ಲಕ್ನೋ, ಆ 20 ರಾಯ್ ಬರೇಲಿ ಕ್ಷೇತ್ರದ ಮಾಜಿ ಶಾಸಕ ಅಖಿಲೇಶ್ ಸಿಂಗ್ ಮಂಗಳವಾರ ಲಕ್ನೋದಲ್ಲಿ ದೀರ್ಘಕಾಲಿನ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ 59 ವರ್ಷ ವಯಸ್ಸಾಗಿತ್ತು. ಸೋಮವಾರ ಅವರನ್ನು ಲಕ್ನೋದ ಸಂಜಯ್ ಗಾಂಧಿ ಸ್ನಾತಕೋತ್ತರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ ದಾಖಲಿಸಲಾಗಿತ್ತು. ಸ್ಥಳೀಯರ ನಡುವೆ 'ರಾಬಿನ್ಹುಡ್' ಎಂದೇ ಪರಿಚಿತರಾಗಿದ್ದ ಸಿಂಗ್, ರಾಯ್ ಬರೇಲಿ (ಸದರ್) ಕ್ಷೇತ್ರದಿಂದ ಐದು ಬಾರಿ ಗೆದ್ದಿದ್ದರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮತ್ತು ಪೀಸ್ ಪಕ್ಷದಿಂದ ತಲಾ ಒಂದು ಬಾರಿ ಆಯ್ಕೆಯಾದರೆ, ಮೂರು ಬಾರಿ ಪಕ್ಷೇತರರಾಗಿ ಆಯ್ಕೆಯಾಗಿದ್ದರು. ಪತ್ನಿ, ಇಬ್ಬರು ಪುತ್ರಿಯರನ್ನು ಅವರು ಅಗಲಿದ್ದಾರೆ. ಸಿಂಗ್ ಅವರ ಹಿರಿಯ ಪುತ್ರಿ ರಾಯ್ ಬರೇಲಿ (ಸದರ್) ಕ್ಷೇತ್ರದ ಕಾಂಗ್ರೆಸ್ ಶಾಸಕಿಯಾಗಿದ್ದಾರೆ. ಅವರ ಅಂತ್ಯಸಂಸ್ಕಾರ ರಾಯ್ ಬರೇಲಿಯ ಲಾಲುಪುರ್ ಗ್ರಾಮದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.