ಶ್ರೀನಗರ, ಫೆ 10 ಸಂಸತ್ ಭವನದ ಮೇಲಿನ ದಾಳಿ ಘಟನೆಯ ಅಪರಾಧಿ ಅಫ್ಜಜ್ ಗುರು ನನ್ನು ಗಲ್ಲಿಗೇರಿಸಿ ಏಳು ವರ್ಷವಾದ ಹಿನ್ನೆಲೆಯಲ್ಲಿ ಪ್ರತ್ಯೇಕತಾವಾದಿ ಸಂಘಟನೆಗಳು ಕರೆ ನೀಡಿದ್ದ ದಿನವಿಡೀ ಮುಷ್ಕರದ ನಂತರ ಕಾಶ್ಮೀರ ಕಣಿವೆಯಲ್ಲಿ ಸೋಮವಾರ ಜನ-ಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ.ಅಫ್ಜಲ್ ಗುರುನನ್ನು 2013 ರ ಇದೇ ದಿನ ದೆಹಲಿಯ ತಿಹಾರ್ ಜೈಲಿನಲ್ಲಿ ಗಲ್ಲಿಗೇರಿಸಲಾಗಿತ್ತು.ಕಾನೂನು ಸುವ್ಯವಸ್ಥೆ ಕಾಪಾಡಲು ಕಣಿವೆಯ ಸೂಕ್ಷ್ಮ ಸ್ಥಳಗಳಲ್ಲಿ ಭದ್ರತಾ ಪಡೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಅಂಗಡಿಗಳು ಮತ್ತು ವಾಣಿಜ್ಯ ಮುಂಗಟ್ಟುಗಳು ಮತ್ತೆ ತೆರೆದಿವೆ. ಬೇಸಿಗೆ ರಾಜಧಾನಿ, ಶ್ರೀನಗರ ಮತ್ತು ಕಣಿವೆಯ ಇತರ ಭಾಗಗಳಲ್ಲಿ ವಾಹನ ಸಂಚಾರ ಸಾಮಾನ್ಯವಾಗಿದೆ. ಕಣಿವೆಯಲ್ಲಿ ಭಾನುವಾರ ಭದ್ರತಾ ಕಾರಣಗಳಿಗಾಗಿ ಸ್ಥಗಿತಗೊಂಡಿದ್ದ ರೈಲು ಸೇವೆ ಸೋಮವಾರ ಪುನರಾರಂಭವಾಗಿದೆ.ಹರಿ ಸಿಂಗ್ ಹೈ ಸ್ಟ್ರೀಟ್ (ಎಚ್‌ಎಸ್‌ಎಚ್‌ಎಸ್), ಬತ್ ಮಲೂ, ದಲ್ ಗೇಟ್, ರೀಗಲ್ ಚೌಕ್, ಮೌಲಾನಾ ಆಜಾದ್ ರಸ್ತೆ, ರೆಸಿಡೆನ್ಸಿ ರಸ್ತೆ, ಮಹಾರಾಜ್ ಬಜಾರ್ ಮತ್ತು ನಗರದ ಹೃದಯ ಭಾಗವಾದ ಲಾಲ್ ಚೌಕ್‌ನ ಪ್ರಮುಖ ವ್ಯಾಪಾರ ಕೇಂದ್ರಗಳಲ್ಲಿ ಸೋಮವಾರ ಮುಂಜಾನೆ ವ್ಯಾಪಾರ ಚಟುವಟಿಕೆಗಳು ಪುನರಾರಂಭಗೊಂಡಿವೆ.ಆದರೂ, ಯಾವುದೇ ಅಹಿತಕರ ಘಟನೆಗಳನ್ನು ತಡೆಯಲು ನಗರದಲ್ಲಿ ಹೆಚ್ಚಿನ ಸಂಖ್ಯೆಯ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ದಕ್ಷಿಣ ಕಾಶ್ಮೀರದ ಅನಂತ್‌ನಾಗ್, ಕುಲ್ಗಾಮ್, ಶೋಪಿಯಾನ್ ಮತ್ತು ಪುಲ್ವಾಮಾ ಸೇರಿದಂತೆ ಕಣಿವೆಯ ಇತರ ಭಾಗಗಳಿಂದ ಸಾಮಾನ್ಯ ಪರಿಸ್ಥಿತಿಯ ವರದಿಗಳು ಬರುತ್ತಿವೆ. ಈ ಪ್ರದೇಶದಲ್ಲಿ ವ್ಯಾಪಾರ ಮತ್ತು ಇತರ ಚಟುವಟಿಕೆಗಳು ಸೋಮವಾರ ಪುನರಾರಂಭಗೊಂಡಿವೆ. ಭಾನುವಾರ ಈ ಭಾಗಗಳಲ್ಲಿ ವಾಣಿಜ್ಯ ಚಟುವಟಿಕೆಗಳು ಸ್ಥಗಿತಗೊಂಡಿದ್ದವು.ಇಂತಹುದೇ ವರದಿಗಳು ಉತ್ತರ ಕಾಶ್ಮೀರದ ಕುಪ್ವಾರಾ ಮತ್ತು ಬಂಡಿಪೋರಾ ವರದಿಗಳು ಬರುತ್ತಿವೆ. ದಿನವಿಡೀ ಮುಷ್ಕರದ ನಂತರ ಮಧ್ಯ ಕಾಶ್ಮೀರದ ಬಡ್ಗಾಮ್ ಮತ್ತು ಗಂದರ್ ಬಾಲ್ ನಲ್ಲಿ ಜನ-ಜೀವನ ಸಾಮಾನ್ಯ ಸ್ಥಿತಿಗೆ ಮರಳಿದೆ.