ವೀರ ಗಣಾಚಾರಿ ಮಡಿವಾಳ ಮಾಚಿದೇವರ ತತ್ವಾದರ್ಶ ಅಳವಡಿಸಿಕೊಳ್ಳಿ: ತಹಶೀಲ್ದಾರ್ ಸಿಂದಗಿ
ದೇವರಹಿಪ್ಪರಗಿ, 01: 12ನೇ ಶತಮಾನದ ವೀರ ಗಣಾಚಾರಿ ಮಡಿವಾಳ ಮಾಚಿದೇವ ಆದ್ಯ ವಚನಕಾರ. ಅವರೊಬ್ಬ ವಚನಗಳ ಸಂರಕ್ಷಕ. ಇಂತಹ ಮಹಾನ್ ವ್ಯಕ್ತಿಗಳ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು’ ಎಂದು ತಹಶೀಲ್ದಾರ್ ಪ್ರಕಾಶ ಸಿಂದಗಿ ಅವರು ಹೇಳಿದರು.
ಪಟ್ಟಣದ ತಹಶೀಲ್ದಾರ್ ಕಚೇರಿ ಸಭಾಭವನದಲ್ಲಿ ಶನಿವಾರದಂದು ತಾಲೂಕು ಆಡಳಿತ ಹಾಗೂ ಸಮುದಾಯದ ಮುಖಂಡರ ವತಿಯಿಂದ ಮಡಿವಾಳ ಮಾಚಿದೇವರ ಜಯಂತಿಯ ಅಂಗವಾಗಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಡಿವಾಳ ಮಾಚಿದೇವರ ಜನ್ಮಸ್ಥಳದಲ್ಲಿ ಜಯಂತಿ ಆಚರಿಸುವ ಮೂಲಕ ಅವರ ಎಲ್ಲಾ ವಚನಗಳನ್ನು ಓದಲು ಆಗದಿದ್ದರೂ ಅವರ ನಾಲ್ಕು ವಚನಗಳನ್ನಾದರೂ ಓದಿ ಅರಿತುಕೊಂಡರೆ ಅವರ ಜಯಂತಿ ಆಚರಿಸಿದ್ದು ಸಾರ್ಥಕವಾಗುತ್ತದೆ. ಶರಣರನ್ನು ಜಾತಿಗೆ ಸೀಮಿತಗೊಳಿಸದೆ ಅವರ ತತ್ವ ಆದರ್ಶಗಳನ್ನು ಯುವ ಪೀಳಿಗೆ ಜೀವನದಲ್ಲಿ ಅಳವಡಿಸಿಕೊಂಡಾಗ ಕಾಯಕದ ಮಹತ್ವ ಗೊತ್ತಾಗುತ್ತದೆ ಎಂದು ಹೇಳಿದರು.ನಂತರ ಮಡಿವಾಳ ಮಾಚಿದೇವರ ಫೋಟೋ ಪ್ರತಿಮೆಗೆ ಮಾಲಾರೆ್ಣ ಮಾಡಿ ಗೌರವ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಅರುಣ ಕೋರವಾರ ಅವರು ಮಾತನಾಡಿ, ‘ಬಸವಣ್ಣನವರ 770 ಅಮರಂಗಣಗಳಲ್ಲಿ ಮಡಿವಾಳ ಮಾಚಿದೇವರಿಗೆ ತಂದೆ ಎಂದು ಕರೆಯುತ್ತಿದ್ಧರು. ಇವರು ಸಕಲ ಜೀವಾತ್ಮರಿಗೆ ಲೇಸನ್ನೆ ಬಯಸಿದ್ದರು. ಮಾನವರು ಎಲ್ಲರೂ ಒಂದೇ ಎಂದು ಅಂದಿನ ಶರಣರು ತಮ್ಮ ವಚನಗಳ ಮೂಲಕ ಸಾರಿ ಸಾಮಾಜಿಕ ಸಮಾನತೆಗಾಗಿ ಕಲ್ಯಾಣದಲ್ಲಿ ಕ್ರಾಂತಿಯನ್ನೆ ಮಾಡಿದ್ದರು’ ಎಂದು ಶರಣ ಮಾಚಿದೇವರ ಕುರಿತು ಉಪನ್ಯಾಸ ನೀಡಿದರು.ಇದೇ ಸಂದರ್ಭದಲ್ಲಿ ಕಂದಾಯ ಇಲಾಖೆಯ ಸಂಗಮೇಶ ಗ್ವಾಳೆದ, ಕುಮಾರ ಅವರಾದಿ,ಕಿಶೋರ್ ರಾಠೋಡ, ಸಂತೋಷ ತಳವಾರ, ವಿಠ್ಠಲ ವಾಲಿಕಾರ, ಆಕಾಶ ಮೇತ್ರಿ, ಚನ್ನಬಸು ಹೊಸಮನಿ, ರಾಜು ಕಿಣಗಿ, ಸಂತೋಷ ಹೊಟಗಾರ ಸೇರಿದಂತೆ ಪಟ್ಟಣದ ಪ್ರಮುಖರು, ಗಣ್ಯರು, ಸಮುದಾಯದ ಮುಖಂಡರು ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಕಂದಾಯ ಶಿರಸ್ತೇದಾರ ಸುರೇಶ ಮ್ಯಾಗೇರಿ ಸ್ವಾಗತಿಸಿ, ವಂದಿಸಿದರು.