ನವದೆಹಲಿ, ಜ 6 ಅಮೆರಿಕಾದ ಜೀವಗಳನ್ನು ಉಳಿಸಲು ಯಾವುದೇ ಕ್ರಮಕ್ಕೂ ಡೋನಾಲ್ಡ್ ಟ್ರಂಪ್ ಆಡಳಿತ ಹಿಂಜರಿಯುವುದಿಲ್ಲ ನಮ್ಮ ಮಿತ್ರ ರಾಷ್ಟ್ರಗಳು, ಸ್ನೇಹಿತರ ಸುರಕ್ಷತೆ ಕಲ್ಪಿಸುವ ಭರವಸೆಯನ್ನು ಅಮೆರಿಕಾ, ಭಾರತಕ್ಕೆ ನೀಡಿದೆ.
ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈ ಶಂಕರ್, ಭಾನುವಾರ ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಮೈಕ್ ಪಾಂಪಿಯೊ ಜತೆ ನಡೆಸಿದ ದೂರವಾಣಿ ಮಾತುಕತೆಯ ವೇಳೆ ಈ ಭರವಸೆ ನೀಡಲಾಗಿದೆ
ಇರಾನ್ ಬೆದರಿಕೆ ಹಾಗೂ ಪ್ರಚೋದನೆ ಮುಂದುವರಿಸಿರುವ ಸಂಬಂಧ ತಾವೀಗ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿರುವುದಾಗಿ, ಅಮೆರಿಕಾ ಜನರನ್ನು ಉಳಿಸಲು ಹಾಗೂ ನಮ್ಮ ಸ್ನೇಹಿತರು ಹಾಗೂ ಮೈತ್ರಿ ರಾಷ್ಟ್ರಗಳ ರಕ್ಷಣೆ, ಸುರಕ್ಷತೆಗೆ ಹಿಂಜರಿಯುವುದಿಲ್ಲ ಪಾಂಪಿಯೋ ಟ್ವೀಟ್ ಮಾಡಿದ್ದಾರೆ.
ಜನವರಿ 4 ರಂದು ಇರಾನ್ ಕಮಾಂಡರ್ ಖಾಸಿಂ ಸುಲೈಮಾನಿ ಹತ್ಯೆ ನಡೆಸಿರುವುದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್, ಭಾರತ ಹಾಗೂ ಲಂಡನ್ ನಲ್ಲಿ ನಡೆದ ಭಯೋತ್ಪಾದಕ ಸಂಚುಗಳಲ್ಲಿ ಸುಲೈಮಾನಿ ಕೈವಾಡವಿತ್ತು ಎಂದು ಟ್ರಂಪ್ ಪ್ಲೋರಿಡಾದಲ್ಲಿ ಮಾಧ್ಯಮಗಳಿಗೆ ಹೇಳಿದ್ದರು.
ಇರಾನ್ ನ ಅತ್ಯುನ್ನತ ಅಲ್ ಕಡ್ಸ್ ಪಡೆಯ ಮುಖ್ಯಸ್ಥ ಮೇಜರ್ ಜನರಲ್ ಸುಲೇಮಾನಿ ಅವರನ್ನು ಅಮೆರಿಕಾ ಪಡೆಗಳು ಕಳೆದ ಶುಕ್ರವಾರ ಬಾಗ್ದಾದ್ ಅಂತರಾಷ್ಟ್ರೀಯ ವಿಮಾನನಿಲ್ದಾಣದ ಮೇಲೆ ನಡೆಸಿದ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಿದ್ದವು
ಈ ಹಿನ್ನಲೆಯಲ್ಲಿ ಉಂಟಾಗಿರುವ ಉದ್ವಿಗ್ನಪರಿಸ್ಥಿತಿ ಹಿನ್ನಲೆಯಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅಮೆರಿಕಾ ವಿದೇಶಾಂಗ ಕಾರ್ಯದಶರ್ಿ ಪಾಂಪಿಯೋ ಹಾಗೂ ಇರಾನ್ ವಿದೇಶಾಂಗ ಸಚಿವ ಜಾವಿದ್ ಝರೀಫ್ ಅವರೊಂದಿಗೆ ದೂರವಾಣಿ ಮಾತುಕತೆ ನಡೆಸಿದರು.
ಕೊಲ್ಲಿ ಪ್ರದೇಶದ ಪರಿಸ್ಥಿತಿ ಕುರಿತು ಅಮೆರಿಕಾ ವಿದೇಶಾಂಗ ಕಾರ್ಯದರ್ಶಿ ಪೊಂಪಿಯೊ ಅವರೊಂದಿಗೆ ದೂರವಾಣಿ ಚರ್ಚೆ ನಡೆಸಿದ್ದಾಗಿ, ಭಾರತದ ಹಕ್ಕುಗಳು ಹಾಗೂ ಕಳವಳಗಳನ್ನು ಮಾತುಕತೆಯ ವೇಳೆ ವ್ಯಕ್ತಪಡಿಸಿರುವುದಾಗಿ ಡಾ.ಜೈಶಂಕರ್ ಟ್ವೀಟ್ ಮಾಡಿದ್ದಾರೆ.
ಸಂಯುಕ್ತ ಅರಬ್ ಒಕ್ಕೂಟದ ವಿದೇಶಾಂಗ ಸಚಿವ ಶೇಖ್ ಅಬ್ದುಲ್ಲಾ ಬಿನ್ ಜಾಯೆದ್ ಬಿನ್ ಸುಲ್ತಾನ್ ಅಲ್ ನಹ್ಯಾನ್ ಅವರೊಂದಿಗೂ ಕೆ. ಜೈಶಂಕರ್ ದೂರವಾಣಿ ಮಾತುಕತೆ ನಡೆಸಿದ್ದು,
ಉಭಯ ನಾಯಕರು ಕೊಲ್ಲಿ ವಲಯದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ.
ಡಾ.ಜೈಶಂಕರ್ ಅವರು ಓಮನ್ ವಿದೇಶಾಂಗ ವ್ಯವಹಾರಗಳ ಸಚಿವ ಯೂಸುಫ್ ಅಲಾವಿ ಅವರೊಂದಿಗೆ ಚರ್ಚಿಸಿದರು.
ಕೊಲ್ಲಿ ಪ್ರದೇಶದ ಸ್ಥಿರತೆ ಮತ್ತು ಸುರಕ್ಷತೆಯ ಬಗ್ಗೆ ಸಮಾನ ಆಸಕ್ತಿಯನ್ನು ಉಭಯ ದೇಶಗಳು ಪುನರುಚ್ಚರಿಸಿವೆ. ಪ್ರಸ್ತುತ ಪರಿಸ್ಥಿತಿಯ ಬಗ್ಗೆ ಪರಸ್ಪರರ ದೃಷ್ಟಿಕೋನಗಳನ್ನು ಶ್ಲಾಘಿಸಿದೆ" ಎಂದು ವಿದೇಶಾಂಗ ಸಚಿವರು ಟ್ವೀಟ್ ಮಾಡಿದ್ದಾರೆ.
ಭಾನುವಾರ ಇರಾನ್ ವಿದೇಶಾಂಗ ಸಚಿವ ಝರೀಫ್ ಅವರೊಂದಿಗಿನ ಮಾತುಕತೆಯ ಸಂದರ್ಭದಲ್ಲಿ, ಉದ್ವಿಗ್ನತೆಯ ತೀವ್ರತೆಯ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದೆ" ಎಂದು ಜೈ ಶಂಕರ್ ಹೇಳಿದ್ದಾರೆ.