ಎಲ್ಲರೂ ಗ್ರಾಮದ ಸ್ವಚ್ಛತೆಯ ಆದ್ಯತೆಗೆ ಮುಂದಾಗಬೇಕು: ಡಾ. ಬಸವರಾಜ

ಲೋಕದರ್ಶನ ವರದಿ

ಶಿರಹಟ್ಟಿ 10: ಗ್ರಾಮದಲ್ಲಿ ವಾಸಿಸುವ ಪ್ರತಿಯೊಬ್ಬರೂ ತಮ್ಮ ತಮ್ಮ ಮನೆ ಹಾಗೂ ಮನೆಯ ಮುಂದೆ ಹಾಗೂ ಹಿಂದೆ ಇರುವ ಸ್ಥಳವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದರಿಂದ ಸೊಳ್ಳೆಯಿಂದ ಬರುವ ರೋಗಗಳನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ ಹಾಗೂ ಗ್ರಾಮದ ಸ್ವಚ್ಚತೆಗೆ ಎಲ್ಲರೂ ಆದ್ಯತೆ ನೀಡುವಲ್ಲಿ ಮುಂದಾಗಬೇಕು ಎಂದು ಡಾ. ಬಸವರಾಜ ಹಳ್ಳೆಮ್ಮನವರ ಹೇಳಿದರು.

ಅವರು ತಾಲೂಕಿನ ವಡವಿ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹೆಬ್ಬಾಳದ ವ್ಯಾಪ್ತಿಯಲ್ಲಿ ಬರುವ ವಡವಿ-ಹೊಸೂರ ಗ್ರಾಮದಲ್ಲಿ ನಾಗರಿಕರಿಗೆ ಒಂದು ಸವಾಲು (ಡೆಂಗ್ಯೂ ನಿಯಂತ್ರಣದ ಜಾಗೃತಿ) ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು ಮನೆಮನೆಗೆ ತೆರಳಿ ಜಾಗೃತಿ ಮೂಡಿಸಿ ನಂತರ ಮಾತನಾಡುತ್ತಾ, ಮನೆಯ ಸುತ್ತಮುತ್ತಲೂ ಸುಚಿತ್ವವನ್ನು ಕಾಯ್ದುಕೊಳ್ಳಬೇಕು. ಮನೆಯಲ್ಲಿನ ಶುದ್ದ ನೀರನ್ನು ಭದ್ರವಾಗಿ ಮುಚ್ಚಿಡಬೇಕು. ಚರಂಡಿಯಲ್ಲಿ ಮತ್ತು ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಸೊಳ್ಳೆಯಿಂದ ಭಯಾನಕವಾದ ರೋಗಗಳು ಹರಡುತ್ತವೆ. ಜೀವಕ್ಕೆ ಅಪಾಯವನ್ನು ತಂದೊಡ್ಡುವ ಮಾರಿಯಂತಹ ಸೊಳ್ಳೆಗಳ ಜನನಕ್ಕೆ ಕಾರಣವಾದ ಸಂಗತಿಗಳನ್ನು ಅರಿತುಕೊಂಡು ಸೊಳ್ಳೆಗಳನ್ನು ಉತ್ಪತ್ತಿಯಾಗದಂತೆ  ನೋಡಿಕೊಳ್ಳವುದು ಅವಶ್ಯ. ಘನತ್ಯಾಜವಸ್ತುಗಳನ್ನು ಎಲ್ಲೆಂದರೆಲ್ಲಿ ಚೆಲ್ಲದೇ ನಿಗದಿತ ಸ್ಥಳದಲ್ಲಿಹಾಕಿ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕು. ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ  ಎಂದು ಹೇಳಿದರು. 

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿ, ಅಂಗನವಾಡಿ ಕಾರ್ಯಕರ್ತೆಯರು, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.