‘ಸರ್ಕಾರ ರೊಕ್ಕ ಮುದ್ರಿಸಬಹುದು ತುಂಡು ರೊಟ್ಟಿಯನ್ನಲ್ಲ’ ಎಂಬ ಕವನ ಸಂಕಲನವು ಮುದ್ರಣದ ಹಂತದಲ್ಲಿರುವಾಗಲೇ ಮೂರು ಬಾರಿ ಮುದ್ರಣಗೊಂಡಿದೆ ಹಾಗೂ ನಾಲ್ಕು ರಾಜ್ಯಮಟ್ಟದ ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ನಾಡಿನಾದ್ಯಂತ ಗಜಲ್ ಉಪನ್ಯಾಸಗಳನ್ನು ನೀಡಿರುವ ಗಿರಿರಾಜ್ ಅವರು ‘ಸಮೀರ್ ಪ್ರಕಾಶನ ಕನಕಗಿರಿ’ ಮೂಲಕ ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿ, ಪ್ರೋತ್ಸಾಹಿಸುತ್ತಿದ್ದಾರೆ. ಪ್ರತಿವರ್ಷ ‘ಗಾಲಿಬ್ ನೆನಪು’ ಕಾರ್ಯಕ್ರಮ ಆಯೋಜನೆ ಮಾಡುವುದರ ಮೂಲಕ ಯುವ ಗಜಲ್ ಬರಹಗಾರರಿಗೆ ವೇದಿಕೆ ಒದಗಿಸುತ್ತಿದ್ದಾರೆ. ಗಿರಿರಾಜ್ ಅವರ ಗಜಲ್‌ಗಳನ್ನು ಕೆಲವು ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಪಠ್ಯವಾಗಿಸಿದೆ. ಎಷ್ಟೋ ಗಜಲ್ ಬರಹಗಾರರನ್ನು ಕೈಹಿಡಿದು ಬರೆಸುವ, ಗಜಲ್ ಬರವಣಿಗೆಯಲ್ಲಿ ಆಸಕ್ತಿ ಹುಟ್ಟಿಸುವ ಗುರುವಾಗಿಯೂ ಗಿರಿರಾಜ್ ಗುರುತಿಸಿಕೊಂಡಿದ್ದಾರೆ.
‘ತೆರೆದ ಬಾಗಿಲು ತೆರೆದೇ ಇದೆ ಬರುವುದಾದರೆ ದುಷ್ಮನ್‌ಗೂ ಸಲಾಂ ಹೇಳುವೆ. ಹಾಕಿದ ರಂಗೋಲಿ ನಗುತಲಿದೆ ಬೆನ್ನ ಹಿಂದೆ ಚೂರಿ ಹಾಕುವ ಕೈಗಳಿಗೂ ದುವಾ ಮಾಡುವೆ’ ಎಂದು ಗಿರಿರಾಜ ಶುಭ್ರ ಮನಸಿನಿಂದ ಪ್ರಾರ್ಥಿಸುವ, ‘ಮೊಹಬ್ಬತ್‌ಗೆ ಸಕಲರು ಸಲಾಂ ಮಾಡಲೇಬೇಕು ಜಿಂದಗಿ ಇರುವ ತನಕ’ ಎಂದು ಪ್ರೀತಿಯಿರಲಿ ಬಾಳತುಂಬ ಎನ್ನುವುದನ್ನು ಹೇಳಿಕೊಡುವ, ‘ನನಗೆ ನಿನಗೆ ಬಂದ ಬವಣೆಗಳನ್ನು ನಾವೇ ನಿವಾರಿಸಿಕೊಳ್ಳಬೇಕು ಮಾತು ಮಾತಿಗೆ ದೇವರೆಂದೆರೆ ಅವನು ಎಲ್ಲಿಂದ ಬರಬೇಕು’ ಎನ್ನುತ್ತಲೇ ಆತ್ಮಸ್ಥೈರ್ಯ ತುಂಬುವ, ‘ತಲವಾರು ಮಸೆದರೆ ಧರ್ಮ ನಗುವುದಿಲ್ಲ ಒಳಮನಸು ಬಾಡಿ ಹೋಗುತ್ತದೆ’ ಎಂದು ಮರಗುವ, ‘ಹೇಳು ಅವನಿಗೆ ಬೆವರ ವಾಸನೆಯೇ ಶ್ರೇಷ್ಠ ಈ ಸುಡುಗಾಡು ಅತ್ತರ್‌ಗಿಂತ’ ಎಂದು ಕಾಯಕಶ್ರೇಷ್ಠತೆ ಅರಹುವ, ‘ಇರುವುದೊಂದೇ ಭೂಮಿ ನೀವೇ ಗಡಿ ಮಾಡಿಕೊಂಡಿದ್ದೀರಿ ಮನುಷ್ಯರ ಕೊಲ್ಲಲು ಧರ್ಮ ಸಾಕಿದ್ದೀರಿ’ ಎಂದೆನ್ನುವ, ‘ನಿನ್ನ ತುಟಿಯ ಸಿಹಿಯ ಮುಂದೆ ಲೋಕದೊಳಗಿನ ಯಾವ ಸಿಹಿಯು ದೊಡ್ಡದಲ್ಲ ಸಖಿ’ ಎಂದು ಒಲವ ಮಳೆಯಲ್ಲಿ ಮಿಂದೇಳಿಸುವ ಅಲ್ಲಾಗಿರಿರಾಜ್ ಎಂದೆಂದಿಗೂ ಓದುಗರ ಎದೆಯಲ್ಲಿ ಉಳಿಯುತ್ತಾರೆ. ಗಜಲ್ ಸಮ್ಮೇಳನದ ಅಧ್ಯಕ್ಷತೆ ಅವರಿಗೆ ಒಲಿದು ಬಂದಿರುವುದಕ್ಕೆ ಅಭಿನಂದಿಸುತ್ತಾ, ಮತ್ತಷ್ಟು ಗಜಲ್ ಸಂಕಲನಗಳು ಅವರಿಂದ ಬರಲಿ ಎಂದು ಹಾರೈಸುವೆ.
- * * * -