ಲಕ್ನೋ, ನವೆಂಬರ್ 9 : ಸ್ವತಂತ್ರ ಭಾರತದ ಅತ್ಯಂತ ಹಳೆಯ ಮತ್ತು ವಿವಾದಾಸ್ಪದ ವಿಷಯಗಳಲ್ಲಿ ಒಂದಾದ ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ-ಬಾಬರಿ ಮಸೀದಿ ಜಮೀನು ವಿವಾದದ ತೀಪು ಶನಿವಾರ ಪ್ರಕಟಗೊಂಡ ಬಳಿಕ ಡಿಸೆಂಬರ್ 6,1992 ರಂದು ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ ಮತ್ತೊಂದು ಪ್ರಕರಣದ ತೀಪು ಕೂಡ ಶೀಘ್ರದಲ್ಲೇ ನಿರೀಕ್ಷಿಸಲಾಗಿದೆ. ಎರಡನೆಯ ಪ್ರಕರಣವು ಡಿಸೆಂಬರ್ 6, 1992 ರಂದು ಬಾಬರಿ ಮಸೀದಿಯನ್ನು ಉರುಳಿಸಿದ ಮತ್ತು ಅದರ ಹಿಂದಿನ ಕ್ರಿಮಿನಲ್ ಪಿತೂರಿಗೆ ನೇರವಾಗಿ ಸಂಬಂಧಿಸಿದೆ. ಆಗಾಗ್ಗೆ ಹಳಿ ತಪ್ಪಿದ 27 ವರ್ಷಗಳ ತನಿಖೆ ಮತ್ತು ವಿಚಾರಣೆಯ ನಂತರ, ಈ ವಿಷಯವು ಅಂತಿಮವಾಗಿ ಲಕ್ನೋದ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ವಿಚಾರಣೆಯ ಮುಕ್ತಾಯದ ಹಂತವನ್ನು ತಲುಪಿದೆ. 49 ಆರೋಪಿಗಳ ವಿರುದ್ಧ ಈ ಪ್ರಕರಣವನ್ನು ದಾಖಲಿಸಲಾಗಿದ್ದು, ಇದರಲ್ಲಿ ಹಲವಾರು ಮಂದಿ ಈಗಾಗಲೇ ಮೃತಪಟ್ಟಿದ್ದಾರೆ. ಇನ್ನು ಕೆಲವರು ಭಾರತೀಯ ರಾಜಕಾರಣದ ಕೆಲವು ಉನ್ನತ ಹುದ್ದೆಗಳಲ್ಲಿದ್ದಾರೆ. ಅವರಲ್ಲಿ ಮಾಜಿ ಉಪ ಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿ, ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಕೆಲವು ಮಾಜಿ ಕ್ಯಾಬಿನೆಟ್ ಮಂತ್ರಿಗಳು , ಮತ್ತು ಕೆಲವು ಸಂಸತ್ತಿನ ಸದಸ್ಯರು ಕೂಡ ಸೇರಿದ್ದಾರೆ. 1992 ರ ಡಿಸೆಂಬರ್ 6 ರಂದು ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ ಕೆಲವೇ ನಿಮಿಷಗಳಲ್ಲಿ, ಮೊದಲ ಎಫ್ಐಆರ್ ದಾಖಲಿಸಲಾಗಿತ್ತು. ಅಪರಿಚಿತ ಕರಸೇವಕರ ವಿರುದ್ಧ ಅಂದು ಸಂಜೆ ಸಂಜೆ 5.15 ಕ್ಕೆ ಐಪಿಸಿ ಸೆಕ್ಷನ್ 395, 397, 332, 337,338,295,297, 153 ಎ, ಮತ್ತು ಅಪರಾಧ ಕಾನೂನು ತಿದ್ದುಪಡಿ ಕಾಯ್ದೆಯ ಸೆಕ್ಷನ್ 7 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.