ಕೊಪ್ಪಳ 13: ಆನೆಕಾಲು ರೋಗ ನಿಯಂತ್ರಣಕ್ಕೆ ಗ್ರಾಮದಲ್ಲಿರುವ ಸಾರ್ವಜನಿಕರು ಮತ್ತು ಎಲ್ಲಾ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಸಹಕರಿಸಬೇಕು ಎಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಘುನಂದನ್ ಮೂರ್ತಿ ಹೇಳಿದರು.
ಜಿಲ್ಲಾ ಪಂಚಾಯತಿಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ಕೇಂದ್ರಿಕೃತ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮದ ಅಂಗವಾಗಿ ಜಿಲ್ಲಾ ಮಟ್ಟದ ಅಂತರ್ ಇಲಾಖಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸೆಪ್ಟೆಂಬರ್ 16 ರಿಂದ 21 ರವರೆಗೆ ಕೊಪ್ಪಳ ಜಿಲ್ಲೆಯ ಆಯ್ದ 13 ಗ್ರಾಮಗಳಲ್ಲಿ ಆನೆಕಾಲು ರೋಗ ನಿವಾರಣೆಗಾಗಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಆರೋಗ್ಯ ಇಲಾಖೆಯಿಂದ ಮನೆ-ಮನೆಗೆ ಹಾಗೂ ಎಲ್ಲಾ ಶಾಲಾ ಕಾಲೇಜುಗಳಿಗೆ ಭೇಟಿ ನೀಡಿ ಖುದ್ದಾಗಿ ಬಿ.ಇ.ಸಿ ಮತ್ತು ಅಲ್ಬೆಂಡಜೋಲ್ ಮಾತ್ರೆಗಳನ್ನು ಉಚಿತವಾಗಿ ನೀಡಲಾಗುತ್ತದೆ. ಈ ಮಾತ್ರೆಗಳು ಅತ್ಯಂತ ಪರಿಣಾಮಕಾರಿಯಾಗಿದ್ದು, ಯಾವುದೇ ತೀವ್ರತೆರನಾದ ಅಡ್ಡ ಪರಿಣಾಮ ಇರುವುದಿಲ್ಲ. ಈ ಮಾತ್ರೆಗಳನ್ನು ಗಭರ್ಿಣಿಯರು, ಎರಡು ವರ್ಷದೊಳಗಿನ ಮಕ್ಕಳು ಹಾಗೂ ತೀವ್ರತರ ಖಾಯಿಲೆಯಿಂದ ಬಳಲುತ್ತಿರುವವರನ್ನು ಹೊರತು ಪಡಿಸಿ ಗ್ರಾಮಗಳಲ್ಲಿರುವ ಪ್ರತಿಯೊಬ್ಬರು ಸೇವಿಸಿ ಆನೆಕಾಲು ರೋಗದಿಂದ ಪಾರಾಗಲು ಜಿಲ್ಲಾ ಪಂಚಾಯತ್ ಹಾಗೂ ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಬೇಕು. ಈ ರೋಗ ಪರಾವಲಂಬಿ ಜೀವಿಗಳಿಂದ ಬರುವ ಸಾಂಕ್ರಾಮಿಕ ರೋಗವಾಗಿದ್ದು, ಕ್ಯುಲೆಕ್ಸ್ ಜಾತಿಯ ಸೋಂಕಿತ ಸೊಳ್ಳೆಯ ಕಚ್ಚುವಿಕೆಯಿಂದ ಒಬ್ಬರಿಂದ ಇನ್ನೊಬ್ಬರಿಗೆ ಹರಡುತ್ತದೆ. ಸೋಂಕಿತ ಸೊಳ್ಳೆ ಕಚ್ಚಿದ ವ್ಯಕ್ತಿಗಳಲ್ಲಿ 06 ರಿಂದ 08 ವರ್ಷಗಳ ನಂತರ ಕೈ, ಕಾಲುಗಳು, ವೃಷಣಗಳು ಮತ್ತು ಸ್ತನಗಳು ದಪ್ಪವಾಗುತ್ತವೆ. ಒಂದು ಸಾರಿ ಈ ರೋಗಕ್ಕೆ ತುತ್ತಾದರೆ ಈ ರೋಗವನ್ನು ವಾಸಿ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.
