ಲಕ್ನೋ, ಫೆ 6 : ರಕ್ಷಣಾ ಸಚಿವಾಲಯ ಈ ಹಿಂದೆ ಕೈಗಾರಿಕೋದ್ಯಮಿಗಳಿಗೆ ಯಾರು ಪ್ರವೇಶಿಸದಂತ ಅಭೇದ್ಯ ಕೋಟೆಯಂತಾಗಿತ್ತು, ಆದರೆ ನಮ್ಮ ಸರ್ಕಾರ ಹೂಡಿಕೆದಾರ ಸ್ನೇಹಿಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ
ತಾವು ರಕ್ಷಣಾ ಸಚಿವಾಲಯಕ್ಕೆ ಭೇಟಿ ನೀಡಿದಾಗ ನಮ್ಮ ಕಚೇರಿಗಳ ಕೆಲವು ಸೇನಾ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆಯಾರನ್ನು ಒಳಗೆ ಬಿಡುತ್ತಿರಲ್ಲ. ಈಗ ವ್ಯವಸ್ಥೆ ಬದಲಾಯಿಸಿ, ಸಚಿವಾಲಯದ ಬಾಗಿಲು ಮುಕ್ತಗೊಳಿಸಿದ್ದೇನೆ, ಹಾಗಾಗಿ ಜನರು ನಮ್ಮೊಂದಿಗೆ ಚರ್ಚಿಸಿ ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ಹೇಳಿದರು.
ಗುರುವಾರ ಡಿಫೆನ್ಸ್ ಎಕ್ಸ್ ಪೋ 2020 ಕಾರ್ಯಕ್ರಮದ ಬಿಡುವಿನಲ್ಲಿ, ಉತ್ತರ ಪ್ರದೇಶ ಡಿಫೆನ್ಸ್ ಕಾರಿಡಾರ್ ಕುರಿತ ಸೆಮಿನಾರ್ ಉದ್ದೇಶಿಸಿ ಮಾತನಾಡಿದ ಸಚಿವರಾಜನಾಥ್ ಸಿಂಗ್, ರಕ್ಷಣಾ ತಯಾರಿಕೆಯಲ್ಲಿ ಹೂಡಿಕೆಗೆ ಸಂಬಂಧಿಸಿದಂತೆ ದೆಹಲಿ ಅಥವಾ ಲಕ್ನೋದಲ್ಲಿ ಏನಾದರೂ ಸಮಸ್ಯೆ ಇದ್ದರೆ, ಉದ್ಯಮಿಗಳು ತಮ್ಮನ್ನು ಮುಕ್ತವಾಗಿ ಯಾವಾಗ ಬೇಕಾದರೂ ಭೇಟಿ ಮಾಡಬಹುದು ಎಂದು ಮನವಿ ಮಾಡಿದರು
ನಮ್ಮ ಸರ್ಕಾರ, ಈ ಹಿಂದಿನ ಸರ್ಕಾರದಂತೆ ಸಮಸ್ಯೆಗಳ ಮೇಲೆ ಕುಳಿತುಕೊಳ್ಳುವುದಿಲ್ಲ, ರಕ್ಷಣಾ ತಯಾರಿಕೆಯಲ್ಲಿ ದೇಶ ತನ್ನ ಗುರಿ ಸಾಧಿಸುವಂತಾಗಲು ಹೂಡಿಕೆದಾರರ ಎಲ್ಲ ಸಂಕಷ್ಟಗಳನ್ನು ಪರಿಹರಿಸಲು ಉತ್ಸುಕವಾಗಿದೆ ಎಂದು ಹೇಳಿದರು.
ಹೂಡಿಕೆದಾರರನ್ನು ಆಕರ್ಷಿಸಲು ಅವಿಶ್ರಾಂತ ಪ್ರಯತ್ನ ನಡೆಸುತ್ತಿರುವ ಹಾಗೂ ಕೈಗಾರಿಕೋದ್ಯಮಿಗಳಿಗೆ ಉತ್ತಮ ಸೌಲಭ್ಯ ಕಲ್ಪಿಸುತ್ತಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯನಾಥ್ ಅವರಿಗೆ ರಕ್ಷಣಾ ಸಚಿವರು ಧನ್ಯವಾದ ಸಲ್ಲಿಸಿದರು.