ನವದೆಹಲಿ, ಜ 6 ಪಾಕಿಸ್ತಾನದಲ್ಲಿ ಸಿಖ್ಖರ ಮೇಲೆ ಆಗಾಗ್ಗೆ ನಡೆಯುತ್ತಿರುವ ದಾಳಿಯ ಹಿನ್ನಲೆಯಲ್ಲಿ ಪಾಕ್ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಪ್ರಮುಖ ಎನ್ಡಿಎ ಪಾಲುದರ ಪಕ್ಷ ಅಕಾಲಿ ದಳ ಸೋಮವಾರ ಒತ್ತಾಯಿಸಿದೆ.
ಪಕ್ಷದ ಅಧ್ಯಕ್ಷ ಸುಖ್ಬೀರ್ ಸಿಂಗ್ ಬಾದಲ್ ನೇತೃತ್ವದ ಶಿರೋಮಣಿ ಅಕಾಲಿ ದಳ ನೇತೃತ್ವದ ನಿಯೋಗ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ಅವರನ್ನು ಭೇಟಿ ಮಾಡಿ ವಿಶ್ವಸಂಸ್ಥೆ ಸೇರಿದಂತೆ ಎಲ್ಲಾ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳಬೆಕು ಎಂದು ಒತ್ತಾಯಿಸಿದೆ.
ಅಕಾಲಿ ದಳ ಕೂಡ ಸರಕಾರಕ್ಕೆ ಮನವಿ ಪತ್ರವನ್ನು ಸಲ್ಲಿಸಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅಲ್ಲಿನ ಅಧಿಕಾರಿಗಳು ಅಲ್ಲಿನ ಅಲ್ಪಸಂಖ್ಯಾತ ಸಿಖ್ಖರೊಂದಿಗೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡಿಕೊಳ್ಳಲು ಸಿಖ್ ಸಮುದಾಯಕ್ಕೆ ಯಾವುದೇ ಭರವಸೆ ನೀಡಿಲ್ಲ ಎಂದು ಬಾದಲ್ ವಿಷಾದಿಸಿದರು.
ಪಾಕಿಸ್ತಾನದ ಪೇಶಾವರದಲ್ಲಿ ಅಲ್ಪಸಂಖ್ಯಾತ ಸಿಖ್ ಸಮುದಾಯದ ಸದಸ್ಯರ "ಉದ್ದೇಶಿತ ಹತ್ಯೆಯನ್ನು ಭಾರತ ತೀವ್ರವಾಗಿ ಖಂಡಿಸಿತ್ತು ಮತ್ತು ಘೋರ ಕೃತ್ಯ ಎಸಗಿದವನ್ನು ಕೂಡಲೆ ಬಂಧಿಸಿ, ಅವರಿಗೆ ಕಾನೂನು ಪ್ರಕಾರ ಶಿಕ್ಷೆ ನೀಡಲು ತಕ್ಷಣದ ಕ್ರಮ ತೆಗೆದುಕೊಳ್ಳಬೇಕು ಎಂದು ಇಸ್ಲಾಮಾಬಾದ್ ಅನ್ನು ಒತ್ತಾಯಿಸಿದೆ.
ಪೇಶಾವರದಲ್ಲಿ ಅಲ್ಪಸಂಖ್ಯಾತ ಸಿಖ್ ಸಮುದಾಯದ ಸದಸ್ಯರನ್ನು ಗುರಿಯಾಗಿಸಿಕೊಂಡು ಹತ್ಯೆಗೈದಿದ್ದನ್ನು ಹಾಗೂ ನಂಕಾನಾ ಸಾಹಿಬ್ನ ಪವಿತ್ರ ಗುರುದ್ವಾರದ ಮೇಲಿನ ದಾಳಿಯನ್ನು ನಿಯೋಗ ಬಲವಾಗಿ ಖಂಡಿಸಿದೆ.
ಮಾಧ್ಯಮ ವರದಿಗಳ ಪ್ರಕಾರ, ಪಾಕಿಸ್ತಾನದ ಪೇಶಾವರದಲ್ಲಿ ಮೃತಪಟ್ಟವನನ್ನು 25 ವರ್ಷದ ರವೀಂದರ್ ಸಿಂಗ್ ಎಂದು ಗುರುತಿಸಲಾಗಿದೆ. ಆದರೆ, ಕೊಲೆಗಾರನನ್ನು ಇನ್ನೂ ಗುರುತಿಸಲಾಗಿಲ್ಲ.
ಆತನ ಶವವನ್ನು ಪೇಶಾವರದ ಚಮಕಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತ್ತೆ ಮಾಡಲಾಗಿದೆ.
ಈ ಹಿಂದೆ, ನಂಕಾನಾ ಸಾಹಿಬ್ನಲ್ಲಿ ಉದ್ರಿಕ್ತ ಗೊಂಡ ನೂರಾರು ನಿವಾಸಿಗಳು ಶುಕ್ರವಾರ ಕಲ್ಲು ತೂರಾಟ ಮಾಡಿದ್ದಾರೆ ಎಂದು ವರದಿಯಾಗಿದ್ದರ ಬೆನ್ನ ಹಿಂದೆಯೇ ಗುರುನಾನಕ್ ಅವರ ಜನ್ಮಸ್ಥಳವಾದ ನಂಕಾನಾ ಸಾಹಿಬ್ ಗುರುದ್ವಾರದ ಮೇಲೆ ಕೆಲವು ಮುಸ್ಲಿಂ ಯುವಕರು ದಾಳಿ ಮಾಡಿ ಅಲ್ಲಿನ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ.