ರಾಜ್ಯದಲ್ಲಿ ಇನ್ನೂ 15 ದಿನಗಳ ಕಾಲ ಲಾಕ್‌ಡೌನ್‌ ವಿಸ್ತರಣೆಗೆ ಸಚಿವ ಸಂಪುಟದಲ್ಲಿ ಸಲಹೆ; ಪ್ರಧಾನಿ ಜತೆ ಚರ್ಚಿಸಿ ತೀರ್ಮಾನ- ಮುಖ್ಯಮಂತ್ರಿ

ಬೆಂಗಳೂರು,  ಏ.9,ರಾಜ್ಯದಲ್ಲಿ ಇನ್ನು ಹದಿನೈದು  ದಿನಗಳ ಲಾಕ್‌ ಡೌನ್‌ ವಿಸ್ತರಣೆಗೆ ಸಲಹೆ  ಕೇಳಿ ಬಂದಿದ್ದು ಪ್ರಧಾನಿ‌ ಜೊತೆ ಚರ್ಚಿಸಿದ ಬಳಿಕ ಮುಂದಿನ‌ ತೀರ್ಮಾನ ಕೈಗೊಳ್ಳಲು ಸಚಿವ  ಸಂಪುಟದಲ್ಲಿ ನಿರ್ಧರಿಸಲಾಗಿದೆ.ಸಚಿವ ಸಂಪುಟ ಸಭೆ ಬಳಿಕ‌ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ,ಲಾಕ್‌ ಡೌನ್‌ ವಿಸ್ತರಿಸಲು ಸಂಪುಟದ ಎಲ್ಲ ಸದಸ್ಯರು ಒತ್ತಾಯ ಮಾಡಿದ್ದು ಪ್ರಧಾನಿ ಜತೆ ನಾಳೆ  ಚರ್ಚಿಸಿದ ಬಳಿಕ‌ ತೀರ್ಮಾನಿಸಲಾಗುವುದು. ಲಾಕ್‌ ಡೌನ್‌ ಸಂದರ್ಭದಲ್ಲಿ ಜನತೆ ಮನೆಯಿಂದ ಹೊರ  ಬರದೆ ಜತೆ ಸಹಕರಿಸಬೇಕು. ಇದನ್ನು ಉಲ್ಲಂಘಿಸುವವರ ವಿರುದ್ಧ ಸರ್ಕಾರ ಕಠಿಣ ಕ್ರಮ  ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಬೆಂಗಳೂರಿನಲ್ಲಿ ಲಾಕ್‌ ಡೌನ್‌ ಉಲ್ಲಂಘಿಸಿದವರ ಸುಮಾರು 10 ಸಾವಿರ  ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜನತೆ ಪರಿಸ್ಥಿತಿಯನ್ನು ಅರ್ಥ  ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಮತ್ತಷ್ಟು ಕಠಿಣ ತೀರ್ಮಾನ  ಕೈಗೊಳ್ಳುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.ಸಂಕಷ್ಟದಲ್ಲಿರುವ ಹೂವು ಬೆಳೆಗಾರರಿಗೆ ಸೂಕ್ತ ಪರಿಹಾರ ನೀಡುವ ಸಂಬಂಧ ಸಮೀಕ್ಷೆ ನಡೆಸಲು, ರಾಜ್ಯದ  ಎಲ್ಲ ಜಿಲ್ಲಾಧಿಕಾರಿಗಳ ಜತೆ ಚರ್ಚೆ ಮಾಡಲಾಗಿದೆ. ಬಿತ್ತನೆ ಬೀಜ, ರಸಗೊಬ್ಬರ  ಕೊರತೆಯಾಗದಂತೆ ಎಚ್ಚರ ವಹಿಸಲಾಗಿದೆ. ಮಳೆ ಆರಂಭವಾಗಿರುವುದರಿಂದ ರೈತರಿಗೆ ಯಾವುದೇ  ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಹೂವು ಬೆಳೆಗಾರರಿಗೆ ಸೂಕ್ತ ಪರಿಹಾರ  ನೀಡುವುದಾಗಿ ಯಡಿಯೂರಪ್ಪ ಸ್ಪಷ್ಟಪಡಿಸಿದರು.ಕಾನೂನು ಮತ್ತು ವ್ಯವಹಾರಗಳ ಸಚಿವ ಮಾಧುಸ್ವಾಮಿ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿ,ಶಾಸಕರು,  ಸಚಿವರ ಸಂಬಳದಲ್ಲಿ ಶೇಕಡಾ 30ರಷ್ಟು ಕಡಿತಗೊಳಿಸಿ 15.36 ಕೋಟಿಯಷ್ಟು ಹಣವನ್ನು ಕೋವಿಡ್  ಪರಿಹಾರ ನಿಧಿಗೆ ವರ್ಗಾಯಿಸಲು ಸುಗ್ರೀವಾಜ್ಞೆ ಮೂಲಕ‌ ಆದೇಶ ಹೊರಡಿಸಲು ರಾಜ್ಯ ಸಚಿವ  ಸಂಪುಟ ಒಪ್ಪಿಗೆ ಸೂಚಿಸಿದೆ. ಇಂದು ನಡೆದ ತುರ್ತು ಸಚಿವ ಸಂಪುಟ ಸಭೆಯಲ್ಲಿ
ಜಿಎಸ್  ಟಿ ತೆರಿಗೆ ಪಾವತಿಗೆ ಜೂನ್ ತಿಂಗಳವರೆಗೆ ಕಾಲಾವಕಾಶ, ಕುಡಿಯುವ ನೀರಿಗಾಗಿ 49  ಬರಪೀಡಿತ ತಾಲೂಕುಗಳಿಗೆ ತಲಾ 1ಕೋಟಿ ಹಾಗೂ ಗ್ರಾಮೀಣ ಪಟ್ಟಣ ಪಂಚಾಯಿತಿಗಳಿಗೆ 50 ಲಕ್ಷ  ರೂ ಬಿಡುಗಡೆ ಸೇರಿದಂತೆ ಇನ್ನು ಕೆಲವು ಮಹತ್ತರ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ ಎಂದರು.94 ಎ ಅಡಿ ಭೂಮಿ ಅಕ್ರಮ ಸಕ್ರಮ ಅರ್ಜಿ ಇತ್ಯರ್ಥ ಆಗುವ ತನಕ ಪ್ರಕರಣ ದಾಖಲಿಸದಿರಲು ಸಂಪುಟ ತೀರ್ಮಾನಿಸಿರುವುದಾಗಿ ಸಚಿವರು ತಿಳಿಸಿದರು.