ಮುಂಬೈ, ನ 12 : ಬಾಲಿವುಡ್ ನ ಸಿಂಗಂ ಸ್ಟಾರ್ ಅಜಯ್ ದೇವಗನ್ ತಮ್ಮ ಹಿಂದಿನ ಸೂಪರ್ ಹಿಟ್ ಚಿತ್ರ 'ಫೂಲ್ ಔರ್ ಕಾಂಟೆ'ಯ ರೀಮೇಕ್ ನಿರ್ಮಿಸಲು ಇಚ್ಛಿಸುತ್ತಿದ್ದಾರೆ. 1991ರಲ್ಲಿ ಪ್ರದರ್ಶನಗೊಂಡ ಫೂಲ್ ಔರ್ ಕಾಂಟೆ ಚಿತ್ರದ ಮೂಲಕ ಅಜಯ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ತಮ್ಮ ಮುಂದಿನ ಚಿತ್ರ 'ತಾನಾಜಿ-ದಿ ಅನ್ ಸಂಗ್ ವಾರಿಯರ್' ಚಿತ್ರದ ಮೂಲಕ ಅಜಯ್ 100 ಚಿತ್ರಗಳನ್ನು ಪೂರೈಸಲಿದ್ದಾರೆ. ಈ ಸಂದರ್ಭದಲ್ಲಿ ಅವರು ತಮ್ಮ ಮೊದಲ ಚಿತ್ರದ ರೀಮೇಕ್ ಹೊರತರುವ ಚಿಂತನೆಯಲ್ಲಿದ್ದಾರೆ. ಈ ಕುರಿತು ಹೇಳಿಕೆ ನೀಡಿರುವ ಅವರು, ಬದಲಾದ ಸನ್ನಿವೇಶಗಳಿಗೆ ಹೊಂದಿಕೆಯಾಗುವಂತೆ ಚಿತ್ರವನ್ನು ರೀಮೇಕ್ ಮಾಡಲು ಬಯಸುತ್ತಿದ್ದೇನೆ. ಇದನ್ನು ಯಾರೊಂದಿಗಾದರೂ ಸಹ ನಿರ್ಮಾಣ ಮಾಡಲಿದ್ದೇನೆ. ಈ ಚಿತ್ರಕ್ಕಾಗಿ ನಾನು ಹೊಸ ಮುಖಗಳ ಹುಡುಕಾಟದಲ್ಲಿದ್ದೇನೆ. ಹೊಸ ವಿಧಾನದಲ್ಲಿ ಚಿತ್ರ ಮೂಡಿಬಂದರೂ ಅದೇ ಭಾವನಾತ್ಮಕ ಅಂಶಗಳನ್ನು ಒಳಗೊಂಡಿರುತ್ತದೆ ಎಂದಿದ್ದಾರೆ.