ಮುಂಬೈ, ಏ ೨೮, ಬಾಲಿವುಡ್ ನಟ ಅಕ್ಷಯ್ ಕುಮಾರ್ ಮತ್ತೊಮ್ಮೆ ತಮ್ಮ ಉದಾರತೆ ಪ್ರದರ್ಶಿಸಿದ್ದಾರೆ. ಕೊರೊನಾ ಮಹಾಮಾರಿ ವಿರುದ್ದ ಹೋರಾಟದಲ್ಲಿ ನಿರಂತರವಾಗಿ ಶ್ರಮಿಸುತ್ತಿರುವ ಮುಂಬೈ ಪೊಲೀಸ್ ಪ್ರತಿಷ್ಠಾನಕ್ಕೆ ೨ ಕೋಟಿ ರೂಪಾಯಿ ದೇಣಿಗೆ ನೀಡುವುದಾಗಿ ಪ್ರಕಟಿಸಿದ್ದಾರೆ.ಈ ಕುರಿತು ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸ್ ಆಯುಕ್ತ ಪರಮ್ ವೀರ್ ಸಿಂಗ್, ತಮ್ಮ ಅಧಿಕೃತ ಟ್ವೀಟರ್ ನಲ್ಲಿ ಅಕ್ಷಯ್ ಕುಮಾರ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಕೊರೊನಾ ಸೋಂಕಿನಿಂದ ಮೃತಪಟ್ಟ ಹೆಡ್ ಕಾನಿಸ್ಟೇಬಲ್ ಗಳಾದ ಚಂದ್ರಕಾಂತ್ ಪೆಂಡೂರ್ಕರ್, ಹಾಗೂ ಸಂದೀಪ್ ಸರ್ವೆ ಅವರಿಗೆ ಅಕ್ಷಯ್ ಟ್ವೀಟ್ ನಲ್ಲಿ ನಮನಸಲ್ಲಿಸಿದ್ದಾರೆ ಮಹಾಮಾರಿ ವಿರುದ್ದ ಹೋರಾಟದಲ್ಲಿ ಪೊಲೀಸರು ಮಾಡುತ್ತಿರುವ ಸೇವೆಗೆ ಸಲಾಂ ಎಂದು ಹೇಳಿದ್ದಾರೆ. ಪೊಲೀಸರಿಂದಾಗಿ ನಾವು ಇನ್ನೂ ಸುರಕ್ಷಿತವಾಗಿದ್ದೇವೆ. ಮುಂಬೈ ಪೊಲೀಸ್ ಫೌಂಡೇಶನ್ ಗೆ ಉದಾರವಾಗಿ ದೇಣಿಗೆ ನೀಡುವಂತೆ ತಮ್ಮ ಅಭಿಮಾನಿಗಳಿಗೆ ಅಕ್ಷಯ್ ಕುಮಾರ್ ಮನವಿಮಾಡಿದ್ದಾರೆ.ಈ ಹಿಂದೆಯೂ ಅಕ್ಷಯ್ ಕುಮಾರ್ ಪ್ರಧಾನ ಮಂತ್ರಿ ಕೇರ್ಸ್ ನಿಧಿಗೆ ೨೫ ಕೋಟಿ, ಮುಂಬೈ ಮುನಿಸಿಪಲ್ ಕಾರ್ಪೋರೇಷನ್ ೩ ಕೋಟಿ ದೇಣಿಗೆ ಪ್ರಕಟಿಸಿದ್ದರು. ಈಗ ಮುಂಬೈ ಪೊಲೀಸರಿಗೆ ೨ ಕೋಟಿ ದೇಣಿಗೆ ಪ್ರಕಟಿಸಿ ಸೂಪರ್ ಸ್ಟಾರ್ ಅನಿಸಿಕೊಂಡಿದ್ದಾರೆ. ಅಕ್ಷಯ್ ಅವರ ಉದಾರತೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಶಂಸೆಯ ಮಹಾಪೂರವೇ ಹರಿದುಬರುತ್ತಿದೆ.