ಮರುಭೂಮೀಕರಣ ತಡೆಗೆ ಸಾವಯವ ಕೃಷಿ ಅಳವಡಿಸಿಕೊಳ್ಳಿ: ಎಚ್‌.ಡಿ. ಕೋಳೇಕರ

ಮರುಭೂಮೀಕರಣ ತಡೆಗೆ ಸಾವಯವ ಕೃಷಿ ಅಳವಡಿಸಿಕೊಳ್ಳಿ: ಎಚ್‌.ಡಿ. ಕೋಳೇಕರ Adopt organic farming to prevent desertification: H.D. Kolekar

ಲೋಕದರ್ಶನ ವರದಿ 

ಚಿಕ್ಕೋಡಿ  18: ಹವಾಮಾನ ವೈಪರೀತ್ಯ, ಅತಿಯಾದ ರಾಸಾಯನಿಕ ಬಳಕೆ ಮತ್ತು ಪರಿಸರ ಹಾನಿಯಿಂದ ಮಣ್ಣಿನ ಫಲವತ್ತತೆ ಕುಸಿಯುತ್ತಿದ್ದು, ಮರುಭೂಮೀಕರಣ ಹಾಗೂ ಬರದಂತಹ ಗಂಭೀರ ಸಮಸ್ಯೆಗಳು ಹೆಚ್ಚುತ್ತಿವೆ. ಇಂತಹ ಸವಾಲುಗಳನ್ನು ಎದುರಿಸಲು ರೈತರು ಸಾವಯವ ಹಾಗೂ ನೈಸರ್ಗಿಕ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಮಣ್ಣಿನ ಆರೋಗ್ಯವನ್ನು ಕಾಪಾಡಬೇಕು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಎಚ್‌.ಡಿ. ಕೋಳೇಕರ ಹೇಳಿದರು.ಚಿಕ್ಕೋಡಿ ತಾಲೂಕಿನ ಕೋಥಳಿ-ಕುಪ್ಪಾಣವಾಡಿ ಗ್ರಾಮದ ಶ್ರೀ ದೇಶಭೂಷಣ ಪ್ರಾಥಮಿಕ ಶಾಲೆಯಲ್ಲಿ ಕೃಷಿ ಇಲಾಖೆ ಹಾಗೂ ಕೃಷಿ ವಿಜ್ಞಾನ ಕೇಂದ್ರ, ಮತ್ತಿಕೊಪ್ಪ ಇವರ ಸಹಯೋಗದಲ್ಲಿ  ವಿಶ್ವ ಮರುಭೂಮೀಕರಣ ಮತ್ತು ಬರ ಎದುರಿಸುವ ದಿನಾಚರಣೆ ಹಾಗೂ "ಖೇತ್ ಬಚಾವೋ" ಅಭಿಯಾನ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಉತ್ತಮ ಆರೋಗ್ಯ, ಸುಸ್ಥಿರ ಕೃಷಿ ಹಾಗೂ ಪರಿಸರ ಸಂರಕ್ಷಣೆಗೆ ಸಾವಯವ ಮತ್ತು ನೈಸರ್ಗಿಕ ಕೃಷಿಯೇ ಪರ್ಯಾಯ ಮಾರ್ಗವಾಗಿದೆ. ರೈತರು ಸಮತೋಲಿತ ಗೊಬ್ಬರ ಬಳಕೆ, ಮಣ್ಣಿನ ಪರೀಕ್ಷೆ ಹಾಗೂ ನೀರಿನ ಸಮರ​‍್ಕ ನಿರ್ವಹಣೆಯ ಮೂಲಕ ಕೃಷಿ ಉತ್ಪಾದನೆ ಹೆಚ್ಚಿಸಬೇಕು. ಭೂಮಿಯ ಫಲವತ್ತತೆ ಉಳಿದಾಗ ಮಾತ್ರ ಮುಂದಿನ ಪೀಳಿಗೆಗೆ ಆರೋಗ್ಯಕರ ಪರಿಸರವನ್ನು ನೀಡಲು ಸಾಧ್ಯ ಎಂದು ಅವರು ತಿಳಿಸಿದರು.ಗ್ರಾಮೀಣ ಪ್ರದೇಶಗಳಲ್ಲಿ ಜಲಸಂರಕ್ಷಣೆ, ಮಣ್ಣಿನ ಸಂರಕ್ಷಣೆ ಹಾಗೂ ಜೀವನಮಟ್ಟ ಸುಧಾರಣೆಗೆ ಪರಿಣಾಮಕಾರಿ ಕೆಲಸಗಳು ನಡೆಯುತ್ತಿವೆ. ರೈತರು ಇಲಾಖೆಯ ವಿವಿಧ ಯೋಜನೆಗಳ ಸದುಪಯೋಗ ಪಡೆದು ಕೃಷಿಯನ್ನು ಲಾಭದಾಯಕವಾಗಿಸಿಕೊಳ್ಳಬೇಕು ಎಂದು ಕರೆ ನೀಡಿದರು. 

ಇದಕ್ಕೂ ಮುನ್ನ ಕಾರ್ಯಕ್ರಮವನ್ನು ಗಿಡ ನೆಡುವ ಮೂಲಕ ಉದ್ಘಾಟಿಸಲಾಯಿತು. ಉಪ ಕೃಷಿ ನಿರ್ದೇಶಕ ಸಹದೇವ ಯರಗೊಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ಮಾನವನ ಅತಿಯಾದ ಚಟುವಟಿಕೆಗಳಿಂದ ಪರಿಸರದಲ್ಲಿ ಅಸಮತೋಲನ ಉಂಟಾಗುತ್ತಿದ್ದು, ಮರುಭೂಮೀಕರಣ ಮತ್ತು ಬರದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಎಲ್ಲರೂ ಗಿಡಗಳನ್ನು ಬೆಳೆಸಿ ಪ್ರಕೃತಿ ಉಳಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಜಿತೇಂದ್ರ ಪಾಟೀಲ, ರತ್ನವ್ವಾ ಕುಂಬಾರ, ಸುನೀಲ ಗೊಟುರೆ, ಅಜಿತ್ ಕಣಗಲೆ, ಜಾವೇದ್ ಜಮಾದಾರ್, ಕೃಷಿ ಅಧಿಕಾರಿಗಳಾದ ಶಂಕರ ಚರಾಟೆ, ಪ್ರಶಾಂತ ಹುಲಿಮನಿ, ಸದಾಶಿವ ಮಂಚದ, ಆತ್ಮ ಸಿಬ್ಬಂದಿ ಅನುಪಮಾ ಮಹಾಜನ್ ಹಾಗೂ ರೈತರು ಭಾಗವಹಿಸಿದ್ದರು.