ಬೆಳಗಾವಿ 19: ಸಮೀಪದ ಅಲಾರವಾಡ ಗ್ರಾಮದಲ್ಲಿರುವ ಸರ್ವೇ ನಂ 242 ರಲ್ಲಿ ಖಾಸಗಿ ವ್ಯಕ್ತಿಯೊಬ್ಬರು ನಿವೇಶನಗಳನ್ನು ಹಾಕಿದ್ದು, ಈ ನಿವೇಶನದ ಒಳಚರಂಡಿ ಹೊಲಸು ನೀರು ಗ್ರಾಮದ ಕೆರೆಗೆ ಹರಿ ಬಿಡಲಾಗಿದೆ. ಇದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ತಾಪತ್ರಯವಾಗುತ್ತಿದ್ದು, ಕೆರೆಗೆ ಒಳಚರಂಡಿ ನೀರು ಹರಿಬಿಡುತ್ತಿರುವ ವಿರುದ್ದ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಇಂದು ಅಲಾರವಾಡ ಗ್ರಾಮದ ರೈತರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಅಲಾರವಾಡ ಗ್ರಾಮದಲ್ಲಿ ರೈತಾಪಿ ವರ್ಗ ಹೆಚ್ಚಾಗಿದ್ದು, ಹೆಚ್ಚಿನ ಜನರು ಹೈನುಗಾರಿಕೆ ಕಸುಬು ನಡೆಸುತ್ತಾರೆ. ಗ್ರಾಮದಲ್ಲಿ ಸುಮಾರು 3000 ಕ್ಕು ಹೆಚ್ಚು ಜಾನುವಾರುಗಳಿದ್ದು, ಈ ಜಾನುವಾರುಗಳಿಗೆ ಇಲ್ಲಿನ ಕೆರೆ ನೀರು ಕುಡಿಯಲು ಬಳಸಲಾಗುತ್ತದೆ. ಆದರೆ ಇತ್ತಿಚಿಗೆ ಖಾಸಗಿ ವ್ಯಕ್ತಿಯೋರ್ವರು ಬಡಾವಣೆ ನಿರ್ಮಿಸಿ ಆ ಬಡಾವಣೆಯಲ್ಲಿನ ಒಳಚರಂಡಿ ನೀರನ್ನು ಕೆರೆಗೆ ಹರಿ ಬಿಡುವ ನಕ್ಷೆಯನ್ನು ರೂಪಿಸಿದ್ದಾರೆ.
ಈ ಕುಲುಷಿತ ನೀರು ಸೇವನೆಯಿಂದ ಜಾನುವಾರುಗಳಿಗೆ ರೋಗ ರುಜಿನುಗಳು ಬರುವ ಸಾಧ್ಯತೆಗಳಿವೆ. ಹಾಗಾಗಿ ಬಡವಾಣೆಯ ನೀರು ಕೆರೆಗೆ ಬಿಡದಂತೆ ಖಾಸಗಿ ವ್ಯಕ್ತಿಗಳಿಗೆ ಸೂಚನೆ ನೀಡುವ ಮೂಲಕ ಕೆರೆಗೆ ಕೊಳಚೆ ನೀರು ಬರದಂತೆ ಮಾಡಬೇಕು. ಹಾಗೂ ಅವರು ಪ್ರಾರಂಭಿಸಿರುವ ಬಡಾವಣೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಬೇಕೆಂದು ಅಲಾರವಾಡ ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ಈ ಸಂದರ್ಭದಲ್ಲಿ ಸುನಿಲ ಬಸ್ತವಾಡ, ರಾಜು ಬಡಚಿ, ಬಾಹುಬಲಿ ಜನಗೌಡಾ, ಸುನಿಲ ಜನಗೌಡಾ, ಕೆ.ಜೆ. ಶಂಕರಗೌಡಾ, ಭರತ ಶಂಕರಗೌಡಾ , ರವಿ ಮಜಗಾಂವಿ, ಮೊದಲಾದವರು ಉಪಸ್ಥಿತರಿದ್ದರು.