ಜಿಲ್ಲೆಯ ಕೊಪ್ಪಳ ತಾಲ್ಲೂಕಿನ ಕಿನ್ನಾಳ, ಯಲಬುಗರ್ಾ ತಾಲ್ಲೂಕಿನ ಬಂಡಿಹಾಳ, ಗಂಗಾವತಿ ತಾಲ್ಲೂಕಿನ ಆನೆಗುಂದಿ, ಹೊಸಕೇರ, ನವಲಿ ಹಾಗೂ ಕುಷ್ಟಗಿ ತಾಲ್ಲೂಕಿನ ಹನುಮಸಾಗರ, ಹೂಲಗೇರ, ತಾವರಗೇರಾ, ಹಿರೇಮನ್ನಾಪುರ, ಸಾಸ್ವಿಹಾಳ, ನೀರ್ಲಕೊಪ್ಪ ಗ್ರಾಮಗಳಲ್ಲಿ ಹಾಗೂ ಗಂಗಾವತಿ ಪಟ್ಟಣ ಹಾಗೂ ಕುಷ್ಟಗಿ ಪಟ್ಟಣದಲ್ಲಿ ಸಾಮೂಹಿಕ ಮಾತ್ರೆ ನುಂಗಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಗ್ರಾಮಗಳಲ್ಲಿ ಹಾಗೂ ಪಟ್ಟಣಗಳಲ್ಲಿ ಇರುವ ಪ್ರತಿಯೊಬ್ಬರು ಆನೆಕಾಲು ರೋಗ ಮುಕ್ತರಾಗಲು ಆರೋಗ್ಯ ಇಲಾಖೆ ನೀಡುವ ಮಾತ್ರೆಗಳನ್ನು ತಪ್ಪದೇ ಸೇವಿಸಬೇಕು ಎಂದು ತಿಳಿಸಿದರು.
ಆನೆಕಾಲು ರೋಗ ನಿಯಂತ್ರಣವಾಗಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಪಟ್ಟಿ ಮಾಡಲಾದ ಪ್ರದೇಶದ ಶಾಲೆಗಳಲ್ಲಿ ಮಕ್ಕಳಿಗೆ ಕಡ್ಡಾಯವಾಗಿ ಮಾತ್ರೆ ನುಂಗಿಸುವ ಕುರಿತು ಮಕ್ಕಳ ಪಾಲಕರಿಂದ ಅನುಮತಿ ಪಡೆಯುವಂತೆ ಶಾಲಾ ಮುಖ್ಯಸ್ಥರಿಗೆ ತಿಳಿಸಲು ಸೂಚನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಅಡಿ ಬರುವ ವಸತಿ ಶಾಲೆ, ವಸತಿ ನಿಲಯಗಳಲ್ಲಿ ಮಕ್ಕಳಿಗೆ ಮಾತ್ರೆ ನುಂಗಿಸುವ ಕಾರ್ಯಕ್ರಮದ ಕುರಿತು ಕ್ರಮ ತೆಗೆದುಕೊಳ್ಳಲು ಸೂಚಿಸಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕಂದಾಯ ಇಲಾಖೆ ಸೇರಿದಂತೆ ಇತರ ಇಲಾಖೆಗಳು ಆನೆ ಕಾಲು ರೋಗ ನಿಯಂತ್ರಣ ಕಾರ್ಯಕ್ರಮದಲ್ಲಿ ಅಮನ್ವಯತೆಯಿಂದ ಕಾರ್ಯ ನಿರ್ವಹಿಸಿ ಜಿಲ್ಲೆಯನ್ನು ಆನೆ ಕಾಲು ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಶ್ರಮ ವಹಿಸಿ ಎಂದು ಇಲಾಖಾ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಆರೋಗ್ಯ ಇಲಾಖೆಯ ಡಿಎಂಓ ಡಾ.ಪ್ರಕಾಶ, ಸಾರ್ವಜನಿಕ ಶಿಕ್ಷಣ ಇಲಾಖೆ, ನಗರ ಸಭೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.