ಬಿಸಿಸಿಐ ಆಯ್ಕೆದಾರರ ಹುದ್ದೆಗೆ ಅರ್ಜಿ ಸಲ್ಲಿಸಿದ ಅಗರ್ಕರ್, ಮೊಂಗಿಯಾ, ಶರ್ಮಾ

ನವದೆಹಲಿ, ಜ 25, ಮಾಜಿ ಆಟಗಾರರರಾದ ಲಕ್ಷ್ಮಣ್ ಶಿವರಾಮಕೃಷ್ಣನ್, ರಾಜೆಶ್ ಚೌವ್ಹಾಣ್ ಮತ್ತು ಮಾಜಿ ಅಮಯ್ ಖುರಾಸಿಯಾ ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಪುರುಷರ ರಾಷ್ಟ್ರೀಯ ತಂಡದ ಆಯ್ಕದಾರರ ಸಮಿತಿಯಲ್ಲಿ ಖಾಲಿ ಇರುವ ಎರಡು ಸ್ಥಾನಗಳಿಗೆ ಅರ್ಜಿ ಹಾಕಿದ ಬೆನ್ನಲ್ಲೆ ಮಾಜಿ ವೇಗಿ ಅಜಿತ್‌ ಅಗರ್ಕರ್ ಸೇರಿದಂತೆ ಇನ್ನಿತರೆ ಮೂವರು ಅರ್ಜಿ ಸಲ್ಲಿಸಿದ್ದಾರೆ.ಕಳೆದ ವಾರ ಪುರುಷರ ವಿಭಾಗದ ಹಿರಿಯರ ಹಾಗೂ ಕಿರಿಯರ ತಂಡಗಳಿಗೆ ಆಯ್ಕೆ ಸಮಿತಿ ಹಾಗೂ ಭಾರತ ಮಹಿಳಾ ಹಿರಿಯರ ತಂಡದ ಆಯ್ಕೆ ಸಮಿತಿಯಲ್ಲಿನ ಆಯ್ಕೆದಾರರ ಹುದ್ದೆಗಳಿಗೆ ಅರ್ಜೆ ಆಹ್ವಾನಿಸಿತ್ತು. ಭಾರತ ತಂಡದ ಮಾಜಿ ಆಟಗಾರರಾದ ಅಜಿತ್ ಅಗರ್ಕರ್, ಚೇತನ್ ಶರ್ಮಾ, ನಯನ್ ಮೊಂಗಿಯಾ ಹಾಗೂ ಅಬೆ ಕುರುವಿಲ್ಲ ಅವರು ಕೂಡ ಆಯ್ಕೆದಾರರ ಸಮಿತಿಗೆ ಅರ್ಜಿ ಹಾಕಿದ್ದಾರೆ. ಒಟ್ಟಾರೆ, ಎರಡು ಹುದ್ದೆಗಳಿಗೆ ಅರ್ಜಿ ಹಾಕಿದವರಲ್ಲಿ ಲಕ್ಷ್ಮಣ್ ಶಿವರಾಮಕೃಷ್ಣನ್ ಅತ್ಯಂತ ಹಿರಿಯರಾಗಿದ್ದಾರೆ. ಅರ್ಜಿ ಹಾಕಿದವರಲ್ಲಿ ಮಾಜಿ ವಿಕೆಟ್ ಕೀಪರ್ ನಯನ್ ಮೊಂಗಿಯಾ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಾಡುವ ಮೂಲಕ ಮುಂಚೂಣಿಯಲ್ಲಿದ್ದಾರೆ. ಅಜಿತ್ ಅಗರ್ಕರ್ 2013ರಲ್ಲಿ ಕ್ರಿಕೆಟ್ ಗೆ ಗುಡ್ ಬೈ ಹೇಳಿದ್ದರು. ಇವರು ಭಾರತದ ಪರ 26 ಟೆಸ್ಟ್ ಹಾಗೂ 191 ಏಕದಿನ ಪಂದ್ಯಗಳಾಡಿದ್ದಾರೆ. ಈ ಹುದ್ದೆಗೆ ಕರ್ನಾಟಕದಿಂದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್ ಕೂಡ ಅರ್ಜಿ ಸಲ್ಲಿಸಿದ್ದಾರೆ.

ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದ ಎಂ.ಎಸ್.ಕೆ ಪ್ರಸಾದ್ ಅವರ ನಾಲ್ಕು ವರ್ಷಗಳ ಅವಧಿಯು ಕಳೆದ ವರ್ಷ ನವೆಂಬರ್ ತಿಂಗಳಿನಲ್ಲಿಯೇ ಅಂತ್ಯವಾಗಿತ್ತು. ಪ್ರಸಾದ್‌ ಹಾಗೂ ರಾಜಸ್ಥಾನದ ಗಗನ್  ಖೋಡಾ (ಕೇಂದ್ರ ವಲಯ) ಅವರ ಸ್ಥಾನಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಇನ್ನುಳಿದಂತೆ ಶರಣ್‌ದೀಪ್ ಸಿಂಗ್ (ಉತ್ತರ ವಲಯ), ಜತಿನ್ ಪರಂಜಿತ್ (ಪಶ್ಚಿಮ ವಲಯ) ಹಾಗೂ ದೇವಾಂಗ್ ಗಾಂಧಿ (ಪೂರ್ವ ವಲಯ) ಇವರು ಇನ್ನೂ ಒಂದು ಆವೃತ್ತಿಗೆ ಮುಂದುವರಿಯಲಿದ್ದಾರೆ.

ಈ ಆಯ್ಕೆ ಸಮಿತಿ ಹದ್ದೆಗೆ ಯಾರು ಸಂದರ್ಶನ ನಡೆಸಲಿದ್ದಾರೆಂಬುದು ಇನ್ನೂ ಸ್ಪಷ್ಟತೆಯಿಲ್ಲ. ಬಿಸಿಸಿಐ ನಿಯಮದ ಪ್ರಕಾರ ಪುರುಷರ ಆಯ್ಕೆ ಸಮಿತಿಗೆ ಅರ್ಹರನ್ನು ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ)ಯೇ ನೇಮಿಸಬೇಕು ಎಂಬ ನೀತಿ ಇದೆ. ಸಿಎಸಿ ಕಳೆದ ನವೆಂಬರ್ ನಲ್ಲಿಯೇ ನಿಷ್ಕ್ರಿಯಗೊಂಡಿದ್ದು, ಇನ್ನೂ ರಚನೆಯಾಗಿಲ್ಲ.ಭಾರತದ ಅತಿ ಹೆಚ್ಚು ಟೆಸ್ಟ್ ಪಂದ್ಯಗಳಾಡಿರುವ ಮಾಜಿ ಆಟಗಾರನನ್ನು ಆಯ್ಕೆ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ಆಯ್ಕೆ ಮಾಡಬೇಕು ಎಂದು ಬಿಸಿಸಿಐ ನಿಯಮ ಹೇಳುತ್ತದೆ. ಪುರುಷರ ಹಿರಿಯರತಂಡದ ಆಯ್ಕೆದಾರ ಹುದ್ದೆಗೆ ಅರ್ಜಿ ಸಲ್ಲಿಸಲು ಕನಿಷ್ಠ 7 ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯ ಅಥವಾ 30 ಪ್ರಥಮ ದರ್ಜೆ ಪಂದ್ಯಗಳು ಅಥವಾ 10 ಏಕದಿನ ಹಾಗೂ 20 ಪ್ರಥಮ ದರ್ಜೆ ಪಂದ್ಯಗಳಾಡಿರಬೇಕು. ಮಹಿಳಾ ಹಿರಿಯರ ಆಯ್ಕೆದಾರ ಹುದ್ದೆಗೆ ರಾಷ್ಟ್ರೀಯ ಮಹಿಳಾ ತಂಡವನ್ನು ಪ್ರತಿನಿಧಿಸಿರಬೇಕು.ಪುರುಷರ ಕಿರಿಯರ ತಂಡದ ಆಯ್ಕೆದಾರ ಹುದ್ದೆಗೆ ಅರ್ಜಿ ಸಲ್ಲಿಸುವವರು ಕನಿಷ್ಠ 25 ಪ್ರಥಮ ದರ್ಜೆ ಪಂದ್ಯಗಳಾಡಿರಬೇಕು.