ನವದೆಹಲಿ, ಏ 22,ಕೋವಿಡ್ 19 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ಮತ್ತು ನರ್ಸ್ ಗಳ ಮೇಲೆ ಹಲ್ಲೆ ನಡೆಸುವುದನ್ನು ಗಂಭೀರವಾಗಿ ಪರಿಗಣಿಸಿರುವ ಕೇಂದ್ರ ಸಂಪುಟ ಸಭೆ ಬುಧವಾರ ಆರೋಗ್ಯ ಕಾರ್ಯಕರ್ತರ ಮೇಲಿನ ದಾಳಿಯನ್ನು ಶಿಕ್ಷಾರ್ಹ ಮತ್ತು ಜಾಮೀನುರಹಿತ ವಾರಂಟ್ ಎಂದು ಪರಿಗಣಿಸುವ ಸುಗ್ರೀವಾಜ್ಞೆಗೆ ಅನುಮೋದನೆ ನೀಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಈ ಸಭೆಯಲ್ಲಿ 1897ರ ಸಾಂಕ್ರಾಮಿಕ ಕಾಯಿಲೆ ಕಾಯ್ದೆಗೆ ತಿದ್ದುಪಡಿ ತಂದು ಆರೋಪಿಗಳಿಗೆ 6 ತಿಂಗಳಿಂದ 7ವರ್ಷಗಳವರೆಗೆ ಜೈಲುಶಿಕ್ಷೆ ಮತ್ತು ಭಾರಿ ದಂಡವನ್ನು ವಿಧಿಸಲು ಅವಕಾಶವಿದೆ.
ಸುದ್ದಿಗೋಷ್ಠಿಯಲ್ಲಿ ಈ ವಿವರ ನೀಡಿದ ವಾರ್ತಾ ಮತ್ತು ಪ್ರಸಾರ ಖಾತೆಯ ಪ್ರಕಾಶ್ ಜಾವಡೇಕರ್, ಆರೋಗ್ಯ ಕಾರ್ಯಕರ್ತರು ಈ ಸಾಂಕ್ರಾಮಿಕದಿಂದ ಬಳಲುತ್ತಿರುವ ದೇಶದ ರಕ್ಷಣೆಗೆ ಶ್ರಮಿಸುತ್ತಿದ್ದಾರೆ. ಅಂತಹವ ಮೇಲೆ ದಾಳಿಗಳು ನಡೆಯುತ್ತಿವೆ. ಯಾವುದೇ ಹಿಂಸಾಚಾರ ಮತ್ತು ದೌರ್ಜನ್ಯ ಪ್ರಕರಣಗಳನ್ನು ಸಹಿಸುವುದಿಲ್ಲ ಎಂದಿದ್ದಾರೆ. ಹೊಸ ಕಾನೂನಿನ ಪ್ರಕಾರ ವೈದ್ಯರು ಅಥವಾ ಆರೋಗ್ಯ ಕಾರ್ಯಕರ್ತರ ಮೇಲೆ ದಾಳಿ ನಡೆಸಿದವರು ಗಂಭೀರವಲ್ಲದ ಪ್ರಕರಣಗಳಲ್ಲಿ 50 ಸಾವಿರದಿಂದ 2 ಲಕ್ಷದವರೆಗೆ ಹಾಗೂ ಗಂಭೀರ ಪ್ರಕರಣಗಳಲ್ಲಿ 2ರಿಂದ 5 ಲಕ್ಷದವರೆಗೆ ದಂಡ ವಿಧಿಸುವ ಅವಕಾಶವಿದೆ ಎಂದರು. ಈ ತಿದ್ದುಪಡಿ ಕಾಯ್ದೆ ವೈದ್ಯರು, ನರ್ಸ್ ಗಳು, ಆರೋಗ್ಯ ಕಾರ್ಯಕರ್ತರು ಮತ್ತು ಆಶಾ ಕಾರ್ಯಕರ್ತರಿಗೆ ರಕ್ಷಣೆ ಒದಗಿಸುತ್ತದೆ. ಆರೋಗ್ಯ ರಕ್ಷಣೆಯ ವೃತ್ತಿಪರರಿಗೆ ವಿಮಾ ಸೌಲಭ್ಯ ವಿಸ್ತರಿಸಲಾಗುವುದು ಎಂದರು.